ಕೃಷ್ಣಾ ನದಿಯ ಜಲಾವೃತ ಸೇತುವೆಯಲ್ಲಿ ಟಾಟಾ ಎಸ್ ಹಾಲಿನ ವಾಹನ ಮುಳುಗಡೆ ಸಾರ್ವಜನಿಕ, ಪೋಲಿಸರಿಂದ ಚಾಲಕ, ಕ್ಲೀನರ್ ರಕ್ಷಣೆ

ಚಿಂಚಲಿ ಪಟ್ಟಣದಲ್ಲಿ ಕೃಷ್ಣಾ ನದಿಯ ಸೇತುವೆ ದಾಟುವಾಗ ವಾಹನ ಹಾಗೂ ಚಾಲಕ ಕ್ಲೀನರ್ನನ್ನು ಸಾರ್ವಜನಿಕರು ರಕ್ಷಣೆ ಮಾಡಿದರು


ಲೋಕದರ್ಶನ ವರದಿ

ಹಾರೂಗೇರಿ 19: ಕೃಷ್ಣಾ ಹಿನ್ನೀರಿನ ಸೇತುವೆ ಜಲಾವೃತಗೊಂಡಿದ್ದರೂ ಹಾಲಿನ ಪ್ಯಾಕೇಟ್ ತುಂಬಿದ ಟಾಟಾ ಎಸ್ ವಾಹನವನ್ನು ದಾಟಿಸುವ ಪ್ರಯತ್ನ ಮಾಡಿದ ವಾಹನ ನೀರಿನಲ್ಲಿ ಮುಳುಗಿ ಚಾಲಕ ಹಾಗೂ ಕ್ಲಿನರ್ನನ್ನು ಸಾರ್ವಜನಿಕರು ಹಾಗೂ ಪೋಲಿಸರಿಂದ ರಕ್ಷಿಸಿರುವ ಘಟನೆಯು ಕುಡಚಿ ಪೋಲಿಸ್ ಠಾಣೆಯ ವ್ಯಾಪ್ತಿಯ ಚಿಂಚಲಿ ಪಟ್ಟಣದ ಹೊರ ವಲಯದಲ್ಲಿ ಸಂಭವಿಸಿದೆ.

ನೆರೆಯ ರಾಜ್ಯ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಕ್ಷೀಣಿಸಿದ್ದ ಬಾರಿ ಮಳೆಯಿಂದ ಮಂಗಳವಾರ ರಾತ್ರಿಯಿಂದ ಹೆಚ್ಚಳವಾಗಿದೆ ಹಾಗೂ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮಳೆಯು ಎಡ ಬಿಡದೇ ಸುರಿಯುತ್ತಿದೆ. ಹೀಗಾಗಿ ಕೃಷ್ಣಾ ನದಿ ಮತ್ತು ಉಪ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಚಿಂಚಲಿ ಪಟ್ಟಣದ ರಾಯಬಾಗಕ್ಕೆ ಹೋಗುವ ಸೇತುವೆ ಮೇಲೆ ಕೃಷ್ಣಾ ನದಿಯ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ.

ಹಾಲು ಸಾಗಾಟ ವಾಹನವು ಅಂಕಲಿಯಿಂದ ಚಿಂಚಲಿಯತ್ತ ಹೊರಟಿತ್ತು. ಸೇತುವೆ ಮೇಲೆ ನೀರು ಬಂದರೂ ಸಹ ಟಾಟಾ ಎಸ್ ವಾಹನ ಚಾಲಕ ಧೈರ್ಯ ಮಾಡಿ ನೀರಿನಲ್ಲಿ ಹಾಲಿನ ವಾಹನವನ್ನು ಮುಂದೆ ಸಾಗಿಸುವ ವೇಳೆಯಲ್ಲಿ ವಾಹನವು ನೀರಿನಲ್ಲಿ ಸಂಪೂರ್ಣ ಮುಳುಗಿ ಹೋಗಿದೆ. ಚಾಲಕ ಮುಂಜುನಾಥ ಮಾನೆ (30) ಹಾಗೂ ಕ್ಲೀನರ್ ಆನಂದ ಉಸಕೆ (30) ಈ ಇಬ್ಬರಿಗೂ ಈಜು ಬಾರದೇ ಇರುವುದರಿಂದ ವಾಹನದ ಮೇಲೆ ಹತ್ತಿ ಸಹಾಯಕ್ಕಾಗಿ ಕೈ ಮಾಡುತ್ತಿದ್ದರು. ನಂತರ ಕುಡಚಿ ಪೋಲಿಸರು ಹಾಗೂ ಸ್ಥಳೀಯರು ಹಗ್ಗದ ಮೂಲಕ ಜೆಸಿಬಿ ಸಹಾಯವನ್ನು ಪಡೆದುಕೊಂಡು ವಾಹನದ ಮೇಲೆ ಕುಳಿತ ಚಾಲಕ ಮತ್ತು ಕ್ಲೀನರ್ ಇಬ್ಬರನ್ನೂ ಹರ ಸಾಹಸ  ಮಾಡಿ ಹೊರತೆಗೆದು ನಂತರ ವಾಹನವನ್ನು ಮೇಲೆ ಎತ್ತಿ ದಂಡಕ್ಕೆ ತಂದರು. 

ಅಪಾಯಕ್ಕೆ ಸಿಲುಕಿದ ಚಾಲಕ ಮತ್ತು ಕ್ಲೀನರ್ ಇವರನ್ನು ಪೋಲಿಸರು ಮತ್ತು ಸ್ಥಳೀಯರು ರಕ್ಷಣೆ ಕಾರ್ಯಚರಣೆಗೆ ಮುಂದಾದರೆ ಇಂಥ ಆಪತ್ತಿನ ಸ್ಥಿತಿಯಲ್ಲೂ ಹಾಲು ಎಗರಿಸಲು ಮುಂದಾಗಿದ್ದು ನೋಡಿದರೆ ಮಾನವೀಯತೇ ಮರೆಯಾಗುತ್ತಿದೆ ಎಂದೆನಿಸದಿರದು. ಸ್ಥಳೀಯ ಕೀಡಿಗೆಡಿಗಳು ಸುಮಾರು 7 ನೂರು ಲೀಟರ್ ಹಾಲಿನ ಪಾಕೆಟ್ ನೀರು ಪಾಲಾಗುತ್ತಿದ್ದನ್ನು ಗಮನಿಸಿ ಗಂಟುಮೂಟ್ಟೆ ಕಟ್ಟಿಕೊಂಡು ಮನೆಗಳಿಗೆ ತಗೆದುಕೊಂಡು ಹೋಗುತ್ತಿದ್ದರು. ಅದರಲ್ಲಿ ನೂರಾರು ಹಾಲಿನ ಪಾಕೆಟಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದವು. ಅವುಗಳನ್ನು ತಗೆದುಕೊಳ್ಳುವುದಕ್ಕೆ ನಾ ಮುಂದೆ ನೀ ಮುಂದೆ ಎಂದು ಓಡಾಡುತ್ತಿದ್ದರು.

ನಂತರ ಘಟನಾ ಸ್ಥಳಕ್ಕೆ ಕುಡಚಿ ಪೋಲಿಸ್ ಠಾಣೆಯ ಪಿಎಸ್ಆಯ್ ಅವರು ಬಂದ ತಕ್ಷಣ ಹಾಲಿನ ಪಾಕೆಟ ತಗೆದುಕೊಂಡು ಹೋಗುವವರನ್ನು ದೂರ ಓಡಿಸಿ ಆ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಭಿರಡಿ ರಸ್ತೆ ಹಾಗೂ ಚಿಂಚಲಿ ಪಟ್ಟಣದ ಹೊರವಲಯದಲ್ಲಿ ಹಾಕಿ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಿದರು.

ಕುಡಚಿ ಪಿಎಸ್ಆಯ್ ಝೆ.ಎನ್. ಮೋಕಾಶಿ, ಎಸ್.ಪಿ. ಪೂಜೇರಿ, ಆರ್. ಆರ್. ಕಿಚಡಿ, ಜಿ.ಎಚ್.ಹೊನವಾಡ, ಗ್ರಾಮ ಲೆಕ್ಕಾಧಿಕಾರಿಗಳಾದ ಜೆ.ಎಮ್. ಕಿತ್ತೂರು, ಲವು ಚೌಗಲಾ, ಸಂಜು ನಿಂಗನೂರೆ, ಲಕ್ಷ್ಮಣ ಕೋಳಿಗುಡ್ಡೆ, ಶ್ರಾವಣ ಕಾಂಬಳೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.