ನವದೆಹಲಿ, 13 ಯಾವುದೇ ಬೌಲಿಂಗ್ ಘಟಕವನ್ನು ಕೆಡವಬಲ್ಲ ಸಾಕಷ್ಟು ಪವರ್ ಹಿಟ್ಟರ್‌ಗಳನ್ನು ವೆಸ್ಟ್ ಇಂಡೀಸ್ ಹೊಂದಿದೆ. ಹಾಗಾಗಿ, ಕೆರಿಬಿಯನ್ನರ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆಯಿದೆ ಎಂದು ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಹಣಾಹಣಿಯು ಚೆನ್ನೈನಲ್ಲಿ ಭಾನುವಾರ ನಡೆಯಲಿದೆ. ವೆಸ್ಟ್ ಇಂಡೀಸ್ ತಂಡದಲ್ಲಿ ಬಲಿಷ್ಟ ಹೊಡೆತದ ಬ್ಯಾಟಿಂಗ್ ವಿಭಾಗ ಇರುವುದರಿಂದ ಟೀಮ್ ಇಂಡಿಯಾ ಬೌಲರ್‌ಗಳು ಬಹಳ ಎಚ್ಚರಿಕೆಯಿಂದ ಆಡಬೇಕಾದ ಅಗತ್ಯವಿದೆ."ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಬೌಲಿಂಗ್ ವಿಭಾಗದ ಪ್ರದರ್ಶನವನ್ನು ನೋಡಲು ಇಷ್ಟಪಡುತ್ತೇನೆ. ಏಕೆಂದರೆ, ಎದುರಾಳಿ ತಂಡದಲ್ಲಿ ಬಲಿಷ್ಟ ಬ್ಯಾಟಿಂಗ್ ವಿಭಾಗವಿದೆ. ವಿಶ್ವದ ಯಾವುದೇ ಬೌಲಿಂಗ್ ವಿಭಾಗವನ್ನು ದಂಡಿಸುವ ಸಾಮರ್ಥ್ಯ ಪ್ರವಾಸಿ ತಂಡಕ್ಕಿದೆ," ಎಂದು ಭಾರತ ತಂಡದ ಮಾಜಿ ಲೆಗ್ ಸ್ಪಿನ್ನರ್ ಕುಂಬ್ಳೆ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.ಇದೇ ವೇಳೆ ಬ್ಯಾಟಿಂಗ್ ನಾಲ್ಕನೇ ಕ್ರಮಾಂಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶ್ರೇಯಸ್ ಅಯ್ಯರ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಸಲಹೆ ನೀಡಿದರು. ಮುಂಬೈ ಬ್ಯಾಟ್ಸ್‌ಮನ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಕಳೆದ ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ್ದಾರೆ. ಹಾಗಾಗಿ, ಅವರು ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ," ಎಂದು ಹೇಳಿದರು.ಶ್ರೇಯಸ್ ಅಯ್ಯರ್ ಕಳೆದ ಸೀಮಿತ ಓವರ್‌ಗಳ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ 71 ಮತ್ತು 69 ರನ್ ಕ್ರಮವಾಗಿ ಗಳಿಸಿದ್ದರು. ಕೆರಿಬಿಯನ್ ನಾಡಿನಲ್ಲಿ ಭಾರತದ ಸರಣಿ ಜಯಕ್ಕೆ ಪ್ರಧಾನ ಪಾತ್ರ ವಹಿಸಿದ್ದರು.ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಜಯ ಸಾಧಿಸಿತ್ತು. ಈ ಮೂರೂ ಪಂದ್ಯಗಳಲ್ಲಿ ಅಯ್ಯರ್ 22, 24* ಹಾಗೂ 62 ರನ್ ಕ್ರಮವಾಗಿ ಬಾರಿಸಿದ್ದರು.ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಚುಟುಕು ಸರಣಿಯಲ್ಲಿ ಅಯ್ಯರ್ ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ.