ಜನರ ಆರೋಗ್ಯಕ್ಕೆ ಭೂಮಿಯ ಫಲವತ್ತತೆ ಮೂಲಾಧಾರ

ವಿಶ್ವಸಂಸ್ಥೆ  ಪ್ರತಿ ವರ್ಷ ಡಿಸೆಂಬರ್ ನಲ್ಲಿ “ ವಿಶ್ವ ಭೂಮಿ ದಿನ “ ಎಂದು ಆಚರಿಸುತ್ತಾ ಬಂದಿದೆ. ಈ ಸಂದರ್ಭದಲ್ಲಿ ಭೂಮಿ ರಕ್ಷಣೆ ಕುರಿತು ಜಾಗೃತಿಯನ್ನು ಮೂಡಿಸುವ ಉದ್ದೇಶ ನನ್ನದು. 

ಈ ಭೂಮಿಯಲ್ಲಿ ಮನುಷ್ಯ ಮಾತ್ರ ಅಲ್ಲ ಎಷ್ಟೋ ಜೀವ ಸಂಕುಲಗಳು, ಸಸ್ಯಗಳು, ಸೂಕ್ಷ್ಮಾಣುಗಳು, ಹೀಗೆ ಎಲ್ಲ ಜೀವರಾಶಿಗಳನ್ನು ಭೂಮಿ ತನ್ನ ವಡಲಿನಲ್ಲಿ ಇಟ್ಟುಕೊಂಡು ಸಾಕುತ್ತಿದೆ. ಆದರೆ ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಮನುಷ್ಯ ಮಾತ್ರ ಭೂಮಿಗೆ ಕಂಟಕವಾಗಿದ್ದಾನೆ. 

ಭೂಮಿತಾಯಿಯ ಮೇಲೆ ಮನುಕುಲದ ಯತೇಚ್ಛ ದಬ್ಬಾಳಿಕೆಯಿಂದ ಮಣ್ಣಿನ ಸವಕಳಿ ಉಂಟಾಗುತ್ತಿದೆ. ಮಣ್ಣಿನ ಫಲವತ್ತತೆ ಕಾಪಾಡುವ ಮೂಲಕ ಸವಕಳಿಯನ್ನು ತಡೆಯಬೇಕಾಗಿದೆ. 

ಮಣ್ಣಿನಲ್ಲಿಯ ಜೀವರಸಾಯನಿಕ ಎನಿಸಿರುವ ಸೂಕ್ಷ್ಮ ಜೀವಿಗಳನ್ನು ಕಾಪಾಡಿ ಭೂಮಿಯ ಮೇಲಿರುವ ಮನುಕುಲ ಹಾಗೂ ಜೀವಜಗತ್ತನ್ನು ರಕ್ಷಿಸುವ ತುರ್ತು ಅಗತ್ಯವಿದೆ. 

ಪ್ರಪಂಚದ ಪ್ರತಿ ದೇಶಗಳು ಭೂಮಿಯ ಸವಕಳಿಯನ್ನು ತೆಡೆಯುವ ಮೂಲಕ ಮನುಕುಲ ಹಾಗೂ ಜೀವಜಗತ್ತನ್ನು ರಕ್ಷಿಸಬೇಕಾಗಿದೆ. ಭೂಮಿಯ ಫಲವತ್ತತೆ ಹಾಗೂ ಮಣ್ಣಿನ ಸವಕಳಿಯಿಂದ ಜಗತ್ತಿನಾದ್ಯಂತ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಮನುಕುಲದ ಪ್ರಗತಿ ಕುಸಿಯುತ್ತಿದೆ. 

ಯಾವುದೇ ದೇಶವಿರಲಿ ಅದಕ್ಕೆ ತನ್ನ ಜನರ ಆರೋಗ್ಯ ಹಾಗೂ ಫಲವತ್ತಾದ ಭೂಮಿಯೊಂದೇ ಮೂಲಾಧಾರವಾಗಿರುತ್ತದೆ. ಮಾನವ ಪ್ರಗತಿಗೆ ಭೂಮಿಯ ಆರೋಗ್ಯವೇ ಮೂಲಾಧಾರ. ಭೂಮಿ ಫಲವತ್ತಾಗಿದ್ದರೆ ಮಾತ್ರ ಸೂಕ್ತ ಸಾಗುವಳಿಯಿಂದ ಗುಣಮಟ್ಟದ ಆಹಾರ ಉತ್ಪಾದಿಸಲು ಸಾಧ್ಯವಾಗೂವ ಮೂಲಕ ಅಭಿವೃದ್ಧಿ ಹೊಂದಬಹುದು. ಈ ಭೂಮಿಯ ಮೂಲಕವೇ ಶೇಕಡಾ 95ಅ ರಷ್ಟು ಆಹಾರವನ್ನು ಹಾಗೂ ಶೇಕಡಾ 99.09ಅ ಕುಡಿಯುವ ನೀರನ್ನು ಪಡೆಯುತ್ತೇವೆ. ಅಲ್ಲದೆ ಇಂಗಾಲವನ್ನು ಮಣ್ಣಿನಲ್ಲಿ ಸ್ವೀಕರಿಸಿ ಮಾಲಿನ್ಯವನ್ನು ತಗ್ಗಿಸಿ ಬೆಳೆಗಳಿಗೆ ನೀರು ಮತ್ತು ಪೋಷಕಾಂಶಗಳನ್ನು ಒದಗಿಸುವ ಮೂಲಕ ಅರಣ್ಯ ಮತ್ತು ಆಹಾರ, ಬಟ್ಟೆ, ಕಟ್ಟಿಗೆ, ಮತ್ತು ಓಷಧಿಗಳನ್ನು ಒದಗಿಸುವ ವ್ಯವಸ್ಥೆಯನ್ನು ಭೂಮಿ ಪೋಷಿಸುವ ಮೂಲಕ ಮನುಷ್ಯನ ಜೀವನದಲ್ಲಿ ಭೂಮಿ ತಾಯಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾಳೆ ಎಂಬ ಸ್ಮರಣೆ ನಮ್ಮಲ್ಲಿರಬೇಕಿದೆ. 

ಮನುಷ್ಯ ಜೀವಿಯ ಜೊತೆಗೆ ಪ್ರಾಣಿಗಳು, ಹಕ್ಕಿಗಳಿಗೂ ಭೂಮಿ ತಾಯಿ ಆಹಾರ ಒದಗಿಸುತ್ತಾಳೆ. ಫಲವತ್ತಾದ ಭೂಮಿ ಹೆಚ್ಚು ಆಹಾರ ಧಾನ್ಯಗಳನ್ನು ಒದಗಿಸುತ್ತದೆ. ಇತ್ತೀಚೆಗೆ ಹಲವಾರು ಕಾರಣಗಳಿಂದಾಗಿ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಇದಕ್ಕೆ ಮಣ್ಣಿನ ಸವಕಳಿ ಸೇರಿದಂತೆ ಅನೇಕ ಸಮಸ್ಯಗಳು ಒಂದೊಂದಾಗಿ ಕಾರಣವಾಗುತ್ತಿವೆ. 

ದೇಶದ ಉದ್ದಗಲಕ್ಕೂ ಮಣ್ಣನ್ನು ಬೇಕಾಬಿಟ್ಟಿಯಾಗಿ ಮತ್ತು ಅಪಾಯಕಾರಿಯಾಗಿ ಬಳಸಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳ ಬಳಕೆ, ಅವೈಜ್ಞಾನಿಕ ನೀರು ನಿರ್ವಹಣೆ ಮತ್ತು ತಪ್ಪು ಸಾಗುವಳಿ ಪದ್ಧತಿಗಳಿಂದಾಗಿ ಮಣ್ಣು ಮಾಲಿನ್ಯವಾಗಿ ಸವಕಳಿ ಉಂಟಾಗುತ್ತಿದೆ. ಇದರಿಂದ ಫಲವತ್ತತೆ ನಷ್ಟವಾಗಿ ಆಹಾರ ಉತ್ಪಾದನೆ ಕುಸಿಯುತ್ತಿದೆ. ಮಣ್ಣು ಸವಕಳಿ ಉಂಟಾಗುತ್ತಿದ್ದು, 8.29 ಲಕ್ಷ ಹೆಕ್ಟೇರ್‌ನಷ್ಟು ಮೇಲ್ಮಣ್ಣು ಪದರು ನಾಶವಾಗಿದೆ. ಪ್ರತಿ ವರ್ಷ 5,536 ಟನ್ ಫಲವತ್ತಾದ ಮಣ್ಣು ಹಾಗೂ 88 ಲಕ್ಷ ಟನ್ ಪೋಷಕಾಂಶಗಳು ನಾಶವಾಗುವ ಮೂಲಕ ಆಹಾರ ಉತ್ಪಾದನೆ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಅಧ್ಯಯನಗಳು ತಿಳಿಸುತ್ತವೆ. ಮರಗಳ ಕಡಿಯುವಿಕೆ, ಅತಿಯಾದ ಮಳೆ ಮುಂತಾದವುಗಳಿಂದಾಗಿ ವೇಗವಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ. ಮುಂಬರುವ ದಿನಗಳಲ್ಲಿ ಇದೆ ವ್ಯವಸ್ಥೆ ಮುಂದುವರೆದರೆ ಬರ ಸಮಸ್ಯೆ ಉಲ್ಭಣವಾಗುವ ಪರಿಸ್ಥಿತಿ ತಲೆದೋರಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. 

ಮಣ್ಣಿನ ಸವಕಳಿಯನ್ನು ಕಡಿಮೆ ಮಾಡಲು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಬೇಕಿದೆ. ಮರಗಳನ್ನು ಬೆಳಸುವ ಅವಶ್ಯಕತೆ ಇದೆ. ಅರಣ್ಯನಾಶ ತಪ್ಪಿಸಬೇಕಿದೆ. ಅದರಂತೆ ಮಣ್ಣಿನ ಸವಕಳಿ ತಡೆಗಟ್ಟಲು ಸಸ್ಯಗಳ ಕವಚ ಹುಲ್ಲು ಬೆಳೆಸಬೇಕಿದೆ. ಇದರಿಂದ ನೈಸರ್ಗಿಕವಾಗಿ ಸಂರಕ್ಷಣೆಯಾಗುತ್ತದೆ. ಬೆಳೆಗಳ ಸರದಿ ವ್ಯವಸ್ಥೆಯನ್ನು ಬಳಸಿಕೊಂಡು ಭೂಮಿಯಲ್ಲಿ ಕೃಷಿ ಮಾಡಬೇಕಿದೆ. ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಪ್ರತಿ ದಿನ ಕಾರ‌್ಯ ಮಾಡುವಾಗ ಭೂಮಿಯ ಕುರಿತು ಚಿಂತಿಸಬೇಕಿದೆ. ಭೂಮಿಗೆ ಹಾನಿಯಾಗುವ ಕಾರ‌್ಯ ಮಾಡಬಾರದು ಈ ನಿಟ್ಟಿನಲ್ಲಿ ಪರಿಸರ ಜೊತೆ ಬೆರೆಯಿರಿ, ಪ್ಲಾಸ್ಟಿಕ್ ಬಳಕೆ ಮಾಡುವದು ಬೇಡ, ಮರುಬಳಕೆಯ ವಸ್ತುಗಳನ್ನು ಉಪಯೋಗಿಸಿ, ಸಾವಯವ ವಸ್ತುಗಳನ್ನು ಖರೀದಿಸಿ, ಮನೆಯಲ್ಲಿ ಕಸದಿಂದ ಸಾವಯವ ಗೊಬ್ಬರ ತಯಾರಿಸಿ, ಗಾರ್ಡನ್ ಮಾಡಿ, ಪ್ಲಾಸ್ಟಿಕ್ ಚೀಲ ಬಾಟಲ್ ಬಳಸಬೇಡಿ ಈ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. 

ಭೂಮಿ ಇರುವದು ನಮ್ಮ ಮನಸೋ ಇಚ್ಚೆ ಬಳಸಿ ಹಾಳು ಮಾಡಲು ಅಲ್ಲ. ನಮ್ಮ ಬದುಕಿಗೆ ಹಾಗೂ ಮುಂದಿನ ಪೀಳಿಗೆಗೆ ಉಳಿಸಿ ಬಳುವಳಿಯಾಗಿ ಕೊಡುವದಕ್ಕೆ ಎಂಬುದನ್ನು ನಾವೆಲ್ಲರು ಅರ್ಥ ಮಾಡಿಕೊಳ್ಳಬೇಕು.  

ವ್ಯವಸಾಯಕ್ಕೆ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚು ಬಳಸುತ್ತಿದ್ದು ಇದರಿಂದ ಪರಿಸರದ ಜೊತೆಗೆ ಮಾನವ ಆರೋಗ್ಯದ ಮೇಲು ದುಷ್ಟಪರಿಣಾಮ ಉಂಟಾಗುತ್ತಿದೆ. ಇದರಿಂದ ಮನುಷ್ಯನ ಆರೋಗ್ಯ ಹದಗೆಟ್ಟು ನೂರೆಂಟು ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾನೆ. 

ಅತಿಯಾದ ರಾಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಅನ್ನದಾತ (ರೈತರು) ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬೇಕು. 

ಬೆಳೆಯಲ್ಲಿ ಹೆಚ್ಚಿನ ಇಳುವರಿ, ಹೆಚ್ಚು ಆದಾಯ ಪಡೆಯುವ ಉತ್ಸುಕತೆಯಲ್ಲಿ ಅನ್ನದಾತ  ಸಾವಯವ ಗೊಬ್ಬರ ಮರೆತು ರಾಸಾಯನಿಕ ಗೊಬ್ಬರ ಬಳಸುತ್ತಿರುವದು ಕೃಷಿಗೆ ಮಾರಕವಾಗಿದೆ. ಕಳೆನಾಶಕ ಸಿಂಪಡಣೆ ಹೆಚ್ಚುತ್ತಿರುವ ಪರಿಣಾಮ ಭೂಮಿ ಫಲವತ್ತತೆ ಕುಸಿತ ಕಾಣುತ್ತಿದೆ. ಅಲ್ಲದೇ ಉತ್ತಮ ಇಳುವರಿ ಬರುತ್ತಿಲ್ಲ ಎಂದು ಕೃಷಿ ವಿಜ್ಞಾನಿಗಳು ತೀವೃ ಆತಂಕ ವ್ಯಕ್ತಪಡಿಸಿದ್ದಾರೆ. 

ಈ ಹಿಂದೆ ಜಾನುವಾರಗಳನ್ನು  ಕುಟುಂಬದ ಸದಸ್ಯರಂತೆ ಪರಿಗಣಿಸಿ ಅವುಗಳನ್ನು ಸಂರಕ್ಷಿಸಿ ಪೋಷಣೆ ಮಾಡಿ ದನಕರುಗಳು, ಕುರಿ ಮುಂತಾದ ಸಾಕು ಪ್ರಾಣಿಗಳ ಸಾಕಾಣಿಕೆಯಿಂದ ಸಾಕಷ್ಟು ಜೈವಿಕ ಗೊಬ್ಬರ ಪಡೆದು ಭೂಮಿಯನ್ನು ಹದಮಾಡಿಕೊಳ್ಳುವ ಪರಂಪರೆಯನ್ನು ನಮ್ಮ ಹಿರಿಯರು ಅನುಸರಿಸುತ್ತಿದ್ದರು. ಹೊಸ ತಲೆಮಾರು ಆ ಪದ್ಧತಿಯನ್ನು ಕಡೆಗಣಿಸುತ್ತ ಬಂದ ಪರಿಣಾವಾಗಿ ಇಂದು ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ. 

ಸಾವಯವ ಕೃಷಿಯಲ್ಲೆ ಉತ್ತಮ ಫಸಲು ಕಾಣುತ್ತಿದ್ದ ರೈತರು ಇಗ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಪರಿಣಾಮ ಭೂಮಿಯ ಫಲವತ್ತತೆ ಹಾಳು ಮಾಡುವ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ದೊರಕದೆ ಮನುಷ್ಯನ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಎದುರಿಸುವಂತಾಗಿದೆ.  

ರೈತರಿಂದ ಕಳೆನಾಶಕ ಸಿಂಪಡಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗಿದ್ದು, ತೊಗರಿ, ರಾಗಿ ಶೇಂಗಾ, ಅವರೆ ಸೇರಿದಂತೆ ಟೊಮೋಟೊ, ಸೊಪ್ಪು ತರಕಾರಿ ಹಾಗೂ ಮುಂತಾದ ಬೆಳೆಗಳ ಕಳೆ ನಾಶ ಮಾಡಲು ಕಳೆನಾಶಕ ಸಿಂಪಡಣೆಗೆ ಮುಂದಾದ ರೈತರು ಅಡಕೆ ತೆಂಗು ತೋಟಗಳಲ್ಲಿನ ಕಳೆನಾಶ ಮಾಡಲು ಕೂಡ ರೈತರು ಕಳೆನಾಶಕಗಳಿಗೆ ಮಾರುಹೋಗಿರುವದು ದುರಂತವಾಗಿ ಪರಿಣಮಿಸಿದೆ. 

ಪ್ರಸ್ತುತ ಸನ್ನಿವೇಶದಲ್ಲಿ ಭೂಮಿಗೆ ಎದುರಾಗಿರುವ ಈ ದೊಡ್ಡ ಆಪತ್ತು ದೂರ ಮಾಡಿ ನಾವೆಲ್ಲರೂ ಭೂಮಿ ತಾಯಿಯನ್ನು ಉಳಿಸಲೇ ಬೇಕಾದ  ಸನ್ನಿವೇಶಕ್ಕೆ ಬಂದುತಲುಪಿದ್ದೇವೆ. ಈಗ ಕಳೆನಾಶಕ ಬಳಕೆಯಿಂದ ಮತ್ತೊಂದು ಭಯಾನಕ ದುರಂತ ಕಾಲ ಬುಡದಲ್ಲಿ ಬಂದು ನಿಂತಿದೆ. ಮಾನವ ಕುಲಕ್ಕೆ ಮಾರಕವಾಗಿರುವ ಹೆಚ್ಚಿನ ವಿಷಕಾರಿ ರಾಸಾಯನಿಕ ಒಳಗೊಂಡ ಕಳೆನಾಶಕಗಳು ವಿಪರೀತ ಪ್ರಮಾಣದಲ್ಲಿ ಭೂಮಿಗೆ ಬೀಳುತ್ತಿವೆ. ರಾಸಾಯನಿಕ ಗೊಬ್ಬರದಿಂದ ಈಗಾಗಲೇ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತಿದ್ದರೆ ಈಗ ಹೆಚ್ಚುತ್ತಿರುವ ಕಳೆನಾಶಕದ  ಓಷಧಿಗಳಿಂದ  ತನ್ನ ಸಂಪೂರ್ಣ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು ಭೂಮಿಯಲ್ಲಿನ ಅಣುಜೀವಿಗಳು ನಾಶವಾಗುತ್ತಿವೆ. ಇದರಿಂದ ಸಕಲ ಜೀವ ಸಂಕುಲಕ್ಕೆ ಆಪತ್ತು ಬಂದೊದಗಿದೆ. 

