ಲೋಕದರ್ಶನ ವರದಿ
ಬೈಲಹೊಂಗಲ 20: ಶಾಖಾ ಮೂರುಸಾವಿರಮಠದ ದಿ. ಗಂಗಾಧರ ಮಹಾಸ್ವಾಮೀಜಿ ಈ ಭಾಗದಲ್ಲಿ ಶೈಕ್ಷಣಿಕ, ಧಾರ್ಮಿಕ, ಆದ್ಯಾತ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆಂದು ಕೇಂದ್ರದ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಗುರುವಾರ ಪಟ್ಟಣದ ಶಾಖಾ ಮೂರುಸಾವಿರ ಮಠದಲ್ಲಿ ಲಿಂ.ಶ್ರೀ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ ಹಾಗೂ ಶಿಕ್ಷಣ ಕ್ಷೇತ್ರದ ಹರಿಕಾರ ಲಿಂ.ಗಂಗಾಧರ ಮಹಾಸ್ವಾಮೀಜಿಯವರ 11ನೇ ಪುಣ್ಯಸ್ಮರಣೋತ್ಸವ ನಿಮಿತ್ತ ನಡೆದ ಸಾಮೂಹಿಕ ವಿವಾಹಗಳು,ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ದಿ. ಗಂಗಾಧರ ಮಹಾಸ್ವಾಮೀಜಿ ಒಳ್ಳೆಯ ಗುರಿಯನ್ನು ಇಟ್ಟುಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಶಿಕ್ಷಣ ಸಂಸ್ಥೆಯ ಮೂಲಕ ಅಕ್ಷರ ಅಭ್ಯಾಸ ಕೊಡಿಸುವ ಮೂಲಕ ಅವರ ಬಾಳನ್ನು ಹಸನಾಗಿಸಿದ್ದಾರೆ. ಒಂದು ಕಾಲದಲ್ಲಿ ತಿಪ್ಪಿಮಠ ಎಂದು ಕರೆಸಿಕೊಳ್ಳುತ್ತಿದ್ದ ಮೂರುಸಾವಿರ ಶಾಖಾಮಠವು ಸುವರ್ಣಮಠವಾಗಿ ಬೆಳೆಯಲು ಸಾಕಷ್ಟು ಶ್ರಮ ವಹಿಸಿದ್ದಾರೆ. 12 ನೇ ಶತಮಾನದಲ್ಲಿ ಬಸವೇಶ್ವರರು ಅನುಭವ ಮಂಟಪವನ್ನು ನಿರ್ಮಿಸಿ ಸಮಾನತೆಗೆ ದಾರಿ ಮಾಡಿಕೊಟ್ಟರು. ಅಂದಿನ ಕಾಲದಲ್ಲಿ ಸಂಸತ್ ನ್ನು ಅನುಭವ ಮಂಠಪದ ಮೂಲಕ ಹುಟ್ಟಿ ಹಾಕಿದವರು ಬಸವಣ್ಣವರು. ಅವರ ಕಾಲದ ವಚನಗಳನ್ನು 23 ಭಾಷೆಯಲ್ಲಿ ಭಾಷಾಂತರ ಮಾಡಿಸಿ ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ಸ್ತುತ್ಯಾರ್ಹವಾಗಿದೆ. ವೀರಶೈವ ಧರ್ಮದವರು ಅನೇಕ ರಾಜ್ಯಗಳಲ್ಲಿದ್ದಾರೆ. ಇಂದಿನ ಸ್ವಾಮೀಜಿ, ಶರಣರ ಮಾರ್ಗದರ್ಶನದಲ್ಲಿ ವೀರಶೈವ ಸಮಾಜ ಅಭಿವೃದ್ಧಿ ಹೊಂದಬೇಕೆಂದರು.
ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ಇಂದಿನ ಸಂಸ್ಕೃತಿ, ಸಂಸ್ಕಾರ ಹಾಳಾಗುತ್ತಿದೆ. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡುವ ಅವಶ್ಯಕತೆಯಿದೆ. ಸಮಾಜ ಸೇವೆ ಮಾಡುವವರಿಗೆ ದುಡ್ಡು ಸಿಗಲಾರದು ಬದಲಿಗೆ ನೆಮ್ಮದಿ ಜೀವನ ಸಿಗಬಲ್ಲದು.ಇಂದಿನ ರಾಜಕಾರಣಿಗಳು ಶುದ್ಧ ಹಸ್ತರಾಗಿ ಕೆಲಸ ಮಾಡಬೇಕು. ಅದುನಿಕತೆಯಲ್ಲಿ ಮೊಬೈಲ್, ಸಾಮಾಜಿಕ ಜಾಲತಾಣಗಳನ್ನು ಇತಿಮಿತಿಯಲ್ಲಿ ಬಳಿಸಿಕೊಂಡು ದೇಶದ ಅಭಿವೃದ್ಧಿಗೆ ಪ್ರಯತ್ನ ಮಾಡಬೇಕೆಂದರು.
