ಸ್ಮಾರ್ಟ್ ಸಿ ಟಿ ಕಾಮಗಾರಿ ತಂದ ಧರ್ಮಸಂಕಟ | ಕೆಲಸದ ವೇಳೆ ವಿಶ್ರಾಂತಿ ಎಂಬುದೇ ಇಲ್ಲ ಟ್ರಾಫಿಕ್ ಕಿರಿಕಿರಿಗೆ ಸಂಚಾರಿ ಪೊಲೀಸರು ಸುಸ್ತು

ಸದಾನಂದ ಮಜತಿ

ಬೆಳಗಾವಿ: ನಗರದಲ್ಲಿ ಸ್ಮಾರ್ಟ್ ಸಿ ಟಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿರುವುದರಿಂದ ನಗರದಲ್ಲಿ ಸಂಚಾರ ಸಮಸ್ಯೆ ಉಲ್ಬಣಗೊಂಡು ವಾಹನ ಸವಾರರು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಾಕಷ್ಟು ಚಚರ್ೆಯಾಗುತ್ತಿದೆ. ಒಮ್ಮೆ ಹೋಗಿ ಬರುವ ವಾಹನ ಸವಾರರು, ಜನಸಾಮಾನ್ಯರೇ ಇಷ್ಟೊಂದು ಸಮಸ್ಯೆ ಎದುರಿಸುತ್ತಿದ್ದರೆ, ಇನ್ನು ದಿನದ ಎಂಟು ಗಂಟೆಗಳ ಕಾಲ ಒಂಟಿಗಾಲಿನ ಮೇಲೆ ನಿಂತು ಸುಗಮ ಸಂಚಾರಕ್ಕೆ ಶ್ರಮಿಸುವ ಸಂಚಾರಿ ಪೊಲೀಸರ ಸ್ಥಿತಿಯಂತೂ ದೇವರಿಗೆ ಪ್ರೀತಿಯೆಂಬಂತಾಗಿದೆ.

ಹೌದು, ಸ್ಮಾರ್ಟ್ ಸಿ ಟಿ ಯೋಜನೆ ಅನು ಷ್ಠಾನಗೊಂಡು ಮೂರ್ನಾಲ್ಕು ವರ್ಷಗಳಾದರೂ ಆರಂಭವಾಗದಿದ್ದ ಕಾಮಗಾರಿಗಳು ಈಗ ನಗರದೆಲ್ಲಡೆ ಆರಂಭವಾಗಿದ್ದು, ಅದರಲ್ಲೂ ರಸ್ತೆ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಸಂಚಾರ ಸಮಸ್ಯೆ ಉಲ್ಬಣಿಸಿ ವಾಹನ ಸವಾರರು, ಜನಸಾಮಾನ್ಯರ ಜೊತೆಗೆ ಸುಗಮ ಸಂಚಾರ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಸಂಚಾರಿ ಪೊಲೀಸರಿಗೆ ಧರ್ಮಸಂಕಟ ತಂದಿಟ್ಟಿದೆ.

ನಗರದೆಲ್ಲಡೆ ಟ್ರಾಫಿಕ್ ಕಿರಿಕಿರಿ

ಸಿಮೆಂಟ್ ರಸ್ತೆ ಕಾಮಗಾರಿ ನಡೆಯುತ್ತಿರುವ ಪರಿಣಾಮ ಕಾಲೇಜು ರಸ್ತೆ, ಹಳೇ ಬಾಜಿ ಮಾರುಕಟ್ಟೆ ರಸ್ತೆ ಮುಂತಾದ ಪ್ರಮುಖ ರಸ್ತೆಗಳಲ್ಲಿ ಒಂದು ಬದಿಯಲ್ಲಿ ಕಾಮಗಾರಿ ಆರಂಭಿಸಿ, ಮತ್ತೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಈ ರಸ್ತೆಗಳಲ್ಲಿ ದ್ವಿಪಥದಲ್ಲಿ ವಾಹನ ಸಂಚಾರವಿದ್ದಾಗಲೇ ಸಾಕಷ್ಟು ವಾಹನ ದಟ್ಟಣೆ ಉಂಟಾಗುತ್ತಿತ್ತು. ಈಗ ಒಂದೇ ಬದಿಯಲ್ಲಿ ಎದುರುಬದುರು ವಾಹನಗಳು ಸಂಚರಿಸಬೇಕಿರುವ ಕಾರಣದಿಂದ ಸಂಚಾರ ಸಮಸ್ಯೆ ಉಲ್ಬಣಿಸಿದೆ. ಪೊಲೀಸರು ಸ್ವಲ್ಪ ಆಚೀಚೆ ಅಲುಗಾಡಿದರೂ ಮುಂದೆ ಸಾಗುವ ಭರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳು ಸಂಚರಿಸಿ ಟ್ರಾಫಿಕ್ ಜಾಮ್ ಆಗುತ್ತದೆ. ಅದನ್ನು ಸರಿಪಡಿವಷ್ಟರಲ್ಲಿ ಪೊಲೀಸರು ಹೈರಾಣಾಗಿ ಹೋಗುತ್ತಿದ್ದಾರೆ. ನಗರದ ಪ್ರಮುಖ ರಸ್ತೆಯಾಗಿರುವ ಕಾಲೇಜು ರೋಡ್ನಲ್ಲಂತೂ ಸಂಚಾರ ನಿರ್ವಹಣೆ ಮಾಡುವುದು ಪೊಲೀಸರಿಗೆ ಸವಾಲು ತಂದಿದೆ.