ಕಳೆ ನಾಶಕ ಹಾಗೂ ಕೀಟನಾಶಕದಂತ ವಿಷಯುಕ್ತ ರಾಸಾಯನಿಕಗಳಿಂದ ಮಣ್ಣಿನಲ್ಲಿಯ ಸೂಕ್ಷ್ಮಾಣು ಜೀವಿಗಳು ಸಾವನ್ನಪ್ಪುತ್ತವೆ. ಇದರಿಂದ. ರಸಗೊಬ್ಬರಗಳು ಕೆಲಸ ಮಾಡುವದಿಲ್ಲ. ರಸಗೊಬ್ಬರಗಳು ಕೆಲಸ ಮಾಡುವದು ಮಣ್ಣಿನ ಫಲವತ್ತತೆ ಮೇಲೆಯೆ. ಯಾವುದೇ ಸಸ್ಯವು ರಸಗೊಬ್ಬರದ ಸಾರವನ್ನು ನೇರವಾಗಿ ಬಳಕೆ ಮಾಡುವದಿಲ್ಲ. ಮಣ್ಣಿನ ಸೂಕ್ಷ್ಮಾಣು ಜೀವಿಗಳು ಅದನ್ನು ಬಳಕೆ ಮಾಡಿ ಜೀರ್ಣಿಸಿದ ತರುವಾಯ ಅದು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀರ್ಣಿಸಿಕೊಡುವ ಸೂಕ್ಷ್ಮಾಣು ಜೀವಿಗಳು ಇಲ್ಲದಿದ್ದರೆ ಅಥವಾ ತುಂಬಾ ಕಡಿಮೆಯಾದರೆ ಗೊಬ್ಬರಗಳು ಕೆಲಸ ಮಾಡುವದಿಲ್ಲ. 

ನಮ್ಮ ದೇಶದ 50ಅ ಕ್ಕೂ ಹೆಚ್ಚಿನ ಕೃಷಿ ಭೂಮಿ ಅತಿಯಾದ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕದಂತ ವಿಷಕಾರಿಗಳಿಂದ ಸಾರ ಕಳೆದುಕೊಂಡು ಬರಡಾಗುತ್ತಿರುವದು ಅಧ್ಯಯನದಿಂದ ತಿಳಿದು ಬಂದಿದೆ. 

ಈ ಆಪತ್ತನ್ನು ಅರಿತಿರುವ ಅನ್ನದಾತ(ರೈತರು) ನಮ್ಮ ಪೂರ್ವಜರು ಪಾಲಿಸುತ್ತಿದ್ದ ಹಳೆಯ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವದಕ್ಕೆ ಸಿದ್ಧರಿದ್ದಾರೆ. ಆದರೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯ ಲಭ್ಯವಾಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಸರ್ಕಾರ ಚಿಂತನೆ ಮಾಡುವುದರೊಂದಿಗೆ ಸಹಾಯಹಸ್ತವನ್ನು ಚಾಚುವ ಮೂಲಕ  ರೈತರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. 

ರಸಗೊಬ್ಬಗಳ ಬಳಕೆಯಿಂದಾಗಿ ಭೂಮಿ ಮತ್ತು ಮನುಷ್ಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣ ಮಣ್ಣು ಆರೋಗ್ಯ ಚನ್ನಾಗಿದ್ದರೆ ರೋಗ ಕೀಟ ಸಮಸ್ಯ ಕಡಿಮೆಯಾಗುತ್ತದೆ. ಸರಕಾರ ಕೃಷಿ ಪೂರಕ  ಉದ್ದಿಮೆಗಳ ಸಾವಯವ ತ್ಯಾಜ್ಯಗಳನ್ನು ರೈತರಿಗೆ ತೀರಾ ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಬೇಕಾಗಿದೆ. ಸಾವಯವ ಗೊಬ್ಬರಗಳಿಂದ ಮಣ್ಣಿನ ಆರೋಗ್ಯ ಹೆಚ್ಚುತ್ತದೆ. 

ನಮ್ಮ ದೇಶದ 10 ರಾಜ್ಯಗಳಲ್ಲಿ ಈಗಲೂ ಮಣ್ಣಿನಲ್ಲಿ ಸಾವಯವ ವಸ್ತುಗಳ ಕೊರತೆ ಉಂಟಾಗಿಲ್ಲ. ಆ ರಾಜ್ಯಗಳೆಂದರೆ ಅಸ್ಸಾಂ, ತ್ರಿಪುರಾ, ಸಿಕ್ಕಿಂ ಮುಂತಾದ ಈಶಾನ್ಯ ರಾಜ್ಯಗಳು ಕಾರಣ ಅಲ್ಲಿ ಇನ್ನೂ ರಸಗೊಬ್ಬರಗಳು ಸುಳಿದಿಲ್ಲ. ರೈತರು ಸ್ವೀಕರಿಸಿಲ್ಲವೆಂದೆ ಹೇಳಬೇಕಾಗುತ್ತದೆ. 

