ನಾನು ಈ ವಿಷಯದ ಕುರಿತಾಗಿ ಬಹಳ ಹಿಂದೆಯೇ ಒಂದು ಲೇಖನವನ್ನು ಬರೆದಿದ್ದೆ. ಆವತ್ತೂ ಸಹ ಬಹಳಷ್ಟು ಜನರ ಮನಸ್ಸಿಗೆ ನೋವಾಗುವ ರೀತಿಯ ಮಾತುಗಳು ನಮ್ಮವರಿಂದಲೇ ಕೇಳಿದ್ದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೇಶಕ್ಕಾಗಿ ದುಡಿದ ಮಹಾತ್ಮರನ್ನು ಅಗ್ನಿಯನ್ನಾಗಿ ಉರಿಸುತ್ತಾರೆ. ಸಾಧನೆ ಎನ್ನುವುದು ಶೂನ್ಯವಾಯಿತೆಂದರೆ ಹೇಳಿಕೊಳ್ಳುವುದಕ್ಕೆ ಯಾವ ವಿಚಾರವು ಇರುವುದಿಲ್ಲ. ಆಗ ಯಾರನ್ನಾದರೂ ಎಳೆದು ತಂದು ನಾವಿನ್ನೂ ಬದುಕಿದ್ದೇವೆ ಎನ್ನುವುದನ್ನು ತೋರಿಸಬೇಕಲ್ಲ ಆ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಬಿಡುತ್ತಾರೆ. ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳುವದರ ಭರದಲ್ಲಿ, ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಇತಿಹಾಸವನ್ನೇ ಬಲಿ ಕೊಟ್ಟಾದರೂ ವಾಸ್ತವದಲ್ಲಿ ಮಿಂಚಲು ಹವಣಿಸುತ್ತಾರೆ. ಒಂದು ಪಕ್ಷದಲ್ಲಿದ್ದಾಗ ಎದುರಾಳಿ ಪಕ್ಷವನ್ನು ಹಣಿಯುತ್ತಾ, ಮುಂದೆ ಇದ್ದ ಪಕ್ಷವನ್ನು ಬಿಟ್ಟು ಎದುರಾಳಿ ಪಕ್ಷವನ್ನು ಸೇರಿಕೊಂಡಾಗ ಆ ಪಕ್ಷವನ್ನೇ ಭ್ರಹ್ಮಾಂಡವಾಗಿ ಕೊಂಡಾಡುತ್ತ, ರಾಜಕೀಯದಲ್ಲಿ ಯಾರೂ ವೈರಿಗಳಲ್ಲ, ಯಾರೂ ಮಿತ್ರರೂ ಅಲ್ಲ ಎಂದು ನಾಲಿಗೆ ಸವರುತ್ತ ಹೊರಟು ಬಿಡುತ್ತಾರೆ. ಆದರೆ ಅವರದೇನೇ ಇರಲಿ. ಸುಖಾ ಸುಮ್ಮನೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಎಳೆದು ತಂದು ನಾಲಿಗೆಯ ತೆವಲು ತೀರಿಸಿಕೊಳ್ಳುವುದು. ಮತ್ತೆ ಅದನ್ನೇ ದೊಡ್ಡ ಸಮಸ್ಯೆಯನ್ನಾಗಿ ಸೃಷ್ಠಿಸಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಅಖಾಡಾ ತಯಾರು ಮಾಡುವುದು ನೋಡಿದಾಗ ಇಂಥದ್ದನ್ನೆಲ್ಲ ನೋಡುವುದಕ್ಕೆಂದೇ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರಾ ಆ ಪುಣ್ಯಾತ್ಮರು ಎನಿಸಿಬಿಡುತ್ತದೆ. ಇದೆಲ್ಲವನ್ನು ನೋಡುತ್ತಲೇ ಅದ್ಯಾಕೆ ಹೀಗಾಗುತ್ತಿದೆ? ಸುಮ್ಮನೇ ಇತಿಹಾಸದ ಕಾಲಗರ್ಭದಲ್ಲಿ ಹುದುಗಿ ಹೋಗಿರುವವರನ್ನು ವಾಸ್ತವಕ್ಕೆ ಎಳೆದುಕೊಂಡು ತಂದು ಸನ್ಮಾನಿಸುವ ನೆಪದಲ್ಲಿ ಅವಮಾನಿಸುವ ಕಾರ್ಯ ಮಾಡುತ್ತಿರುವುದನ್ನು ಕಂಡಾಗ ಇನ್ನಿಲ್ಲದಂತೆ ನೋವಾಗುತ್ತದೆ. ನಮಗಾಗಿ ತಮ್ಮ ಇಡೀ ಆಯುಷ್ಯವನ್ನೇ ಬಲಿಕೊಟ್ಟ ಮಹಾತ್ಮರಿಗೆ ನಾವು ತೋರುತ್ತಿರುವ ಅಗೌರವ ಕಂಡು ಬೇಸರವಾಗುತ್ತಿದೆ. ಇಡೀ ಜಗತ್ತಿನಲ್ಲಿ ಯಾರೂ ಅನುಭವಿಸದ ನರಕ ಯಾತನೆಯನ್ನು ಅನುಭವಿಸಿ, ದೇಶಪ್ರೇಮದ ಅಲೆಯಲ್ಲಿ ಕೊಚ್ಚಿಹೋಗಿ ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿದ ಧಿಮಂತನನ್ನು ಕೇವಲ ಪಕ್ಷ ಹಾಗೂ ಧರ್ಮ ಮತ್ತು ರಾಜಕೀಯದ ಚೌಕಟ್ಟಿನಲ್ಲಿ ಕಟ್ಟಿ ಹಾಕುತ್ತ ಅವರು ನಮಗಾಗಿ ಮಾಡಿದ ತ್ಯಾಗವನ್ನು ಮರೆತು ಬಾಯಿಗೆ ಬಂದಂತೆ ಮಾತಾಡುತ್ತಿರುವುದು ನಮ್ಮ ಹೇಯ ಮನಸ್ಸಿನ ನಿಜಸ್ವರೂಪವನ್ನು ಬಯಲಿಗೆಳೆಯುತ್ತಿದೆ. ರೈತನ ಆತ್ಮಹತ್ಯೆಯನ್ನು, ಯೋಧರ ಬಲಿದಾನದಲ್ಲಿಯೂ ರಾಜಕೀಯ ಲಾಭ ಪಡೆದುಕೊಳ್ಳಲು ಆಲೋಚಿಸುವ ನಾವುಗಳು ದೇಶಪ್ರೇಮಿಗಳ, ಸ್ವಾಂತಂತ್ರ್ಯ ಹೋರಾಟಗಾರ ವಿಷಯದಲ್ಲೂ ಮುಂದುವರಿಸಿದ್ದು ನಮ್ಮ ದೇಶದ ದೌರ್ಭಾಗ್ಯ. ಕೆಲವೊಂದು ವಿಷಯಗಳು ನನ್ನನ್ನು ಚಿಂತನೆಗೆ ಹಚ್ಚಿದರೆ, ಮತ್ತೇ ಕೆಲವು ವಿಷಯಗಳು ನನ್ನನ್ನು ಚಿಂತೆಗೆ ಈಡು ಮಾಡುತ್ತವೆ. ಕೆಲವು ನನ್ನಲ್ಲಿ ಭರವಸೆ ಬಿತ್ತಿದರೆ ಮತ್ತೆ ಕೆಲವು ನನ್ನ ನಂಬಿಕೆಗೆ ಕೊಡಲಿಪೆಟ್ಟು ನೀಡುತ್ತವೆ. ಹಾಗೆ ನನ್ನನ್ನು ಏಕ ಕಾಲದಲ್ಲಿ ಚಿಂತನೆಗೆ ಹಾಗೂ ಚಿಂತೆಗೆ ಈಡುಮಾಡಿದ್ದೇ ವಿನಾಯಕ ದಾಮೋದರ್ ಸಾವರಕರ್ ಅವರ ವಿಚಾರದಲ್ಲಿ ನಮ್ಮವರ ಪರ ವಿರೋಧದ ಹಗ್ಗ ಜಗ್ಗಾಟ. ಕೆಲವು ತಿಂಗಳ ಹಿಂದೆ ಸಾವರ್ಕರ್ ಅವರಿಗೆ ಭಾರತರತ್ನ ನೀಡುವ ವಿಷಯದಲ್ಲಿಯೂ ಕೂಡ ವಿಚಿತ್ರ ವಿವಾದ ಬುಗಿಲೆದ್ದಿತ್ತು. ಈಗ ಸಿದ್ಧರಾಮಯ್ಯನವ ಮಾತಿನಿಂದ ಮತ್ತೊಂದು ವಿವಾದ ಸೃಷ್ಠಿಯಾಗಿದೆ. ಆದರೆ ನಿಜಕ್ಕೂ ಇಲ್ಲಿ ಬಲಿಯಾಗಿದ್ದು ಮಾತ್ರ ಸಾವರ್ಕರ ಎನ್ನವ ಮಹಾನ್ ನೇತಾರನ ಹೆಸರು. ಅಂದು ಮಹಾತ್ಮ ಗಾಂಧೀ ಸತ್ತಾಗ ಸಾವರ್ಕರ್ ಅವರಿಗೆ ಕಲ್ಲೆಸೆದರು. ಇಂದು ಸತ್ತ ನಂತರವೂ ಸಾವರ್ಕರ್ ಅವರ ಹೆಸರನ್ನು ಎಳೆದು ತಂದು ನೋವು ಮಾಡುತ್ತಿದ್ದಾರೆ. ಕೋರ್ಟ ಕೊಟ್ಟ ತೀರ್ಿಗೂ ಇವರು ಬೆಲೆ ಕೊಡದೇ ಸಾವರ್ಕರ್ ಒಬ್ಬ ಹೇಡಿ ಎಂದು ಬಿಂಬಿಸಿ ಮಾತನಾಡುವುದು ಅದನ್ನು ಕಂಡು ಕೆಲವರು ವಿರೋಧಿಸುವುದನ್ನು ನೋಡಿದಾಗ ತಾತ್ಯಾ ಟೋಪಿಯ ಕುರಿತು ಸಾವರ್ಕರ್ ಹೇಳಿದ ಮಾತೇ ನೆನಪಾಗುತ್ತದೆ. “ಓ ಹತಭಾಗ್ಯದ ತಾತ್ಯಾ ನೀನು ಭಾರತದಲ್ಲಿ ಜನಿಸುವ ಬದಲು ಬೇರೆ ದೇಶದಲ್ಲಿ ಜನಿಸಿದ್ದರೆ ನಿನ್ನನ್ನು ನಿಜಕ್ಕೂ ಗುಡಿ ಕಟ್ಟಿ ಪೂಜಿಸುತ್ತಿದ್ದರು” ಎಂದು ಸಾವರ್ಕರ್ ಹೇಳಿದ ಮಾತೇ ಇಂದು ಅವರಿಗೆ ಅಳವಡಿಸಬಹುದಾಗಿದೆ. ಒಂದು ವೇಳೆ ಸಾವರ್ಕರ್ ಇಲ್ಲಿ ಜನಿಸುವ ಬದಲು ಬೇರೇ ದೇಶದಲ್ಲಿ ಜನಿಸಿದ್ದರೆ ಅವರನ್ನು ಸಹ ಗುಡಿ ಕಟ್ಟಿ ಪೂಜಿಸುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಅಂದು ಕೆಲವು ಜನ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕರೆದರೆ ಮತ್ತೆ ಕೆಲವರು ಧಾರ್ಮಿಕ ಬಣ್ಣ ಕಟ್ಟಿ ತಪ್ಪೆಂದು ವಾದ ಮಾಡಿದ್ದರು. ಒಂದು ಕ್ಷಣ ನಾವು ಧರ್ಮ ಹಾಗೂ ರಾಜಕೀಯ ಪಕ್ಷವನ್ನು ಬದಿಗಿಟ್ಟು ಬುದ್ಧಿಯಿಂದ ಯೋಚಿಸುವ ಬದಲು ಮನಸ್ಸಿಗೆ ಬದ್ಧವಾಗಿ ಯೋಚಿಸಿ ನೋಡಿದರೆ ಸರಿ ಯಾವುದು? ತಪ್ಪ್ಯಾವುದು? ಎನ್ನುವ ಸ್ಪಷ್ಟ ಚಿತ್ರಣ ದೊರೆಯುತ್ತದೆ ಎಂದು ಹೇಳುವುದನ್ನು ಸ್ಪಷ್ಟಪಡಿಸಿದ್ದೆ. ಮಹಾತ್ಮಗಾಂಧೀಜಿಯವರ ಸಾವಿನಲ್ಲಿ ಸಾವರ್ಕರ್ ಪಾತ್ರವಿರುವ ಆರೋಪ ಅವರ ಮೇಲಿದೆ. ಎನ್ನುವ ಕಾರಣಕ್ಕಾಗಿ ಸಾವರ್ಕರ್ ಒಬ್ಬ ದೇಶಪ್ರೇಮಿಯೇ ಅಲ್ಲ. ಅವನೊಬ್ಬ ಹೇಡಿ ಎಂದು ಹೇಳಿಕೆ ನೀಡುವುದು ಸರಿ ಅಲ್ಲ ಎನ್ನುವುದು ಕೆಲವು ಜನರ ಅಂಬೋಣ. ಹೌದು...! ಅವರ ಮಾತು ನಿಜ, ಅವರ ಮೇಲೆ ಆರೋಪ ಬಂದಿದ್ದೇನು ಸುಳ್ಳಲ್ಲ, ಆದರೆ ಆ ಆರೋಪ ಕೋರ್ಟಿನಲ್ಲಿ ಸಾಬೀತಾಯಿತೆ? ಎನ್ನುವುದನ್ನು ನೋಡಿದರೆ ನಾವು ಮಾತನಾಡುವ ಬಗೆ ಬದಲಾಗಬಹುದು. ಅಂದು ಕೋರ್ಟಿನ ಮುಂದೆ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯೇ ಈ ಹತ್ಯೆಯ ಕರ್ತೃ, ಕರ್ಮ ಹಾಗೂ ಕ್ರೀಯಾ ಎಲ್ಲವು ನಾನೇ ಮಿಕ್ಕಿದ್ದೇಲ್ಲವು ಸತ್ಯಕ್ಕೆ ದೂರವಾದುದು ಎಂದು ಹೇಳಿಕೆ ಕೊಟ್ಟ. ಆದರೂ ಅದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಸರಿ. ಸಾವರ್ಕರ್ ಅವರ ಜೊತೆ ಗೋಡ್ಸೆ ಸಂಪರ್ಕದಲ್ಲಿದ್ದ ಹಾಗೂ ಗಾಂಧಿ ಹತ್ಯೆಗೂ ಎರಡು ದಿನ ಮೊದಲು ಸಾವರ್ಕರ್ ಮನೆಗೆ ಹೋಗಿ ಆಶಿರ್ವಾದ ಪಡೆದು ಬಂದು ಗುಂಡು ಹಾರಿಸಿದನೆಂಬ ಊಹಾ ಪೋಹಗಳು ಇವೆ. ಆದರೆ ಇವಗಳನ್ನು ಸಾಬೀತು ಪಡಿಸುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಕೋರ್ಟಿಗೆ ಸಿಗಲಿಲ್ಲ. ಆದ ಕಾರಣ ನ್ಯಾಯಾಲಯವೇ ಸಾವರ್ಕರ್ ಅವರನ್ನು ಖುಲಾಸೆಗೊಳಿಸಿದ ಮೇಲೆ ನಾವಿನ್ನೂ ಅದರ ಬಗ್ಗೆಯೆ ಮಾತಾಡುವುದು ಯಾವ ನ್ಯಾಯ ನೀವೆ ಹೇಳಿ?
ಸಿದ್ಧಾಂತಗಳಲ್ಲಿ ವೈರುಧ್ಯವಿದೆ ಎಂದ ಮಾತ್ರಕ್ಕೆ ವ್ಯಕ್ತಿ ಮಾಡಿದಂತ ಪ್ರತಿ ಕಾರ್ಯವನ್ನು ನಿರ್ಲಕ್ಷಿಸುವುದು, ಅವರು ಮಾಡಿದಂತ ತ್ಯಾಗವನ್ನು ಮರೆ ಮಾಚುವುದು ಯಾವ ತರದ ನ್ಯಾಯ? ಅಷ್ಟಕ್ಕೂ ಯಾವ ಕಾರ್ಯವನ್ನು ಮಾಡದೇ ಸ್ವಾತಂತ್ರ್ಯ ವೀರನೆಂದು ಕರೆಸಿಕೊಂಡರೆ? ಖಂಡಿತ ಇಲ್ಲ...! ಅಪ್ಪಟ ದೇಶಭಕ್ತ ಹಾಗೂ ದೇಶಕ್ಕಾಗಿಯೇ ಇಡೀ ಬದುಕನ್ನೇ ಬಲಿಕೊಟ್ಟ ಮಾಹನ್ ವ್ಯಕ್ತಿ ಅವರು. ಕೇವಲ ಹಿಂದೂ ಮಹಾಸಭಾ ಸ್ಥಾಪನೆ ಮಾಡಿದರು ಎನ್ನುವ ಕಾರಣಕ್ಕಾಗಿ ಅವರನ್ನು ದ್ವೇಷಿಸುವುದು. ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯೇ? ಆದರೂ ಕೂಡ ವಿರೋಧದ ಮಾತುಗಳು ಕೇಳಿಬುತ್ತಿರುವುದು ನಿಜಕ್ಕೂ ವಿಚಿತ್ರ ಎನ್ನಿಸುತ್ತಿದೆ. ಲಂಡನ್‌ಗೆ ಹೋಗಿ ಬ್ಯಾರಿಸ್ಟರ್ ಆಗಿ ಬರಬೇಕಿದ್ದ ವೀರ್ ಸಾವರ್ಕರ್ ಎನ್ನುವ ಅಪ್ಪಟ ದೇಶಪ್ರೇಮದ ಸಾಕಾರ ಮೂರ್ತಿ ಭಾರತಕ್ಕೆ ಬಂದಾಗ ಕೈಗಳಲ್ಲಿ ಬೇಡಿಗಳನ್ನು ತೊಟ್ಟುಕೊಂಡಿದ್ದರು. ಕಣ್ಣುಗಳಲ್ಲಿ ಭಾರತಾಂಬೆಯನ್ನು ಸ್ವತಂತ್ರ್ಯಗೊಳಿಸಬೇಕೆನ್ನುವ ಅದಮ್ಯವಾದ ಬೆಳಕು ಕಾಣುತ್ತಿತ್ತು. ಆದರೆ ತಮ್ಮ ಅರ್ಧಕ್ಕೀಂತ ಹೆಚ್ಚಿನ ಬದುಕನ್ನು ಬ್ರಿಟೀಷರ ಬಂಧೀಖಾನೆಯಲ್ಲಿಯೇ ಕಳೆಯುತ್ತೇನೆ ಎನ್ನುವ ಸುಳಿವು ಅವರಲ್ಲಿರಲಿಲ್ಲ. ಆದರೂ ಆ ದೇಶಪ್ರೇಮ ಅವರಲ್ಲಿ ಉಕ್ಕಿ ಹರಿಯುತ್ತಿತ್ತು. ಯಾರದೋ ಪಿತೂರಿಯಲ್ಲಿ ಗಾಂಧಿ ಹತ್ಯೆಯ ವಿಷಯದಲ್ಲಿ ಅವರ ಹೆಸರು ತಳಕು ಹಾಕಿಕೊಂಡಿದ್ದನ್ನು ಬಿಟ್ಟರೆ ಅವರಂಥ ದೇಶಪ್ರೇಮಿ ಸಿಗುವುದು ಅಸಾಧ್ಯ ಎನ್ನಿಸುತ್ತದೆ.
ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ ಸಾವರ್ಕರ್ ಏನು ದೊಡ್ಡ ಮಹಾ? ಅಂತದ್ದೇನು ಮಾಡಿದ್ದಾರೆ ಅವರು? ಎಂದು ಮನಬಂದಂತೆ ಮಾತನಾಡುವ ನಮ್ಮ ನಾಯಕರುಗಳು ಮೊದಲು ಅವರ ಜೀವನಚಿತ್ರಣವನ್ನು ಓದಿಕೊಂಡು ಬಂದರೆ ಒಳ್ಳೆಯದು. ಜಗತ್ತಿನಲ್ಲಿ ಎರಡೆರೆಡು ಜೀವಾವಧಿ ಶಿಕ್ಷೆಗೆ ಗುರಿಯಾದ ಏಕೈಕ ವ್ಯಕ್ತಿ ಎಂದರೆ ಅದು ವಿನಾಯಕ್ ದಾಮೋದರ್ ಸಾವರ್ಕರ್ ಅವರು. ಶಾಂತಿ ಮಾರ್ಗದಲ್ಲಿ ನಂಬಿಕೆ ಇಲ್ಲದ ಸಾವರ್ಕರ್ ಭಾರತ ಮಾತೆಯೆ ಬಿಡುಗಡೆಗೆ ಕ್ರಾಂತಿ ಮಾರ್ಗವನ್ನು ಅನುಸರಿದರು. ಚಿಕ್ಕವಯಸ್ಸಿನಲ್ಲಿಯೇ ಸ್ವತಂತ್ರ್ಯಗಂಗೆಯ ಒಡಲಿಗೆ ಧುಮುಕಿ ಬ್ರಿಟೀಷರ ಉರುಳಿಗೆ ಕೊರಳು ನೀಡಿದ ಮದನ್‌ಲಾಲ್ ಧಿಂಗ್ರಾನಂತ ದೇಶಭಕ್ತನನ್ನು ಜಗತ್ತಿಗೆ ಪರಿಚಯಿದ್ದೇ ಅವರು. ಅಂದು ರಾಮಾಯಣದಲ್ಲಿ ಸೀತಾಮಾತೆಯ ಬಿಡುಗಡೆಗಾಗಿ ಆಂಜನೇಯ ಕಡಲನ್ನೇ ಜಿಗಿದನೋ ಹಾಗೆಯೇ ಭಾರತ ಮಾತೆಯ ಬಿಡುಗಡೆಗಾಗಿ ವೀರ್ ಸಾವರ್ಕರ್ ಕಡಲಿಗೆ ಜಿಗಿದು ಅದನ್ನೀಜಿದಂತ ರೋಚಕ ಘಟನೆ ಯಾವ ಯೋಧನ ಬದುಕಲ್ಲೂ ನಡೆದಿಲ್ಲ. ಸಾವರ್ಕರ್‌ನ್ನು ಬಂಧಿಸಿ ಹಡಗಿನಲ್ಲಿ ತರುವಾಗ ಮಲಮೂತ್ರಗಳ ಡಬ್ಬಿಯ ಪಕ್ಕದಲ್ಲಿ ಕೊಡಲಾಗಿದ್ದ ಸ್ಥಾನವನ್ನು ನೆನಸಿಕೊಂಡರೆ ಯಾರೋಬ್ಬರಿಗೂ ನೋವಾಗದೇ ಇರುವುದಿಲ್ಲ. ಇದೆಲ್ಲವನ್ನು ಸಹಿಸಿಕೊಂಡ ಆ ವೀರನ ಬಗ್ಗೆ ನಮಗ್ಯಾರಿಗೂ ಅರಿವೇ ಇಲ್ಲ. ಇನ್ನು ಸೆಲ್ಯೂಲರ್ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಗೆ ಗುರಿಯಾದಾಗ ಅಲ್ಲಿ ಅನುಭವಿಸಿದ ನರಕ ಯಾತನೆಯ ಕುರಿತು ಓದುವ ವೇಳೆಯಲ್ಲಿ ನಮ್ಮ ಝಂಗಾಬಲವೆ ಉಡುಗಿ ಹೋಗುವಾಗ, ಅದನ್ನೇನಾದರೂ ಅನುಭವಿಸಿದ್ದರೆ... ಅದೂ ಬೇಡ...! ಬರೀ ಕಣ್ಣಾರೆ ಕಂಡಿದ್ದರೂ ಸಹ ನಿಂತ ಸ್ಥಳದಲ್ಲಿಯೇ ನಾವು ಕುಸಿಯುತ್ತಿದ್ದೇವೋ ಏನೋ? ಆ ರೀತಿಯ ಭಯಂಕರ ಶಿಕ್ಷೆ ಅನುಭವಿಸಿದ್ದು ಯಾರಿಗಾಗಿ? ತನ್ನ ಸುಖಕ್ಕಾಗಿಯೇ? ತನ್ನ ಮನೆಯವರ ಹಿತಕ್ಕಾಗಿಯೇ? ತಾನು ಮಾಡಿದ ಸ್ವಯಂಕೃತ ಆಪರಾಧಕ್ಕಾಗಿಯೇ? ಯಾವುದಕ್ಕಾಗಿ? ಇದ್ಯಾವುದಕ್ಕೂ ಅಲ್ಲ...! ಅದು ಕೇವಲ ದೇಶಕ್ಕಾಗಿ, ಭಾರತ ಮಾತೆಯ ಮುಕ್ತಿಗಾಗಿ, ಭಾರತೀಯರ ನೆಮ್ಮದಿಗಾಗಿ, ನಮ್ಮ ನಾಳೆಗಳಿಗಾಗಿ ಅಂದು ಅವರ ವರ್ತಮಾನವನ್ನು, ಭವಿಷ್ಯವನ್ನು ಬಲಿಕೊಟ್ಟರು. ಆದರೆ ನಾವು ಅವರನ್ನು ಭೂತಕಾಲದಿಂದ ದರದರನೇ ಎಳೆದು ತಂದು ಈ ವರ್ತಮಾನದಲ್ಲಿ ಅವಮಾನ ಮಾಡುತ್ತಿದ್ದೇವೆ ಅದೆಂತ ದೌರ್ಭಾಗ್ಯ ಅವರದು. ಹಿಂದುತ್ವವನ್ನು ವಿರೋಧಿಸುವ ಆವೇಶದಲ್ಲಿ ದೇಶಕ್ಕಾಗಿ ದುಡಿದ ಸ್ವಾತಂತ್ರ್ಯ ಸೇನಾನಿಯನ್ನು ಅವಮಾನಗೊಳಿಸುವ ಇವರ ಮನಸ್ಥಿತಿಯನ್ನು ಏನೆನ್ನಬೇಕು ತಿಳಿಯುತ್ತಿಲ್ಲ. ಹಿಂದುತ್ವ ವಿರೋಧಿಸುವುದು ನಿಮ್ಮಿಷ್ಟವಾದರೆ ವಿರೋಧಿಸಿ ಆದರೆ ಕೇವಲ ಹಿಂದೂ ಎನ್ನುವ ಕಾರಣಕ್ಕಾಗಿ ಹೋರಾಟ ಮಾಡಿದ ಸಾವರ್ಕರ ಅವರನ್ನು ಅವಮಾನಿಸಬೇಡಿ ಎನ್ನುವುದು ಅಷ್ಟೆ ನಮ್ಮ ವಿಚಾರ.
ಇನ್ನೂ ಕೆಲವರ ವಾದ ಅವರೇನು ಬ್ರಿಟೀಷರಿಗೆ ಸಿಂಹಸ್ವಪ್ನವಾಗಿರಲಿಲ್ಲ ಎನ್ನುತ್ತಾರೆ. ಅಂತವರು ಸ್ವಲ್ಪ ಅರ್ಥಮಾಡಿಕೊಳ್ಳಬೇಕಾದ ವಿಚಾರ ಎಂದರೆ ಸ್ವಾತಂತ್ರ್ಯ ಚಳುವಳಿಯ ಕಾವು ದೇಶದೆಲ್ಲೆಡೆ ತುಂಬಿದ್ದ ಸಂದರ್ಭದಲ್ಲಿ ಸಾವರ್ಕರ ರಚಿಸಿದ “1857 ರ ಮಹಾ ಸ್ವಾತಂತ್ರ್ಯ ಸಂಗ್ರಾಮ” ಎನ್ನುವ ಕೃತಿ ಮುದ್ರಣಕ್ಕೂ ಮೊದಲೇ ನಿರ್ಬಂಧಕ್ಕೋಳಗಾಯಿತಲ್ಲ ಯಾವ ಕಾರಣಕ್ಕೆ ಎನ್ನುವುದು ಯಾವತ್ತಾದರು ವಿಚಾರ ಮಾಡಿದ್ದೀರಾ? ಕಾರಣ ಕೇವಲ ಎರಡು ಪುಟಗಳನ್ನು ಓದಿದ ಬ್ರಿಟೀಷರಿಗೆ ಎದೆ ನಡುಕ ಹೆಚ್ಚಿಸಿದ ಈ ಪುಸ್ತಕ ಏನಾದರೂ ಸ್ವಾತಂತ್ರ್ಯ ವೀರರ ಕೈಗೆ ಸಿಕ್ಕರೆ ಅದೇ ಅವರ ಹೋರಾಟದ ಭಗವ್ದೀತೆ ಆಗಬಹುದು ಎನ್ನುವ ಭಯ ಅವರನ್ನು ಆವರಿಸಿತ್ತು. ಅದಕ್ಕಾಗಿಯೇ ಮುದ್ರಣಕ್ಕೂ ಮೊದಲೇ ನಿರ್ಬಂಧ ಹೇರುತ್ತಾರೆಂದರೆ ನೀವೇ ಅರ್ಥ ಮಾಡಿಕೊಳ್ಳಿ ವೀರ್‌ಸಾವರ್ಕರ್ ಎಂದರೆ ಬ್ರಿಟೀಷರಿಗೆ ಭಯವಿರಲಿಲ್ಲವೇ? ಹಾಗೂ ಹೀಗೂ ಬ್ರಿಟೀಷರ ಕಣ್ಣುತಪ್ಪಿಸಿ ಮುದ್ರಣಕಂಡ ಆ ಪುಸ್ತಕವನ್ನು ಬ್ರಿಟೀಷರು ಬೇಟೆ ನಾಯಿಗಳಂತೆ ಮೂಸು ನೋಡುತ್ತ ಹುಡುಕಾಟ ಆರಂಭಿಸಿದ್ದರು. ಅವರ ಕಣ್ಣು ತಪ್ಪಿಸಿ ಆ ಕೃತಿಯನ್ನು ಜನ ಕಾಪಾಡಲು ಯತ್ನಿಸಿರುವುದನ್ನು ಕಂಡರೆ ನಮಗೆ ಸಾವರ್ಕರ ವ್ಯಕ್ತಿತ್ವ ಅರಿವಾಗಬಹುದು. ಯಾರಾ್ಯರಿಗೋ ಭಾರತ ರತ್ನ ನೀಡುವಾಗ ಯಾರೂ ಮಾತಾಡಲಿಲ್ಲ. ಧ್ಯಾನ್‌ಚಂದ್ ಗೆ ಸಿಗಬೇಕಾದ ಭಾರತರತ್ನ ತೆಂಡೂಲ್ಕರ್‌ಗೆ ನೀಡಿದಾಗಲೂ ಯಾರೂ ಚಕಾರವೆತ್ತಲಿಲ್ಲ, ಆದರೆ ಅಂದು ಒಬ್ಬ ದೇಶಪ್ರೇಮಿಯ ಹೆಸರು ಹೇಳಿದ ಕೂಡಲೇ ಪಕ್ಷ, ರಾಜಕೀಯ, ಧರ್ಮ, ಸಿದ್ಧಾಂತ ಎನ್ನುವ ನೂರಾರು ವಿಚಾರಗಳು ಒಮ್ಮೆಲೆ ಹೊರಹೊಮ್ಮಿರುವುದನ್ನು ನೋಡಿದರೆ ನಿಜಕ್ಕೂ ನಮ್ಮವರನ್ನು ಕಂಡು ನನಗೆ ಹೇಸಿಗೆ ಬರುತ್ತದೆ.
ಇಂದು ಸಾವರ್ಕರ ಹೆಸರನ್ನು ಮುಂಚೂಣಿಗೆ ತಂದು ಅವರೊಬ್ಬ ಹೇಡಿ ಎನ್ನುವ ಜನಗಳಿಗೆ ಭಹುಶಃ ಗೊತ್ತಿಲ್ಲವೋ ಅಥವಾ ಗೊತ್ತಿಲ್ಲದ ಜಾಣ ಕುರುಡೋ ಗೊತ್ತಿಲ್ಲ. ಈ ದೇಶವನ್ನು ಸ್ವಾತಂತ್ರ್ಯಗೊಳಿಸಲು ದೇಶಭಕ್ತರ ಸೇನೆಯನ್ನು ಕಟ್ಟಿ, ಆಝಾದ್ ಹಿಂದ್ ಪೌಜ್ ಎಂದು ಹೆಸರು ನೀಡಿ ಭಾರತಕ್ಕೆ ನುಗ್ಗಿ ಬ್ರಿಟೀಷರನ್ನು ಸದೆ ಬಡೆಯುತ್ತೇನೆ ಎಂದು ಬೋಸ್ ಅವರು ಹೇಳಿದಾಗ ನಮ್ಮ ದೇಶದ ಶ್ರೇಷ್ಠ ನಾಯಕರು ಎಂದು ಹೇಳಿಕೊಳ್ಳುವ ಪುಣ್ಯಾತ್ಮರು ಆಜಾದ್ ಹಿಂದ್ ಪೌಜ್ ವಿರುದ್ಧವೇ ಕತ್ತಿ ಹಿಡಿದು ಹೋರಾಡುತ್ತೇನೆ ಎಂದು ಹೇಳಿಕೆ ನೀಡಿದರು. ಬ್ರಿಟೀಷ್ ಸರ್ಕಾರ ನಮ್ಮನ್ನು ನಾಯಿಗಳಿಗಿಂತ ನಮ್ಮನ್ನು ಕಡೆಯಾಗಿ ನೋಡುವಾಗ ಅವರ ವಿರುದ್ಧ ಚಕಾರವೆತ್ತದ ಇವರು ನಮ್ಮವರ ವಿರುದ್ಧ ಕತ್ತಿ ಎತ್ತುತ್ತೇನೆ ಎನ್ನುತ್ತಾರಲ್ಲ ಇವರೆಲ್ಲ ಏನು? ಈ ಪ್ರಶ್ನೆಗೆ ಹಾರಿಕೆ ಉತ್ತರ ಅಷ್ಟೆ. ಇಲ್ಲಿ ಪಕ್ಷ ರಾಜಕೀಯವನ್ನು ಮುಂದಿಟ್ಟುಕೊಂಡು ಒಬ್ಬ ದೇಶಭಕ್ತನಿಗೆ ಅವಮಾನವಾಗುವ ರೀತಿಯ ಹೇಳಿಕೆಯನ್ನು ನೀಡುವುದು ಸರಿಯಲ್ಲ. ದೇಶಕ್ಕಾಗಿ ಏನು ಮಾಡದೇ ಬಡಾಯಿಕೊಚ್ಚಿಕೊಂಡು ಬದುಕುತ್ತಿರುವ ನಮಗಳಿಗೆ ಕನಿಷ್ಠ ಅವರ ಹೆಸರನ್ನು ಹೇಳುವ ಯೋಗ್ಯತೆ ಕೂಡ ಇಲ್ಲ. ಅವರು ಮಹಾತ್ಮರು, ಆದರೆ ನಾವುಗಳು ಪರಮ ಸ್ವಾರ್ಥಿಗಳು, ಅವರು ದೇಶಕ್ಕಾಗಿ ಸ್ವಂತ ಬದುಕನ್ನೆ ಮರೆತವರು, ಆದರೆ ನಾವು ಬದುಕಿಗಾಗಿ ದೇಶವನ್ನೇ ಮಾರಿಕೊಳ್ಳುವಂತ ಕಪಟಿಗಳು, ಅವರು ಆವಿಶ್ಯವೀಡೀ ದೇಶ ಎನ್ನುತ್ತಲೇ ಇದ್ದರು, ಆದರೆ ನಾವು ಬರೀ ಸ್ವಾಹಾ ಎನ್ನುವುದರಲ್ಲಿಯೆ ಬದುಕಿರುವಾಗ ಅಂತ ಮಹಾತ್ಮರ ಅರಿವು ನಮಗಾಗುವುದಿಲ್ಲ ಬಿಡಿ. ಸಾವರ್ಕರ್‌ಗೆ ಭಾರತ ರತ್ನ ಕೊಡುತ್ತೀರೋ ಬಿಡುತ್ತೀರೋ ನನಗೆ ಬೇಕಿಲ್ಲ; ಅದರೆ ಆ ಒಂದು ಕಾರಣಕ್ಕಾಗಿ ಅವರನ್ನು ಅವಮಾನಿಸುವ ಮತ್ತು ಅವರ ತ್ಯಾಗವನ್ನು ಪ್ರಶ್ನಿಸುವ ಹೇಯ ಕಾರ್ಯವನ್ನು ಮಾತ್ರ ದಯವಿಟ್ಟು ಮಾಡಬೇಡಿ. ಮೊದಲೇ ನಮ್ಮ ಯುವಜನತೆಯಲ್ಲಿ ದೇಶಾಭಿಮಾನ ಮರೆಯಾಗುತ್ತಿದೆ. ನೀವದನ್ನು ಇನ್ನಷ್ಟು ಅದಃಪಥನಕ್ಕೆ ಕೊಂಡೊಯ್ಯಬೇಡಿ ಎನ್ನುವುದು ನನ್ನ ಆಸೆ. ನೀವು ಅವರನ್ನು ಒಪ್ಪಿಕೊಳ್ಳದೇ ಇದ್ದರೂ ಪರವಾಗಿಲ್ಲ ಅವಮಾನ ಮಾಡಬೇಡಿ. ದೇಶಕ್ಕಾಗಿ ಕಾಲಾಪಾನಿ ಶಿಕ್ಷೆ ಅನುಬವಿಸಿದ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಬೇಕಲ್ಲವೇ? ಗೌರವ ಸಲ್ಲಿಸಲು ಆಗದಿದ್ದರೂ ಪರವಾಗಿಲ್ಲ. ಈ ರೀತಿ ವರ್ತನೆ ತೋರಿ ನಮ್ಮತನವನ್ನು ನಾವೇ ಕಳೆದುಕೊಳ್ಳುವುದು ಬೇಡ ಎನ್ನುವುದು ನನ್ನ ಮಾತು. ದೇಶಕ್ಕಾಗಿ ಯಾರು ದುಡಿದರು ಅವರು ದೇಶಾಭಿಮಾನಿಗಳೇ, ಹೀಗಿರುವಾಗ ಅವರಲ್ಲಿ ಧರ್ಮ, ಜಾತಿ, ಪಂಥ ಹುಡುಕಿ ಅವರ ತ್ಯಾಗ ಬಲಿದಾನಕ್ಕೆ ಚ್ಯುತಿ ತರುವುದು ಬೇಡ. ಅವರ ಬಗ್ಗೆ ತಿಳಿದುಕೊಳ್ಳದ ಮಾತಿನ ವೀರರ ನುಡಿಗಳಿಗೆ ಅರ್ಥವೇ ಇಲ್ಲ. ಆದರೂ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟು ಅಪಮಾನದ ಮಾತುಗಳನ್ನಾಡಿದವರು ಇನ್ನಾದರೂ ಬದಲಾಗಲಿ. ಆದರೂ ಕೇಳಿಕೊಳ್ಳುತ್ತೇನೆ ಸಾವರ್ಕರ್‌ಜಿ ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ...! ಈ ಮಾತನ್ನು ಬಿಟ್ಟು ಹೇಳುವುದಕ್ಕೆ ನನ್ನ ಬಳಿ ಏನು ಇಲ್ಲ. ನಿಮ್ಮಂತ ದೇಶಭಕ್ತರು ನಾವಲ್ಲ. ನಿಮ್ಮ ಹಾಗೆ ಬದುಕುವ ತಾಕತ್ತೂ ನಮ್ಮಲ್ಲಿಲ್ಲ. ಕನಿಷ್ಠ ನಿಮ್ಮ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುವ ಯೋಗ್ಯತೆಯೂ ಇಲ್ಲದ ಪಾಪಿಗಳು. ಯುವಕರಿಗೆ ಸ್ಪೂರ್ತಿ ಅಗಬೇಕಾದ ನಿಮ್ಮನ್ನು, ನಿಮ್ಮ ತ್ಯಾಗವನ್ನು ಎಷ್ಟು ಹೊಗಳಿದರು ಕಡಿಮೆಯೇ. ಇನ್ನಾದರೂ ನಿಮ್ಮ ವಿಚಾರಗಳು ನಮ್ಮ ಎದೆಯಲ್ಲಿ ಆಸ್ಪೋಟವಾಗಲಿ. ಭಾರತಾಂಬೆಯ ಮಕ್ಕಳ ಬಾಳು ಹಸನಾಗಲಿ.
-= * * * =-