ನವದೆಹಲಿ 13: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ಹಿರಿಯ ನಟ, ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಶತೃಘ್ನ ಸಿನ್ಹಾ ಅವರನ್ನು ವಾರಾಣಸಿಯಿಂದ ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿಸಲು ಸಮಾಜವಾದಿ ಪಕ್ಷ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಕಳೆದ ಚುನಾವಣೆಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿ 2ನೇ ಸ್ಥಾನಗಳಿಸಿದ್ದ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಬೆಂಬಲವನ್ನೂ ಕೋರಲು ಸಮಾಜವಾದಿ ಪಕ್ಷ ಚಿಂತಿಸಿದೆ ಎಂದು ವರದಿಗಳು ತಿಳಿಸಿವೆ.
ಲಖನೌನಲ್ಲಿ ಸಮಾಜವಾದಿ ಪಕ್ಷ ಆಯೋಜಿಸಿದ್ದ ಜಯಪ್ರಕಾಶ್ ನಾರಾಯಣ್ ಜನ್ಮದಿನ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಹಾಗೂ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರು ಪಾಲ್ಕೊಂಡಿದ್ದರು. ಈ ಹಿನ್ನಲೆಯಲ್ಲಿ ಸಮಾಜವಾದಿ ಪಕ್ಷದ ವತಿಯಿಂದ ಪ್ರಧಾನಿ ಮೋದಿ ವಿರುದ್ಧ ಶತ್ರುಘ್ನ ಸಿನ್ಹಾ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಅಲ್ಲದೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶತ್ರುಘ್ನ ಸಿನ್ಹಾ ಹಾಗೂ ಯಶವಂತ್ ಸಿನ್ಹಾ ಜೊತೆಗೆ ಸಭೆಯೊಂದನ್ನು ನಡೆಸಿದ್ದು, ಸಬೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.