ದಕ್ಷಿಣ ಆಫ್ರಿಕಾ ತಂಡದ ನಿರ್ದೇಶಕ ಗ್ರೇಮ್ ಸ್ಮಿತ್ ನೇಮಕ ?

ಜೋಹಾನ್ಸ್ಬರ್ಗ್ , ಡಿ 8:        ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ನಿರ್ದೇಶಕರಾಗುವುದು ಬಹುತೇಕ ಖಚಿತವಾಗಿದೆ ಎಂದು ಮಂಡಳಿ ಅಧ್ಯಕ್ಷ ಕ್ರಿಸ್ ನೆಂಝಾನಿ ತಿಳಿಸಿದ್ದಾರೆ. ನೆಂಝಾನಿ ಅವರು ಸ್ಮಿತ್ ಬಳಿ ನಿರ್ದೇಶಕ ಸ್ಥಾನದ ನೇಮಕ ವಿಷಯ ಕುರಿತು ಶನಿವಾರ ಬೆಳಗ್ಗೆ ಕರೆ ಮಾಡಿ ಮಾತನಾಡಿದ್ದರು. "ಗ್ರೇಮ್ ಸ್ಮಿತ್ ಅವರು ಕ್ರಿಕೆಟ್ ದಕ್ಷಿಣ ಆಫ್ರಿಕಾಗೆ ನೂತನ ನಿರ್ದೇಶಕರಾಗುತ್ತಿರುವುದು ಹೆಚ್ಚು ಸಂತಸ ತಂದಿದೆ. ಮುಂದಿನ ವಾರ ಸ್ಮಿತ್ ಜತೆಗಿನ ಗುತ್ತಿಗೆ ಸೇರಿದಂತೆ ಹಲವು ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದ," ಎಂದು ವಿಶೇಷ ಮಂಡಳಿಯ ಸಭೆಯಲ್ಲಿ ನೆಂಝಾಮಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಗ್ರೇಮ್ ಸ್ಮಿತ್ ನಿರ್ದೇಶಕ ಹುದ್ದೆಯನ್ನು ಸ್ವೀಕರಿಸಿದ್ದೇ ಆದಲ್ಲಿ ಮುಂದಿನ ಕೆಲ ವಾರಗಳಲ್ಲಿ ಅಂದರೆ, ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಒಳಗಾಗಿ ಆಯ್ಕೆ ಸಮಿತಿ ಹಾಗೂ ಕೋಚಿಂಗ್ ಸಿಬ್ಬಂದಿಯನ್ನು ನೇಮಿಸುವ ಕಾರ್ಯ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ, ಸಿಎಸ್ಎ ಬಿಕ್ಕಟ್ಟು ಹಾಗೆಯೇ ಇದೆ, ನೆಂಝಾನಿ ಅವರ ಉಳಿದ ಮಂಡಳಿಯ ಸದಸ್ಯರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದರು, ಎಸ್ಎ ಕ್ರಿಕೆಟಿಗರ ಸಂಘದ (ಎಸ್ಎಸಿಎ) ಮುಖ್ಯ ಕಾರ್ಯನಿರ್ವಾಹಕ ಟೋನಿ ಐರಿಶ್ ಅವರು ಸಿಎಸ್ಎ ಅಧ್ಯಕ್ಷರನ್ನು ಕೆಳಗಿಳಿಯುವಂತೆ ಶುಕ್ರವಾರ ಕೇಳಿದ್ದರು. ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರು ದಕ್ಷಿಣ ಆಫ್ರಿಕಾ ಪರ 117 ಟೆಸ್ಟ್ ಹಾಗೂ 197 ಏಕದಿನ ಪಂದ್ಯಗಳಾಡಿದ್ದು, ಕ್ರಮವಾಗಿ 9265 ಮತ್ತು 6989 ರನ್ ಗಳಿಸಿದ್ದಾರೆ. ಜತೆಗೆ, 33 ಟಿ-20 ಪಂದ್ಯಗಳಿಂದ 982 ರನ್ ಗಳಿಸಿದ್ದಾರೆ.