ಈ ವರ್ಷ ಒಂದು ಕೋಟಿ ಯವ ಸಮೂಹಕ್ಕೆ ಕೌಶಲ್ಯ ತರಬೇತಿ: ಸದಾನಂದಗೌಡ

ಬೆಂಗಳೂರು, ನ 2: ಪ್ರಸಕ್ತ ವರ್ಷ ಒಂದು ಕೋಟಿ ಯುವ ಸಮೂಹಕ್ಕೆ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ನಗರದಲ್ಲಿಂದು ’ನೌಕರಿ ಫಾರ್ ಯು.ಕಾಮ್' ಅಂತರ್ಜಾಲ ತಾಣ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ೩೫ ವರ್ಷಕ್ಕಿಂತ ಕೆಳ ವಯಸ್ಸಿನ ಜನಸಂಖ್ಯೆ ಶೇಕಡಾ ೬೫ರಷ್ಟಿದೆ. ನ್ಯಾಸ್ಕಾಂ ಪ್ರಕಾರ, ಶೇಕಡಾ ೪೦ರಷ್ಟು ಪದವೀಧರರಿಗೆ ಕೌಶಲ್ಯದ ಅವಶ್ಯಕತೆ ಇದೆ. ದೇಶದಲ್ಲಿ ೫೦ ಕೋಟಿ ಜನ ಉದ್ಯೋಗಾಕಾಂಕ್ಷಿಗಳು ಇದ್ದಾರೆ. ಅವರಿಗೆ ಹೆಚ್ಚಿನ ಕೌಶಲ್ಯ ನೀಡಲು ಕೇಂದ್ರ ಸರ್ಕಾರ ಕೌಶಲ್ಯ ಭಾರತ ಕಾರ್ಯಕ್ರಮ ಜಾರಿಗೆ ತಂದಿದೆ ಎಂದರು.

೨೦೧೬-೨೦೨೦ರ ನಡುವೆ ಒಂದು ಕೋಟಿ ಯುವಕರಿಗೆ ಕೌಶಲ್ಯ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಪ್ರತಿ ೨ ತಿಂಗಳಿಗೊಮ್ಮೆ ಬೆಂಗಳೂರಿನ ಬಿಬಿಎಂಪಿ ಸದಸ್ಯರ ಜೊತೆ ಸಭೆ ನಡೆಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಯಡಿಯೂರಪ್ಪ ನೇತೃತ್ವದ ಸರ್ಕಾರ ನೂರು ದಿನಗಳು ತುಂಬಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ಹಲವು ಅಡೆತಡೆಗಳು, ಸವಾಲು, ಗೊಂದಲ, ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ನಡುವೆಯೂ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿಯನ್ನು ಅದ್ಭುತವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧಿಕಾರ ಸ್ವೀಕರಿಸಿದಾಗಿನಿಂದಲೂ ಯಡಿಯೂರಪ್ಪ ನವರಿಗೆ ಅನೇಕ ಸವಾಲುಗಳು ಎದುರಾಗಿವೆ. ಇಂತಹ ಇಳಿವಯಸ್ಸಿನಲ್ಲೂ ಅವರು ಸಂಪುಟದ ಎಲ್ಲಾ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರವಾಹ ಪರಿಸ್ಥಿತಿಯನ್ನು ನಿರ್ವಹಣೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ನನ್ನ ದೃಷ್ಟಿಯಲ್ಲಿ ಈ ಸರ್ಕಾರಕ್ಕೆ ನೂರು ಅಂಕಗಳಿಗೆ ೭೫ರಿಂದ ೮೦ ಅಂಕಗಳನ್ನು ನೀಡಬೇಕು ಎಂದರು.

ರಾಜ್ಯದಲ್ಲಿ ಹಿಂದೆಂದೂ ಕಾಣದ ಪ್ರವಾಹ ಉಂಟಾಗಿದೆ. ಯಡಿಯೂರಪ್ಪ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಪ್ರತಿಪಕ್ಷದವರು ಏನೇ ಆರೋಪ ಮಾಡಿ ದರೂ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯ ಜನರಿಗೆ ತೃಪ್ತಿ ತಂದಿದೆ. ಇದೇ ಪರಿಸ್ಥಿತಿ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಬಂದಿದ್ದರೆ ಯಾರ ಮೇಲೆ ಬೊಬ್ಬೆ ಹೊಡೆಯುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತು ಎಂದು ತಿರುಗೇಟು ನೀಡಿದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರು ಸರ್ಕಾರದ ಬಗ್ಗೆ ಮೃಧು ಧೋರಣೆ ಅನುಸರಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಯಾವುದೇ ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸಿಸುವುದು ಒಳ್ಳೆಯ ಬೆಳವಣಿಗೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದರು.

ರಾಜ್ಯದಲ್ಲಿ ಬಂಡವಾಳ ಹೂಡಬೇಕಾದರೆ ಉದ್ಯಮಿಗಳನ್ನು ಆಹ್ವಾನಿಸಬೇಕು. ನಮ್ಮಲ್ಲಿರುವ ಅವಕಾಶಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವುದು ಬೇಕಾಗುತ್ತದೆ. ಹೀಗಾಗಿ ಜಗದೀಶ್ ಶೆಟ್ಟರ್ ವಿದೇಶ ಪ್ರವಾಸ ಹೋದರೆ ಅದರಲ್ಲಿ ಪ್ರಮಾದವೇನಿಲ್ಲ ಎಂದು ಸಮರ್ಥಿಸಿಕೊಂಡರು.

ಉದ್ಯೋಗ ಬಯಸುವವವರು ಹಾಗು ಉದ್ಯೋಗ ನೀಡುವವರು ’ನೌಕರಿ ಫಾರ್ ಯು.ಕಾಮ್' ಜಾಲತಾಣದಲ್ಲಿ ತಮ್ಮ ಮಾಹಿತಿಯನ್ನು ಅಪ್‌ಲೋಡ್ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

ದೂರವಾಣಿ ಸಂಖ್ಯೆ ೭೦೨೨೦೨೦೦೦೦ ಗೆ ಕರೆ ಮಾಡಿ ಕೌಶಲ್ಯ ಭಾರತ ಯೋಜನೆಯ ವಿವರ ಪಡೆಯಬಹುದು. ಆಧಾರ್ ಕಾರ್ಡ್ ಹಾಗೂ ವಿದ್ಯಾರ್ಹತೆಯ ಪ್ರಮಾಣ ಪತ್ರ ಇದ್ದಲ್ಲಿ ಕೌಶಲ್ಯ ತರಬೇತಿ ದೊರೆಯಲಿದೆ ಎಂದು ಸದಾನಂದಗೌಡ ತಿಳಿಸಿದರು.