ಕ್ಷಮಿಸಿ, ಪೆರಿಯಾರ್ ಕುರಿತ ಹೇಳಿಕೆಗೆ ವಿಷಾದವಿಲ್ಲ, ಕ್ಷಮೆ ಕೋರುವುದೂ ಇಲ್ಲ-ರಜನೀಕಾಂತ್

ಚೆನ್ನೈ, ಜ22 :     ಪೆರಿಯಾರ್ ಅವರು 1971ರಲ್ಲಿ ನಡೆಸಿದ ಮೆರವಣಿಗೆಯ ಬಗ್ಗೆ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ನಟ ರಜನೀಕಾಂತ್ ಅವರು, ಈ ಕುರಿತಂತೆ ತಾವು ಕ್ಷಮೆ ಕೋರುವುದಿಲ್ಲ ಇಲ್ಲವೇ ಇದಕ್ಕಾಗಿ ವಿಷಾದವನ್ನು ವ್ಯಕ್ತಪಡಿಸುವುದೂ ಇಲ್ಲ ಎಂದು ಹೇಳಿದ್ದಾರೆ. 

ಕ್ಷಮೆ ಕೋರುವಂತೆ ಒತ್ತಾಯಿಸಿ ಪೆರಿಯಾರ್ ದ್ರಾವಿಡರ್ ಕಳಗಂ(ಪಿಡಿಕೆ) ಕಾರ್ಯಕರ್ತರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಪೋಯಿಸ್ ಗಾರ್ಡನ್ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹೇಳಿಕೆ ಊಹಾಪೋಹವಲ್ಲ ಎಂದಿದ್ದಾರೆ. ತಮ್ಮ ಹೇಳಿಕೆಗೆ ಪೂರಕವಾಗಿ 2017ರಲ್ಲಿ ಔಟ್‍ಲುಕ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಉಲ್ಲೇಖಿಸಿದ್ದಾರೆ.  

‘ಕೇಳಿರುವುದನ್ನು ಮತ್ತು ಪತ್ರಿಕೆಯಲ್ಲಿ ಪ್ರಕಟವಾಗಿರುವುದರ ಬಗ್ಗೆ ಹೇಳಿಕೆ ನೀಡಿದ್ದೇನೆ.’ ಎಂದು ಹೇಳಿರುವ ರಜನೀಕಾಂತ್, ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಔಟ್‍ಲುಕ್‍ನಲ್ಲಿ ಪ್ರಕಟವಾದ ವರದಿಯ ಬಗ್ಗೆ ಉಲ್ಲೇಖಿಸಿದ ಅವರು, ಪೆರಿಯಾರ್ ಅವರ ನೇತೃತ್ವದಲ್ಲಿ 1971ರಂದು ಸೇಲಮ್ ನಲ್ಲಿ ನಡೆದ ಮೆರವಣಿಗೆಯಲ್ಲಿ ಶ್ರೀರಾಮ ಮತ್ತು ಸೀತೆಯ ವಿಗ್ರಹಗಳಿಗೆ ಚಪ್ಪಲಿ ಹಾರ ಹಾಕಲಾಗಿತ್ತು.’ ಎಂದು ಹೇಳಿದ್ದಾರೆ. 

‘ತಾವು ಇದನ್ನು ಉಲ್ಲೇಖಿಸುತ್ತಿದ್ದಂತೆ ವಿವಾದ ಸೃಷ್ಟಿಯಾಗಿದೆ. ತಮ್ಮಿಂದ ಕ್ಷಮೆಗೂ ಒತ್ತಾಯಿಸಲಾಗುತ್ತಿದೆ. ಆದರೆ ತಾವು ವರದಿಯ ಹೊರತಾಗಿ ಬೇರೆ ಏನನ್ನೂ ಹೇಳಿಲ್ಲ.’ ಎಂದು ರಜನೀಕಾಂತ್ ಪತ್ರಿಕೆ ವರದಿಯನ್ನು ತೋರಿಸಿದ್ದಾರೆ. 

‘ಕ್ಷಮಿಸಿ ನಾನು ಕ್ಷಮೆ ಕೋರುವುದಿಲ್ಲ.’ ಎಂದು ಹೇಳಿರುವ ರಜನೀಕಾಂತ್, ಮೆರವಣಿಗೆ ವೇಳೆ ಹಾಜರಿದ್ದ  ಅಂದಿನ ಜನಸಂಘದ ನಾಯಕ ಲಕ್ಷ್ಮಣನ್ (ಈ ಬಿಜೆಪಿಯಲ್ಲಿದ್ದಾರೆ) ಇದನ್ನು ಧೃಡಪಡಿಸಿದ್ದಾರೆ. 

ಹಳೆಯ ಇಂತಹ ಘಟನೆಗಳನ್ನು ಪದೇ ಪದೇ ಕೆದಕಬಾರದು. ಇದು ನಿರಾಕರಿಸಬೇಕೆನ್ನು ವಿಷಯವಾಗಿಲ್ಲವಾದರೂ, ಇದನ್ನು ಮರೆಯಬೇಕು ಎಂದು  ಹೇಳಿದ್ದಾರೆ.