ಲಾಸ್ ಏಂಜಲೀಸ್, ಫೆ ೧೦, ದಕ್ಷಿಣ ಕೊರಿಯಾದ “ಪ್ಯಾರಾ ಸೈಟ್’ ಸಿನಿಮಾ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆಯ ಜೊತೆಗೆ, ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರಕ್ಕಾಗಿ ಆಸ್ಕರ್ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದೆ. ಮೊದಲಿನಿಂದಲೂ ಹಲವು ನಿರೀಕ್ಷೆಗಳನ್ನು ಸೃಷ್ಟಿಸಿದ್ದ "ಪ್ಯಾರಾಸೈಟ್" ಚಿತ್ರ ನಾಲ್ಕು ಆಸ್ಕರ್ ಪುರಸ್ಕಾರ ಪಡೆದುಕೊಂಡಿರುವುದು ವಿಶೇಷವಾಗಿದೆ. ನಿರ್ಮಾಣದ ಜೊತೆಗೆ, ಅತ್ಯುತ್ತಮ ಚಿತ್ರಕತೆಯನ್ನು ಆಯ್ಕೆಮಾಡಿಕೊಳ್ಳುವ ಮೂಲಕ ದಕ್ಷಿಣ ಕೊರಿಯಾ, ಹಾಲಿವುಡ್ ಸಿನಿಮಾಗೆ ದಿಟ್ಟ ಉತ್ತರ ನೀಡಿದೆ.
ಡಾರ್ಕ್ ಥ್ರಿಲ್ಲರ್ ಆಗಿ ತಯಾರಿಸಿದ ಈ ಚಿತ್ರದಲ್ಲಿ ಧನಿಕ ಕುಟುಂಬವನ್ನು ಬಡ ಕುಟುಂಬವೊಂದು ಬುದ್ಧಿವಂತಿಕೆಯಿಂದ ಪ್ರವೇಶಿಸುತ್ತದೆ. ಬಡವ ಶ್ರೀಮಂತರ ನಡುವಣ ಅಂತರ ಸಮಾಜದಲ್ಲಿ ಯಾವ ರೀತಿಯ ವಿಪತ್ಕಾರ ಪರಿಸ್ಥಿತಿ ಸೃಷ್ಟಿಸುತ್ತದೆ ಎಂಬುದನ್ನು ನಿರ್ದೇಶಕ ಬಾಂಗ್ ಜೂನ್-ಹೋ ಅವರು "ಪ್ಯಾರಾ ಸೈಟ್" ಚಿತ್ರದಲ್ಲಿ ತೋರಿಸಿದ್ದಾರೆ. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ೯೨ ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ಯಾರಾಸೈಟ್ ಚಿತ್ರದೊಂದಿಗೆ “ಜೋಕರ್” “೧೯೧೭ “ ಚಿತ್ರಗಳು ತಮ್ಮ ಹವಾ ತೋರಿಸಿವೆ. ಜೋಕರ್ ಚಿತ್ರದ ನಾಯಕ ಜೊಕ್ವಿನ್ ಫಿನಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ೧೯೧೭ ಚಿತ್ರ ಸಹ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.