ಲೋಕದರ್ಶನ ವರದಿ
ಗೋಕಾಕ 05: ದೇಶಾದ್ಯಂತ ಹರಡಿರುವ ಕೊರೊನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕುಲಗೋಡ ಪೊಲೀಸ್ ಠಾಣೆ ಅವರ ಸಹಕಾರದ ಸಹಯೋಗದಲ್ಲಿ ಶನಿವಾರ ಏ.4ರಿಂದ ಬುಧವಾರ ಏ.8ರವರೆಗೆ ನಾಲ್ಕು ದಿನಗಳ ಕಾಲ ಬೆಟಗೇರಿ ಗ್ರಾಮಕ್ಕೆ ವಿಶೇಷ ದಿಗ್ಬಂದನ್ ಹಾಕಿ ಸಂಪೂರ್ಣ ಬಂದ್ ಮಾಡಿದ ಸಂಗತಿ ನಡೆದಿದೆ.
ಶನಿವಾರ ಮತ್ತು ರವಿವಾರದಂದು ಸಹ ಗ್ರಾಮದಲ್ಲಿ ಕೇವಲ ಆಸ್ಪತ್ರೆ, ಔಷಧ ಮಳಿಗೆಗಳು ಹೊರತುಪಡಿಸಿ, ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಬಾಗಿಲು ತೆರೆಯದೇ ಬಂದ್ ಮಾಡಲಾಗಿತ್ತು. ಎಲ್ಲ ಬೀದಿಗಳು, ಪ್ರಮುಖ ಸ್ಥಳಗಳು ಬೀಕೂ ಎನ್ನುತ್ತಿದ್ದವು. ಇನ್ನೂ ಮೂರು ದಿನಗಳ ಕಾಲ ಏ.8 ಬುಧವಾರ ವರೆಗೆ ಬೆಳಗ್ಗೆ 6 ರಿಂದ 8 ಗಂಟೆಯ ತನಕ ನೀರು, ದನಕರುಗಳಿಗೆ ಮೇವು, ಹಾಲು ತರುವವರಿಗೆ ಮಾತ್ರ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಗ್ರಾಮಕ್ಕೆ ಬೇರೆ ಹಳ್ಳಿಗಳಿಂದ ಯಾರೂ ಬರಕೂಡದು, ಸ್ಥಳೀಯರು ಸಹ ಬೇರೆ ಊರುಗಳಿಗೆ ಹೋಗದಂತೆ ಇಲ್ಲಿಯ ಗ್ರಾಮ ಪಂಚಾಯಿತಿ ಹಾಗೂ ಕುಲಗೋಡ ಪೊಲೀಸ್ ಠಾಣೆ ಅವರು ಸೂಚನೆ ನೀಡಿದ್ದಾರೆ.
ಗ್ರಾಮದ ಸಾರ್ವಜನಿಕರು ನಮ್ಮ ಬೀಗರು, ಬಿಜ್ಜರೂ, ಮಕ್ಕಳು, ಅಣ್ಣತಮ್ಮಂದಿರು ಅಂತಾ ತಮ್ಮ ತಮ್ಮ ಮನೆಗಳಲ್ಲಿ ಸೇರಿಸಿಕೊಳ್ಳಬಾರದು. ಅವರು ಈಗಾಗಲೇ ಇದ್ದ ಊರು, ನಗರ, ಪಟ್ಟಣಗಳಲ್ಲಿ ಇರಲಿ. ಇನ್ನೂ ಮೂರು ದಿನಗಳವರೆಗೆ ಬೆಟಗೇರಿ ಗ್ರಾಮಕ್ಕೆ ನಾವು ವಿಶೇಷ ದಿಗ್ಬಂದನ್ ಹಾಕಿ ಎಲ್ಲರೂ ಮನೆಯಲ್ಲಿರೋಣ, ಕರೊನಾ ಗೆಲ್ಲೂನಾ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಬಳಿಗಾರ ಹೇಳಿದ್ದಾರೆ.
ಭಾನುವಾರ ಸಂತೆ ರದ್ದು: ಬೆಟಗೇರಿ ಗ್ರಾಮದಲ್ಲಿ ಏ.5ರಂದು ನಡೆಯಬೇಕಾಗಿದ್ದ ಭಾನುವಾರ ಸಂತೆಯೂ ಸಹ ಸಂಪೂರ್ಣ ರದ್ದಾಗಿತ್ತು. ಸ್ಥಳೀಯ ಹಾಗೂ ಸುತ್ತಲಿನ ಹತ್ತೂರಿನ ನಾಗರಿಕರು, ರೈತರು, ಅಂಗಡಿ-ಮುಂಗಟ್ಟು ವ್ಯಾಪಾರಸ್ಥರು ರದ್ದುಗೊಳಿಸಲಾದ ರವಿವಾರ ಸಂತೆಗೆ ಯಾರೂ ಬರದೇ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸಹಕರಿಸಿದರು ಎಂದು ಪಿಡಿಒ ಎಚ್.ಎನ್.ಬಾವಿಕಟ್ಟಿ ತಿಳಿಸಿದ್ದಾರೆ.
ದೇಶಾದ್ಯಂತ ಲಾಕ್ಡೌನ್ ಮತ್ತು ಸ್ಥಳೀಯ ಗ್ರಾಮಸ್ಥರ ಸ್ವಯಂ ಪ್ರೇರಿತ ವಿಶೇಷ ಏ.4 ರಿಂದ ಏ.8 ರ ತನಕ 4 ದಿನಗಳ ಕಾಲ ದಿಗ್ಬಂದನ್ ಹಾಕಲಾದ ಹಿನ್ನಲೆಯಲ್ಲಿ ಕುಲಗೋಡ ಪೊಲೀಸ್ ಠಾಣೆ ಪಿಎಸ್ಐ ಹನಮಂತ ನರಳೆ ಹಾಗೂ ಪೊಲೀಸ್ ಪೇದೆಗಳು ಗ್ರಾಮದೆಲ್ಲಡೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅನವಶ್ಯಕ ತಿರಗಾಡುವವರಿಗೆ, ದ್ವಿಚಕ್ರ ವಾಹನ ಸವಾರರಿಗೆ ಖಡಕ್ ಸೂಚನೆ ನೀಡಿ ಮನೆಯಲ್ಲಿರುವಂತೆ ಸಲಹೆ ನೀಡುತ್ತಿದ್ದಾರೆ. ಅದರಲ್ಲೂ ಏ.4 ಶನಿವಾರ ಮತ್ತು ರವಿವಾರ ದಿನ ಗ್ರಾಮದೆಲ್ಲಡೆ ಸ್ತಬ್ಧ್ ವಾತಾವಾರಣ ಕಾಣುತ್ತಿದೆ. ಪ್ರಮುಖ ಓಣಿ ಬೀದಿ, ಸ್ಥಳಗಳು ಬೀಕೂ ಎನ್ನುತ್ತಿವೆ.