ಬಿಸಿಲು, ಧೂಳಿನ ಮಧ್ಯೆ ಹೆಣಗಾಟ

ಉತ್ತರ ಕರ್ನಾ ಟಕ ಭಾಗದಲ್ಲಿ ಧೂಳುರಹಿತ ರಸ್ತೆಗಳನ್ನು ಹೊಂದಿದ ನಗರವೆಂದು ಗುರುತಿಸಿಕೊಂಡಿದ್ದ ಬೆಳಗಾವಿಯಲ್ಲೀಗ ಸ್ಮಾರ್ಟ್ ಸಿ ಟಿ ಯೋಜನೆಗೆ ಅಲ್ಲಲ್ಲಿ ರಸ್ತೆ ಅಗೆದ ಕಾರಣ ರಸ್ತೆಗಳೆಲ್ಲ ಧೂಳುಮಯವಾಗಿದೆ. ದೊಡ್ಡ ವಾಹನ ಸಂಚರಿಸಿದರೆ ರಸ್ತೆಯ ತುಂಬೆಲ್ಲ ಧೂಳು ಆವರಿಸಿಕೊಳ್ಳುವುದರಿಂದ ದ್ವಿಚಕ್ರವಾಹನ ಸವಾರರು, ಪಾದಚಾರಿಗಳು ಧೂಳಿನ ಮಜ್ಜನವಾಗುತ್ತಿದೆ. ಸುಗಮ ಸಂಚಾರಕ್ಕೆ ಪಾಯಿಂಟ್ನಲ್ಲಿ ನಿಲ್ಲುವ ಪೊಲೀಸರು ಪ್ರತಿನಿತ್ಯ ಒಂದೆಡೆ ಬಿಸಿಲು, ಮತ್ತೊಂದೆಡೆ ಧೂಳಿನಲ್ಲೇ ನಿಂತು ದಿನವಿಡೀ ಕಾರ್ಯನಿರ್ವಸುವ ಕಾರಣ ಹಲವು ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸುವಂತಾಗಿದೆ.

ಮನಶಾಂತಿಗೆ ಭಂಗ

ಸ್ಮಾರ್ಟ್ ಸಿ ಟಿ ರಸ್ತೆ ಕಾಮಗಾರಿ ಆರಂಭವಾದ ಬಳಿಕವಂತೂ ನಗರದ ಸಂಚಾರ ಪೊಲೀಸರಿಗೆ ಮನಶಾಂತಿಯೇ ಇಲ್ಲದಂತಾಗಿದೆ. ಎಂಟು ಗಂಟೆಯ ಕೆಲಸದ ಸಮಯ ಮುಗಿ ಯುವವರೆಗೂ ಸಂಚಾರ ಸಮಸ್ಯೆ ಸರಿಪಡಿಸಲು ಹೆಣಗಾಡಬೇಕಿದೆ. ವಿಶ್ರಾಂತಿ ಎಂಬುದೇ ಇಲ್ಲವಾಗಿದೆ. ಸ್ವಲ್ಪ ಅತ್ತಿತ್ತ ಹೋದರೆ ಸಾಕು ಅಡ್ಡಾದಿಡ್ಡಿ ವಾಹನಗಳು ಬಂದು ಟ್ರಾಫಿಕ್ ಜಾಮ್ ಆಗಿಬಿಡುತ್ತಿದೆ. ಇದನ್ನು ಸರಿಪಡಿಸಲು ಹರಸಾಹಸ ಮಾಡಬೇಕಿದೆ. 