ನಮ್ಮಲ್ಲಿ ಸೊಪ್ಪು ಸದೆಗಳ ಕೊರತೆ ಇದೆ. ಇರುವ ಸೊಪ್ಪು ಸದೆಗಳ ಒಟ್ಟು ಹಾಕುವುದಕ್ಕೆ ತಗಲುವ ವೆಚ್ಚ ಬಹಳ ದುಬಾರಿಯಾಗುತ್ತದೆ. ಆ ಕಾರಣಕ್ಕೆ ರೈತರು ಅನಾಹುತಗಳ ಅರಿವಿದ್ದರು ಸಹ ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರಕ್ಕೆ  ಒಗ್ಗಿಕೊಂಡಿದ್ದಾರೆ ಎನಿಸದೆ ಇರದು. 

ಯಾವುದೇ ಬೆಳೆ ತ್ಯಾಜ್ಯಗಳನ್ನು ಹಾಳು ಮಾಡದೆ ಭೂಮಿಗೆ ಸೇರಿಸಬೇಕು. ಮಣ್ಣಿನಲ್ಲಿ ಅವು ಕರಗುವಂತೆ ತೇವಾಂಶವನ್ನು ಒದಗಿಸಬೇಕು. ಮಳೆಯ ನೀರಿನಲ್ಲಿ ಮಣ್ಣು ತೇಲಿಹೋಗದಂತೆ ಒಡ್ಡನ್ನು ಕಟ್ಟಬೇಕು. ಇದರಿಂದ ಮಣ್ಣಿನ ರಚನೆ ಉತ್ತಮವಾಗುತ್ತದೆ. 

ಈಗಿನ ವ್ಯವಸ್ಥೆ ಗಮನಸಿಲಾಗಿ ರೈತರು ಸಂಪೂರ್ಣವಾಗಿ  ರಸಗೊಬ್ಬರಗಳನ್ನು ಬಿಡಬೇಕು, ಸಾವಯವ ಕೃಷಿಯಲ್ಲಿಯೇ ಬೆಳೆ ಬೆಳೆಯಬೇಕೆಂಬುದು ಪ್ರಸ್ತುತ ಪರಿಸ್ಥತಿಯಲ್ಲಿ ಅಸಾಧ್ಯವಾಗಬಹುದು. ಆದರೆ ಬದಲಾವಣೆ ನಿಧಾನವಾಗಿಯಾದರೂ ಆಗಲೇಬೇಕಾಗಿದೆ.  

ಈ ಆಧುನಿಕ ಯುಗದಲ್ಲಿ ಮನುಷ್ಯ ಹೊಸ ಆವಿಷ್ಕಾರಗಳೊಂದಿಗೆ ಪ್ರಗತಿಯನ್ನು ಸಾಧಿಸಿದ್ದು, ಚಂದ್ರನ ವರೆಗೂ ಮುಟ್ಟಿದ್ದಾನೆ. ಪಕ್ಷಿಯಂತೆ ಆಗಸದಲ್ಲಿ ಹಾರಾಡುವದನ್ನು ಕಲಿತಿದ್ದಾನೆ. ಮೀನಿನಂತೆ ಸಮುದ್ರದಲ್ಲಿ ಇಜುವುದನ್ನ ಕಲಿತಿದ್ದಾನೆ ಆದರೆ ಭೂಮಿಯ ಮೇಲೆ ಹೇಗೆ ಬದುಕಬೇಕೆಂದು ಕಲಿಯದೇ ಇರುವದು ವಿಪರಾ​‍್ಯಸವಲ್ಲವೆ. 

- ಅನಂತ ಪಪ್ಪು 

ಮೊ: 9448527870 


- * * * -