ಮುರಗೋಡದ ಮಹಾಂತ ದುರದುಂಡೀಶ್ವರಮಠದ ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಅಧಿಕಾರದಲ್ಲಿದ್ದಾಗ ರಾಜಕಾರಣಿಗಳು, ಅಧಿಕಾರಿಗಳು ಒಳ್ಳೆಯ ಕೆಲಸ ಕಾರ್ಯ ಮಾಡಿ ಸಮಾಜವನ್ನು ಮುನ್ನೆಡೆಸಬೇಕು. ತಂದೆ ತಾಯಿ ಆಶಿರ್ವಾದದಿಂದ ತಮ್ಮ ತಂದೆ ದೇಹಛೇದ ಮಾಡಿ ವಿಶ್ವ ದಾಖಲೆ ನಿರ್ಮಿಸಿರುವ ಡಾ. ಮಹಾಂತೇಶ ರಾಮಣ್ಣವರ ಅವರ ಸಾಧನೆಯನ್ನು ಗಮನಿಸಿ ಶ್ರೀಮಠದಿಂದ ಪ್ರಪ್ರಥಮ ಬಾರಿಗೆ ಶ್ರೀ ನೀಲಕಂಠ ಶ್ರೀ ಪ್ರಶಸ್ತಿ ಯನ್ನು ನೀಡಿ ಗೌರವಿಸಿರುವುದು ಸ್ತುತ್ಯಾರ್ಹ ಕಾರ್ಯವೆಂದರು.
ಈ ಭಾಗದಲ್ಲಿ ಕೇಂದ್ರ ರೇಲ್ವೆ ಸಚಿವರ ಪರಿಚಯ ಅಷ್ಟಾಗಿ ಇರಲಿಲ್ಲ. ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ರೇಲ್ವೆ ಇಲಾಖೆಯಿಂದ ಈ ಭಾಗದಲ್ಲಿ ಅಭಿವೃದ್ಧಿ ಪಡಿಸುತ್ತಿರುವುದರಿಂದ ಕೇಂದ್ರ ರೇಲ್ವೆ ಇಲಾಖೆ ಗಮನ ಸೆಳೆಯುವಂತಾಗಿದೆ. ಈ ಭಾಗದಲ್ಲಿ ವಿವಿದೆಡೆ ರೇಲ್ವೆ ಹಳಿ ನಿರ್ಮಿಸಿ ಜನಮನ್ನಣೆಗಳಿಸಬೇಕೆಂದರು.
ಸಾನಿಧ್ಯ ವಹಿಸಿದ ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಕೆಎಲ್ಇ ನಿರ್ದೇಶಕರಾದ ಡಾ.ವಿಶ್ವನಾಥ ಪಾಟೀಲ, ಡಾ.ವಿ.ಎಸ್.ಸಾಧುನವರ, ವಾಯ್.ಎಸ್.ಪಾಟೀಲ, ಚಿತ್ರನಟ ಶಿವರಂಜನ್ ಬೋಳನ್ನವರ, ಪ್ರಾಚಾರ್ಯ ಎಸ್.ಎಸ್.ಸಿದ್ನಾಳ ಮಾತನಾಡಿದರು.
ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ, ಕಟಕೋಳದ ಕುಮಾರೇಶ್ವರ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ, ಹೊಸೂರ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ರಾಮದುರ್ಗದ ಶಿವಮೂರ್ತೆಶ್ವರ ಶಾಂತವೀರ ಸ್ವಾಮೀಜಿ, ಬಗಳಾಂಬಾ ದೇವಸ್ಥಾನದ ವೇ.ಮೂ ಈರಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಜಗದೀಶ ಮಟಗುಡ್ಡ, ಕೆಎಲ್ಇ ಉಪಾಧ್ಯಕ್ಷ ಬಸವರಾಜ ತಟವಟಿ, ನಿರ್ಧೆಶಕ ಎಸ್.ಸಿ.ಮೆಟಗುಡ್ಡ, ಅಬಕಾರಿ ಇಲಾಖೆ ನಿವೃತ್ತ ಅಧಿಕಾರಿ ಎ.ಟಿ.ಸದಾವತರ್ಿ, ಪ್ರಕಾಶ ಮೂಗಬಸವ, ಜಿ.ಎಸ್.ಹೂಲಿ, ಮಹಾಂತೇಶ ಅಕ್ಕಿ, ಇನ್ನಿತರರು ಪಾಲ್ಗೊಂಡಿದ್ದರು. ಇದೇ ವೇಳೆ ಪ್ರಪ್ರಥಮ ಬಾರಿಗೆ ಶ್ರೀ ನೀಲಕಂಠಶ್ರೀ ಪ್ರಶಸ್ತಿಯನ್ನು ಬೆಳಗಾವಿ ಕೆಎಲ್ಇ ವಿಶ್ವವಿದ್ಯಾಲಯದ ಶ್ರೀ ಬಿಎಂಕೆ ಆಯುವರ್ೆದ ವೈದ್ಯಕೀಯ ಮಹಾವಿದ್ಯಾಲಯ ಶರೀರ ರಚನಾಶಾಸ್ತ್ರದ ಪ್ರಾಧ್ಯಾಪಕ, ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಅವರಿಗೆ ನೀಡಿ ಗೌರವಿಸಲಾಯಿತು. ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಅವರ ಕೀರಿಟಪೂಜೆ ನೆರವೇರಿತು.