ಬಸವ ಸಂಭ್ರಮ: ಸಾಂಸ್ಕೃತಿಕ ಕಾರ್ಯಕ್ರಮ
ಜಮಖಂಡಿ19: ಮಕ್ಕಳಲ್ಲಿ ಅಡಗಿದ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸುವುದು, ಸೃಜನಶೀಲತೆಯನ್ನು ಹೆಚ್ಚಿಸುವುದು, ವೈವಿಧ್ಯಮಯ ಸಂಸ್ಕೃತಿ ಕುರಿತು ಜಾಗೃತಿ ಮೂಡಿಸುವುದು, ಸಾಮಾಜಿಕ ಕೌಶಲಗಳನ್ನು ತುಂಬಿ ಸಮಾಜಮುಖಿಯಾಗಿ ಮಕ್ಕಳನ್ನು ರೂಪಿಸುವುದು ವಾರ್ಷಿಕ ಸ್ನೇಹ ಸಮ್ಮೇಳನದ ಉದ್ದೇಶವಾಗಿದೆ ಎಂದು ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಹೇಳಿದರು.
ನಗರದ ಬಸವಜ್ಯೋತಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಸಂಜೆ ನಡೆದ 7ನೇ ವಾರ್ಷಿಕ ಸ್ನೇಹ ಸಮ್ಮೇಳನ ‘ಬಸವ ಸಂಭ್ರಮ-2025’ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇರೆ ಬೇರೆ ಹಿನ್ನೆಲೆವುಳ್ಳ ಮಕ್ಕಳನ್ನು ಒಂದೇ ವೇದಿಕೆಯ ಮೇಲೆ ತರುವುದು, ವಿವಿಧ ಸಂಪ್ರದಾಯ ಹಾಗೂ ಪರಂಪರೆಗಳ ಕುರಿತು ಅರಿವು ಮೂಡಿಸಿ ಮಕ್ಕಳ ಜ್ಞಾನವನ್ನು ಹೆಚ್ಚಿಸುವುದು ಹಾಗೂ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಜಾಗತಿಕ ನಾಗರಿಕರನ್ನಾಗಿ ರೂಪಿಸುವುದು ಸಮಾರಂಭದ ಮೂಲ ಧ್ಯೇಯವಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಎ.ಎಸ್. ಕಂದಗಲ್ ಬಲೂನಗಳ ಗೊಂಚಲವನ್ನು ಹಾರಿ ಬಿಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ‘ಕೊಣ್ಯಾಗ ಬೆಳೆದ ಕೂಸು ಕೊಳಿತು, ಓಣ್ಯಾಗ ಬೆಳೆದ ಕೂಸು ಬೆಳೆತು’ ಎಂಬ ನಾಣ್ನುಡಿ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ಸಾರುತ್ತದೆ. ಆದ್ದರಿಂದ ಪಠ್ಯೆ ಚಟುವಟಿಕೆಗಳ ಜೊತೆಗೆ ನಾಟಕ, ಹಾಡು, ನೃತ್ಯ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಕ್ಕಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಪಾಲಕರು ಕೂಡ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.
ಬಸವಜ್ಯೋತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಐ. ಹೊಸಮಠ ಇದ್ದರು. ಶ್ರಾವಣಿ ಹಿರೇಮಠ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಗೀರೀಶ ಕಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಾಜೇಸಾಬ ಶೇಖ ವಾರ್ಷಿಕ ವರದಿ ಓದಿದರು. ವಿದ್ಯಾರ್ಥಿನಿ ಸಾಕ್ಷಿ ಸಂಕ್ರಾವತ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಮುತ್ತುರಾಜ ಅಮ್ಮಣಗಿ ನಿರೂಪಿಸಿದರು. ಶಿಕ್ಷಕಿ ರೇಖಾ ಬುರ್ಲಿ ವಂದಿಸಿದರು. ನಂತರ ಮಕ್ಕಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅನ್ನು ಪ್ರೊ.ಎ.ಎಸ್. ಕಂದಗಲ್ ಉದ್ಘಾಟಿಸಿದರು.