ವಿಶೇಷ ತರಬೇತಿ ಶಿಬಿರ
ಗದಗ 24: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರವು ಶನಿವಾರ ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್ ಲಿ., ಗದಗ ಮಕಾನಗಲ್ಲಿ. ಗದಗ ಇದರ ಸಭಾಭವನದಲ್ಲಿ ಜರುಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಮೋಹನ ಟಿ. ಕೋಟಿ ಅಧ್ಯಕ್ಷರು, ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್ ಲಿ., ಗದಗರವರು ಸಹಕಾರ ಜ್ಯೋತಿ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ ಕರ್ನಾಟಕದ ಸಹಕಾರವು ಚಳವಳಿಯಲ್ಲಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿದ್ದು, ಅಂದಾಜು 47 ಸಾವಿರ ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಹಕಾರ ಚಳುವಳಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಸಂಸ್ಥೆಗಳಲ್ಲಿ ಇಂದು ಪಟ್ಟಣ ಸಹಕಾರ ಬ್ಯಾಂಕುಗಳು ಅಗ್ರಸ್ಥಾನದಲ್ಲಿವೆ. ಪಟ್ಟಣ ಸಹಕಾರ ಬ್ಯಾಂಕುಗಳ ವಲಯ ಪಟ್ಟಣ ಪ್ರದೇಶದ ಜನರಿಗೆ ಆರ್ಥಿಕವಾಗಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದು, ಪಟ್ಟಣ ಪ್ರದೇಶದ ಜನರಿಗೆ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿ ಪೋಷಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ, ಇವುಗಳ ಮೂಲ ಆಶಯ ಪಟ್ಟಣ, ನಗರ ಪ್ರದೇಶದ ಆರ್ಥಿಕವಾಗಿ ಅಬಲರಾದ ಜನರಿಗೆ ಹಣಕಾಸಿನ ನೆರವನ್ನು ನೀಡುವುದಾಗಿದೆ. ಪಟ್ಟಣ ಸಹಕಾರ ಬ್ಯಾಂಕುಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು ಈ ಕುರಿತು ಇಂದಿನ ವಿಷಯ ತಜ್ಞರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುವು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಮರ್ಚಂಟ್ಸ್ ಅರ್ಬನ್ ಕೋ-ಆಪ್ ಬ್ಯಾಂಕಿನ ಅಧ್ಯಕ್ಷರಾದ ಕೆ. ಎಸ್. ಚಟ್ಟಿ ರವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ವಾಣಿಜ್ಯ ಬ್ಯಾಂಕುಗಳಿಗೆ ಹೊಲಿಸಿದರೆ, ಪಟ್ಟಣ ಸಹಕಾರ ಬ್ಯಾಂಕುಗಳು ಗಾತ್ರದಲ್ಲಿ ಬಹಳ ಚಿಕ್ಕವು, ವಾಣಿಜ್ಯ ಬ್ಯಾಂಕುಗಳ ಮೇಲೆ ಇರುವಷ್ಟು ನಂಬಿಕೆ ಪಟ್ಟಣ ಸಹಕಾರ ಬ್ಯಾಂಕುಗಳ ಮೇಲೆ ಇರುವುದಿಲ್ಲ. ಅದರಲ್ಲೂ ಸಣ್ಣ ಗಾತ್ರದ ಬ್ಯಾಂಕುಗಳಲ್ಲಿ ಠೇವಣಿ ಹೂಡುವಾಗ ಕೊಡುವ ಬಡ್ಡಿದರ, ನಂಬಿಕೆ ಹೆಚ್ಚು ಕೆಲಸ ಮಾಡುತ್ತದೆ, ನಂಬಿಕೆಯ ಅಸ್ಥಿತ್ವವನ್ನೆ ಅಲ್ಲಾಡಿಸುವ ಘಟನೆಗಳು ನಡೆದಾಗ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಬ್ಯಾಂಕುಗಳ ಮೇಲೆ ಅದರ ಋಣಾತ್ಮಕ ಪರಿಣಾಮ ಆಗುತ್ತದೆ, ಈ ಸಮಸ್ಯೆಗಳ ಕುರಿತು ಗಂಭೀರ ಚಿಂತನೆ ಮಾಡುವುದು ಸಹಕಾರಿಗಳಲ್ಲಿ ಅಗತ್ಯವಿದೆ. ಮಾಧ್ಯಮಗಳಲ್ಲಿ ಸಹಕಾರ ವ್ಯವಸ್ಥೆಯ ಬಗ್ಗೆ ಧನಾತ್ಮಕವಾದ ಪ್ರಚಾರ ವ್ಯವಸ್ಥೆಯಾಗಬೇಕು. ಜನರ ನಂಬಿಕೆ, ಪ್ರೀತಿ, ವಿಶ್ವಾಸ ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾದರೆ ಮಾತ್ರ ಪ್ರಗತಿ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸಹಕಾರ ಯೂನಿಯನ್‌ದ ನಿರ್ದೇಶಕರಾದ ಎಸ್. ಕೆ. ಕುರಡಗಿ ವಹಿಸಿ ಮಾತನಾಡುತ್ತಾ ಜನತೆಗೆ ಬ್ಯಾಂಕುಗಳಿಗೆ ವಿಧಿಸುವ ಆದಾಯ ತೆರಿಗೆಯೂ ಸಹ ಬ್ಯಾಂಕಿನ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದು, ಈ ಕುರಿತು ಸಹಕಾರಿಗಳು ಹಾಗೂ ಸರ್ಕಾರ ಚಿಂತನ-ಮಂಥನ ನಡೆಸಬೇಕಾಗಿದೆ. ಆದಾಯ ತೆರಿಗೆಯಲ್ಲಿ ಸಹಕಾರ ಬ್ಯಾಂಕುಗಳನ್ನು ಬಂಡವಾಳ ವೆಚ್ಚ, ಜಂಟಿ ಸಾಲ ನೀಡುವಾಗ ಕಾಯ್ದೆಲ್ಲಿರುವ ಅಂಶಗಳಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಅಗತ್ಯವಿದೆ ಜೊತೆಗೆ ವಿಶೇಷವಾಗಿ ಜಿ.ಎಸ್.ಟಿ. ಬಗ್ಗೆ ಸಮರ್ಕವಾಗಿ ತಿಳಿದುಕೊಂಡು ಕಾನೂನಾತ್ಮಕವಾಗಿ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮರ್ಚಂಟ್ಸ್ ಲಿಬರಲ್ ಬ್ಯಾಂಕಿನ ಉಪಾಧ್ಯಕ್ಷರಾದ ಕೆ. ಎಸ್. ಪರ್ವತಗೌಡ್ರ ನಿರ್ದೇಶಕರಾದ ಚಂದ್ರಕಾಂತ ಎಸ್. ಸಂಕಣ್ಣವರ, ಸಂತೋಷ ಅಬ್ಬಿಗೇರಿ, ಸಿ. ಟಿ. ದುಂದೂರ ಪ್ರಧಾನ ವ್ಯವಸ್ಥಾಪಕರಾದ ರಾಜು. ಎಲ್. ಕೋಟಿ ಹಾಗೂ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಹಿರಿಯ ಲೆಕ್ಕಪರಿಶೋಧಕರಾದ ಶ್ರೀಮತಿ ಜ್ಯೋತಿ ಎನ್. ಮಾಳೆಕೊಪ್ಪ ಉಪಸ್ಥಿತರಿದ್ದರು.ತರಬೇತಿ ಕಾರ್ಯಾಗಾರದಲ್ಲಿ “ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳ” ಕುರಿತು ಬಿ.ವ್ಹಿ. ರವಿಂದ್ರನಾಥ, ಚಾಟರ್ಡ ಅಕೌಂಟಂಟ್, ಸಾಗರ “ಆದಾಯ, ವೃತ್ತಿ ಹಾಗೂ ಸರಕು ಸೇವಾ ತೆರಿಗೆಗಳು (ಜಿಎಸ್‌ಟಿ)” ಕುರಿತು ವರುಣ ಭಟ್ಟ, ಚಾಟರ್ಡ ಅಕೌಂಟಂಟ್, ಸಾಗರ “ಸಾಲ ವಸೂಲಾತಿ ವಿಧಿ ವಿಧಾನಗಳ” ಕುರಿತು ಪ್ರಶಾಂತ ಮುಧೋಳ, ಸಹಕಾರ ಅಭಿವೃಧ್ಧಿ ಅಧಿಕಾರಿಗಳು, ರೋಣ ಇವರು ಉಪನ್ಯಾಸ ನೀಡಿದರು.
ಪ್ರಾರಂಭದಲ್ಲಿ ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕಿನ ಸಿಬ್ಬಂದಿ ಶ್ರೀಮತಿ ವಿದ್ಯಾ ಹುಬ್ಬಳ್ಳಿ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಇವರು ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಸಹಕಾರ ಶಿಕ್ಷಕಿಯರಾದ ಶ್ರೀಮತಿ ರಶೀದಾಬಾನು ಸಿ. ಯಲಿಗಾರ ಇವರು ವಂದಿಸಿದರು.