ಸ್ಪಂದನಾ ಮೆಲೋಡೀಸ್ ಸ್ವರ ಶ್ರದ್ಧಾಂಜಲಿ: ಸಂಗೀತಾಸಕ್ತರ ಮನಸೂರೆಗೊಂಡ ಗಾಯಕರು

ಸ್ಪಂದನಾ ಮೆಲೋಡೀಸ್ ಸ್ವರ ಶ್ರದ್ಧಾಂಜಲಿ: ಸಂಗೀತಾಸಕ್ತರ ಮನಸೂರೆಗೊಂಡ ಗಾಯಕರು  Spandana Melodies Swara Shraddhanjali: Singers Delight Music Lovers

                                              ಜಾನಕಿ ಗೀತೆಗಳ ಗಾಯನದಲ್ಲಿ ಮಿಂದೆದ್ದ ಸಂಗೀತ ಸಂಜೆ  

ಬೆಳಗಾವಿ 06: ಇತ್ತೀಚೆಗೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಎಸ್‌. ಜಾನಕಿ ಅವರ ಸ್ಮರಣಾರ್ಥ ‘ಸ್ಪಂದನಾ ಮೆಲೋಡೀಸ್‌’ ವತಿಯಿಂದ ಆಯೋಜಿಸಿದ್ದ ‘ಸ್ವರ ಶ್ರದ್ಧಾಂಜಲಿ’ ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರಿಗೆ ಅವಿಸ್ಮರಣೀಯ ಸಂಜೆ ಎನಿಸಿತು.  

ರಾಣಿ ಚನ್ನಮ್ಮ ನಗರದ ಆರ್ಕಿಡ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ರಂಗಸೃಷ್ಟಿ ಸಹಯೋಗದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜಾನಕಿ ಅವರ ಜನಪ್ರಿಯ ಗೀತೆಗಳಿಗೆ ಕಲಾವಿದರು ಧ್ವನಿಯಾಗುವ ಮೂಲಕ ಗಾನಯಾನಕ್ಕೆ ಜೀವ ತುಂಬಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ಜಾನಕಿ ಅವರ ಸುಮಧುರ ಗೀತೆಗಳಲ್ಲಿ ತಲ್ಲೀನರಾದರು.  

ಬೆಳ್ಳಿ ಚುಕ್ಕಿ ಸಂಘಟನೆಯ ಸಂಸ್ಥಾಪಕಿ ರಾಜೇಶ್ವರಿ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್, ಉಪಾಧ್ಯಕ್ಷರಾದ ಎಂ.ಕೆ. ಹೆಗಡೆ ಮತ್ತು ಶೈಲಜಾ ಭಿಂಗೆ, ಕಾರ್ಯದರ್ಶಿ ಶರಣಗೌಡ ಪಾಟೀಲ, ಸ್ಪಂದನಾ ಮೆಲೋಡೀಸ್ ಸಂಸ್ಥಾಪಕರೂ ಆಗಿರುವ ರಂಗಸೃಷ್ಟಿಯ ಕೋಶಾಧಿಕಾರಿ ಶಾಂತಾ ಆಚಾರ್ಯ, ಖ್ಯಾತ ಸಂಗೀತ ಶಿಕ್ಷಕ ಎಂ.ಜಿ. ರಾವ್, ರಂಗ ಕಲಾವಿದ ರವಿ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಪೂರ್ಣಾ ಹೆಗಡೆ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಹಿರಿಯ ಸಾಹಿತಿ ಹಾಗೂ ರಂಗನಿರ್ದೇಶಕ ಶೀರೀಶ್ ಜೋಶಿ ಸ್ವಾಗತಿಸಿ, ಎಸ್‌. ಜಾನಕಿ ಅವರ ಸಂಗೀತ ಪಯಣ ಮತ್ತು ಜೀವನದ ಪ್ರಮುಖ ಸಂಗತಿಗಳನ್ನು ಪರಿಚಯಿಸುತ್ತಾ ಮನೋಜ್ಞವಾಗಿ ಕಾರ್ಯಕ್ರಮ ನಿರೂಪಿಸಿದರು. ಉಷಾ ಬಾಳಿಗಾ ಅವರು ‘ಸ್ಪಂದನಾ ಮೆಲೋಡೀಸ್‌’ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರ ಪರಿಚಯ ಮಾಡಿಕೊಟ್ಟರು.  

ದೀಪಾ ಪದಕಿ ಅವರು ‘ಪೂಜಿಸಲೆಂದೆ ಹೂಗಳ ತಂದೆ’ ಹಾಡಿನ ಮೂಲಕ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸುಕಲ್ಪ ಮಠಪತಿ ಮತ್ತು ಶೃತಿ ಕಾಮತ್ ‘ಜೀವ ವೀಣೆ’, ಶಾಂತಾ ಆಚಾರ್ಯ ಮತ್ತು ಮಹೇಶ ಕುಲಕರ್ಣಿ ‘ಒಂದೇ ಒಂದು ಆಸೆಯು’ ಹಾಗೂ ‘ಮಾತೊಂದು ಹೇಳುವೆ’, ಭುಜಂಗ ಪಾಟೀಲ ಮತ್ತು ಕವಿತಾ ಜಾಧವ ‘ದಿಲ್ ಮೇ ಹೋ ತುಮ್‌’ ಹಾಗೂ ‘ಯಾರ್ ಬಿನಾ’, ಶೃತಿ ಕಾಮತ್ ‘ಭಾನಲ್ಲೂ ನೀನೆ ಭುವಿಯಲ್ಲೂ ನೀನೆ’, ಭುಜಂಗ ಪಾಟೀಲ ಮತ್ತು ದೀಪಾ ಪದಕಿ ‘ಈ ಸಂಭಾಷಣೆ’, ಸಾವಿತ್ರಮ್ಮ ‘ದೇವರ ಆಟ ಬಲ್ಲವರಾರು’, ಮಹೇಶ ಕುಲಕರ್ಣಿ ಮತ್ತು ಶೃತಿ ಕಾಮತ್ ‘ನೀನೆಲ್ಲೋ ನಾನಲ್ಲೇ’, ಮಹೇಶ ಕುಲಕರ್ಣಿ ಮತ್ತು ದೀಪಾ ಪದಕಿ ‘ನಗುವಾ ನಯನ’ ಸೇರಿದಂತೆ ಜಾನಕಿ ಅವರ ಜನಪ್ರಿಯ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.