ನವದೆಹಲಿ, ಫೆ12 : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಕಾಂಗ್ರೆಸ್ ಸೋಲು ಕಂಡ ನಂತರ ಪಕ್ಷದ ಹಿರಿಯ ದೆಹಲಿ ಉಸ್ತುವಾರಿಯಾಗಿದ್ದ ಪಿಸಿ ಚಾಕೊ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಚಾಕೊ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕಳುಹಿಸಿದ್ದಾರೆ.
ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಭಾಷ್ ಚೋಪ್ರಾ ರಾಜೀನಾಮೆ ನೀಡಿದ ಬೆನ್ನಲ್ಲೇ ಚಾಕೊ ಸಹ ರಾಜಿನಾಮೆ ನೀಡಿದ್ದಾರೆ. ಪಕ್ಷದ ನೀರಸ ಪ್ರದರ್ಶನದ ನೈತಿಕ ಜವಾಬ್ದಾರಿಯನ್ನು ಹೊತ್ತಿಕೊಂಡು ರಾಜಿನಾಮೆ ನೀಡಿರುವುದಾಗಿ ಹೇಳಿದ್ದಾರೆ.
70 ಸದಸ್ಯರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ, ಅಲ್ಲಿ ಆಮ್ ಆದ್ಮಿ ಪಕ್ಷವು 62 ಸ್ಥಾನಗಳನ್ನು ಮತ್ತು ಬಿಜೆಪಿ 8 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ.
ಈ ನಡುವೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಕ್ಕಾಗಿ ಅಭಿನಂದಿಸಿದ್ದಾರೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇಜ್ರಿವಾಲ್ ಅವರನ್ನು ಮಂಗಳವಾರವೇ ಅಭಿನಂದಿಸಿದ್ದರು.
ಕಾಂಗ್ರೆಸ್ ಕಳಪೆ ಸಾಧನೆಗೆ ಮೂರು ಬಾರಿ ದೆಹಲಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಅವರನ್ನು ಚಾಕೊ ದೂಷಿಸಿದ್ದರು ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗಲೇ ಪಕ್ಷದ ಅವನತಿ ಪ್ರಾರಂಭವಾಗಿ ಎಎಪಿಯ ಹೊಸ ಪ್ರವೇಶವು ಇಡೀ ಕಾಂಗ್ರೆಸ್ ಮತ ಬ್ಯಾಂಕ್ ಕಸಿಯಿತು ಎಂದೂ ಅವರು ಹೇಳಿ ಹಲವರ ಕೆಂಗಣ್ಣಿಗೆ ಅವರು ಗುರಿಯಾಗಿದ್ದರು.
ಇದಕ್ಕಾಗಿ ಹಿರಿಯ ಕಾಂಗ್ರೆಸ್ ಮುಖಂಡ ಮಿಲಿಂದ್ ಡಿಯೋರಾ ಅವರು ಚಾಕೊ ಅವರನ್ನು ಟೀಕಿಸಿದ್ದರು.
ಶೀಲಾ ದೀಕ್ಷಿತ್ ಜಿ ಗೌರವಾನ್ವಿತ ರಾಜಕಾರಣಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೆಹಲಿ ರೂಪಾಂತರಗೊಂಡಿತು ಮತ್ತು ಕಾಂಗ್ರೆಸ್ ಎಂದಿಗಿಂತಲೂ ಬಲವಾಗಿತ್ತು. ಅವರ ನಿಧನದ ನಂತರ ಈಗ ದೂಷಣೆ ಮಾಡುವುದು ಸರಿಯಲ್ಲ ಇದು ದುರದೃಷ್ಟಕರ ಎಂದೂ ಡಿಯೋರಾ ಟ್ವೀಟ್ ಮಾಡಿದ್ದಾರೆ.