ಮೋದಿ ಸರ್ಕಾರದ ವಿರುದ್ಧ ಗುಡುಗಿದ ಸೋನಿಯಾ

SONIYA

  ನವದೆಹಲಿ, ನ 28-ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೃತ್ಯದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತೊಡಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ಮಾಡಿದ್ದಾರೆ.

  ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಮಾತಿನ ಉದ್ದಕ್ಕೂ ಮೋದಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ತರಾಟೆಗೆ ತೆಗೆದುಕೊಂಡರು. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲಾರದಷ್ಟು ಅಧಃಪತನಕ್ಕೆ ಇಳಿದಿದ್ದರೂ ಅದನ್ನು ಸರಿಪಡಿಸುವ ಕಡೆಗೆ ಕಿಂಚಿತ್ತೂ ಗಮನ ಕೊಡದ, ಕಾಳಜಿ ವಹಿಸದ ನರೇಂದ್ರ ಮೋದಿ ಅವರು ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಪ್ರಸಂಗ ಎಂದು ದೂರಿದರು. 

  ಮೋದಿ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಪಕ್ಷ, ದೇಶದ ಉದ್ದಗಲಕ್ಕೂ ಹೋರಾಟ ಮಾಡಲಿದೆ ಎಂದು ಸೋನಿಯಾ ಗುಡುಗಿದ್ದಾರೆ.

  ರಾಜಕೀಯ ವಿರೋಧಿಗಳನ್ನು ಕಾನೂನಿನ ವಿರುದ್ಧವಾಗಿ ಮಟ್ಟಹಾಕಿ ರಾಜಕೀಯ ಸೇಡು ತೀರಿಸಿಕೊಳ್ಳಲು ಮೋದಿ ಸರ್ಕಾರ ಹೊರಟಿದೆ. ಮಾಜಿ ಕೇಂದ್ರ ಚಿದಂಬರಂ ಅವರನ್ನು ಸಂಸತ್ತಿಗೆ ಬರಲು ಅವಕಾಶ ಮಾಡಿಕೊಡದಂತೆ ಕಳೆದ ನೂರು ದಿನಗಳಿಂದಲೂ ಅವರು ಜೈಲಿನಲ್ಲಿಯೇ ಇರುವಂತೆ ಮಾಡಲಾಗಿದೆ ಎಂದು ಅವರು ದೂರಿದರು.

  ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಬಿಜೆಪಿ ಯತ್ನಿಸಿ ಮುಖಭಂಗ ಅನುಭವಿಸಿದೆ. ಬಿಜೆಪಿಯ ಕುತಂತ್ರವನ್ನು ಕೊನೆಗಾಣಿಸುವ ಉದ್ದೇಶದಿಂದಲೇ ಶಿವಸೇನೆ ಮತ್ತು ಎನ್ ಸಿ ಪಿ ಜೊತೆ ಕಾಂಗ್ರೆಸ್ ಕೈಜೋಡಿಸಿದೆ ಎಂದು ಅವರು ಮಹಾರಾಷ್ಟ್ರ ಬೆಳವಣಿಗೆ ಬಗ್ಗೆ ಪಕ್ಷದ ನಿಲುವನ್ನು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. 

  ದೇಶದ ಆರ್ಥಿಕ ಪರಿಸ್ಥಿತಿಯನ್ನು ತಹಬಂದಿಗೆ ತರಲಾಗದವರು, ದೇಶದ ಬೇರೆ ಯಾವುದೇ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾರೆ? ಎಂದು ಪ್ರಶ್ನೆ ಮಾಡಿದರು.

  ನಿರುದ್ಯೋಗ ದಿನೇ ದಿನೇ ಹೆಚ್ಚಾಗುತ್ತಿದೆ. ಬಂಡವಾಳ ಹೂಡಿಕೆ ಪ್ರಮಾಣ ದಿನೇ ದಿನೇ ಕುಸಿಯುತ್ತಿದೆ. ಉದ್ಯಮ ವಲದಯಲ್ಲಿ ಆತಂಕ ಮನೆ ಮಾಡಿದೆ, ತರಾತುರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಜಿ ಎಸ್ ಟಿ ಯನ್ನು ಜಾರಿಗೆ ತರುವ ಮೂಲಕ ಸಣ್ಣ ಕೈಗಾರಿಕೆಗಳು ನೆಲ ಕಚ್ಚುವಂತೆ ಮಾಡಲಾಗಿದೆ. ಇದರ ಪರಿಣಾಮ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡು ನಾಳಿನ ಭವಿಷ್ಯ ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

  ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗದಷ್ಟು ಅಧೋಗತಿಗಿಳಿದಿದೆ. ಬ್ಯಾಂಕ್ ಗಳು ದಿವಾಳಿ ಅಂಚಿಗೆ ಹರಿಯುತ್ತಿದೆ. ಸಾರ್ವಜನಿಕರು ತಮ್ಮ ಬ್ಯಾಂಕ್ ಠೇವಣಿಗೂ ಖಾತರಿ ಇಲ್ಲವೆಂದು ಚಿಂತಾಕ್ರಾಂತರಾಗಿದ್ದಾರೆ ಎಂದು ಸೋನಿಯಾ ವಾಗ್ದಾಳಿ ಮಾಡಿದರು.