ನವದೆಹಲಿ, ಏ 20,ವಿಸ್ಡನ್ ಇಂಡಿಯಾ ತನ್ನ ಟ್ವಿಟರ್ ಮೂಲಕ ಹಂಚಿಕೊಂಡ ಫೋಟೊ ಒಂದಕ್ಕೆ ಪ್ರತಿಕ್ರಿಯೆ ನೀಡಿದ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಟೀಮ್ ಇಂಡಿಯಾಗೆ ಹೊಸ ದಿಕ್ಕು ತೆರೆದಿಟ್ಟ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರಂತಹ ದಿಗ್ಗಜರ ಜೊತೆಗೆ ಕಳೆದ ದಿನಗಳನ್ನು ಸ್ಮರಿಸಿದ್ದಾರೆ.ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಸಚಿನ್, ಗಂಗೂಲಿ, ದ್ರಾವಿಡ್ ಮತ್ತು ಲಕ್ಷ್ಮಣ್ ಸಾಲಾಗಿ ನಿಂತಿರುವ ವಿಶೇಷ ಫೋಟೊವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡ ವಿಸ್ಡನ್ ಇಂಡಿಯಾ, "ನಾಲ್ಕು ದಿಗ್ಗಜರಿರುವ ಇದಕ್ಕಿಂತಲೂ ಉತ್ತಮ ಫೋಟೊ ತೋರಿಸಿ. ನಾವು ಕಾಯುತ್ತೇವೆ," ಎಂದು ಸಂದೇಶ ಬರೆದಿದೆ. ಇದಕ್ಕೆ ಕೆಲ ಅಭಿಮಾನಿಗಳು ವೆಸ್ಟ್ ಇಂಡೀಸ್‌ನ 70-80ರ ದಶಕದ ಶ್ರೇಷ್ಠ ವೇಗಿಗಳಾದ ಜೊಯೆಲ್ ಗಾರ್ನರ್, ಮಾಲ್ಕಮ್ ಮಾರ್ಷಲ್, ಮೈಕಲ್ ಹೋಲ್ಡಿಂಗ್ ಮತ್ತು ಆಂಡಿ ರಾಬರ್ಡ್ಸ್ ಇರುವ ಫೋಟೊವನ್ನು ಟ್ವೀಟ್ ಮಾಡಿದ್ದಾರೆ ಕೂಡ.
ಈ ಫೋಟೊ ಗಮನಿಸಿದ ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಕೂಡಲೇ ಉತ್ತರ ನೀಡಿ ತಮ್ಮ ನಾಯಕತ್ವದಲ್ಲಿ ಟೀಮ್ ಇಂಡಿಯಾದಲ್ಲಿ ನಡೆದ ದಾದಾಗಿರಿ ದಿನಗಳನ್ನು ಸ್ಮರಿಸಿದ್ದಾರೆ. "ಜೀವನದ ಅತ್ಯುತ್ತಮ ಕಾಲಘಟ್ಟ. ಅದರ ಪ್ರತಿಯೊಂದು ಕ್ಷಣವನ್ನೂ ಆನಂದಿಸಿದ್ದೇನೆ," ಎಂದು ಉತ್ತರ ಬರೆದಿದ್ದಾರೆ.ಸೌರವ್ ಗಂಗೂಲಿ ನಾಯಕತ್ವದ ಅಡಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಮತ್ತು ವೆರಿ ವೆರಿ ಸ್ಪೆಷಲ್ ಖ್ಯಾತಿಯ ವಿವಿಎಸ್ ಲಕ್ಷ್ಮಣ್ ಅಂದು ಟೀಮ್ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬಾಗಿದ್ದರು. ಅಂದು ಭಾರತ ತಂಡದ ಬ್ಯಾಟಿಂಗ್ ವಿಭಾಗ ವಿಶ್ವ ಶ್ರೇಷ್ಠವಾಗಿತ್ತು.