ಇದು ಸಾಲದು ಎಂಬಂತೆ ಪ್ರತಿದಿನ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯುವುತ್ತಿರುವುದರಿಂದ ಸಂಚಾರ ನಿರ್ವಹಣೆ ಮಾಡುವುದೇ ಕಷ್ಟವಾಗುತ್ತಿದೆ. ಮೊದಲೇ ಒಮ್ಮುಖ ಸಂಚಾರವಿರುವಾಗ ಪ್ರತಿಭಟನೆಕಾರರು ಬಂದರಂತೂ ಮುಗಿಯಿತು. ಆ ಮಾರ್ಗದಲ್ಲಿ ಸಂಚಾರ ಬಂದ್ ಮಾಡುವುದರಿಂದ ಇಡೀ ನಗರದ ಸಂಚಾರ ವ್ಯವಸ್ಥೆಯೇ ಹದಗೆಡುತ್ತಿದೆ. ಇಂತಹ ಸಂದರ್ಭದಲ್ಲಿ ವಾಹನ ಸವಾರರನ್ನು ನಿಭಾಯಿಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಕೆಲವು ವೇಳೆ ವಾಹನ ಸಂಚಾರರ ಸಿಟ್ಟು ಪೊಲೀಸರತ್ತ ತಿರುಗಿ ಪ್ರತಿದಿನ ವಾಗ್ವಾದಗಳು ನಡೆಯುತ್ತಿವೆ. ಇದು ಒಂದು ದಿನದ ಸಮಸ್ಯೆಯಲ್ಲ ಪ್ರತಿದಿನ ಪೊಲೀಸರು ವಾಹನ ಸವಾರರ ಸಿಟ್ಟಿಗೆ ಗುರಿಯಾಗುತ್ತಿದ್ದಾರೆ.

ಶಾಲಾ-ಕಾಲೇಜು ವಿದ್ಯಾರ್ಥಿ ಗಳಿಗೂ ಸಮಸ್ಯೆ

ಗಣೇಶ ಮಂದಿರದಿಂದ ರೈಲ್ವೆ ಸ್ಟೇಶನ್ವರೆಗೆ ರಸ್ತೆ ಕಾಂಕ್ರೀಟ್ ಕಾಮಗಾರಿ ಆರಂಭಿಸಲಾಗಿದ್ದು, ಇದೇ ಮಾರ್ಗವಾಗಿ ಹಲವಾರು ಶಾಲೆಕಾಲೇಜುಗಳು ಬರುವುದರಿಂದ ವಿದ್ಯಾಥರ್ಿಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಅದರಲ್ಲೂ ಪ್ರಾಥಮಿಕ ಶಾಲೆ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಶಾಲೆ ಹೋಗುವಂತಾಗಿದೆ. ಒಂದೇ ಮಾರ್ಗದಲ್ಲಿ ಎದುರುಬದರಾಗಿ ವಾಹನಗಳು ಬರುವುದರಿಂದ ಚಾಲಕರಿಗೆ ಸ್ಟಾಪ್ಗಳಲ್ಲಿ ಬಸ್ ನಿಲ್ಲಿಸಲು ತೊಂದರೆಯಾಗಿದೆ. ನಿಲ್ಲಿಸಿದರೆ ಶಾಲಾ ಕಾಲೇಜು ವಿದ್ಯಾಥರ್ಿಗಳು ಬಸ್ ಹತ್ತಲು ಒಮ್ಮೆಲೆ ಮುಗಿಬೀಳುವುದರಿಂದ ಅವರೆಲ್ಲ ಹತ್ತುವವರೆಗೆ ಬಸ್ ನಿಲ್ಲಿಸಿದರೆ ಟ್ರಾಫಿಕ್ ಜಾಮ್ ಆಗುತ್ತದೆ. ವಿದ್ಯಾಥರ್ಿಗಳು ಬಸ್ ತಪ್ಪಿಸಿಕೊಳ್ಳುವ ಭರದಲ್ಲಿ ಓಡಿ ಹೋಗುವುದರಿಂದ ಸ್ವಲ್ಪ ಹೆಚ್ಚುಕಡಿಮೆಯಾದರೂ ಪ್ರಾಣಕ್ಕೆ ಅಪಾಯ ತಪ್ಪಿದ್ದಲ್ಲ.

ಒಟ್ಟಿನಲ್ಲಿ ನಗರದಲ್ಲಿ ಒಂದು ಕಡೆ ಸ್ಮಾರ್ಟ್ ಸಿ ಟಿ ಕಮಗಾರಿಗಳು ನಡೆಯುತ್ತಿರುವುದು ಖುಷಿ ತಂದಿದ್ದರೆ, ಮತ್ತೊಂದೆಡೆ ನಿಧಾನಗತಿಯ ಕಾರಣದಿಂದ ಜನರ ನೆಮ್ಮದಿ ಭಂಗಕ್ಕೆ ಕಾರಣವಾಗುತ್ತಿದೆ.