ಲೋಕದರ್ಶನ ವರದಿ
ಸಿಂದಗಿ 25: ಭಾಷೆ ನಾಡು, ದೇಶವನ್ನು ಕಟ್ಟಿದರೆ, ಕಾವ್ಯ ಜನಾಂಗವನ್ನು ಬೆಳೆಸುತ್ತದೆ. ಸಾಹಿತ್ಯ ಮನುಷ್ಯನನ್ನು ಸುಶಿಕ್ಷಿತ ಸುಸಂಸ್ಕೃತನನ್ನಾಗಿಸುತ್ತದೆ ಸಿಂದಗಿಯ ಎಂದು ಅಂಬಿಕಾತನಯದತ್ತ ವೇದಿಕೆಯ ಹಿರಿಯ ಸಾಹಿತಿ ಡಾ. ಬಿ. ಆರ್. ನಾಡಗೌಡ ಹೇಳಿದರು.
ಪಟ್ಟಣದ ಮಂದಾರ ಹಾಗೂ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯು ಹಮ್ಮಿಕೊಂಡ ಮಂದಾರ ವಿರಾಸತ್ 2019 ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಅನುಪಮಾ ಪಿ ಅವರ ಮನದ ಮಲ್ಲಿಗೆ ಕವನ ಸಂಕಲನದ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯದ ಭಾಷೆ ಓದುಗನ ಭಾವನೆಗಳನ್ನು ಹಿಡಿದಿರುವಂತಿರಬೇಕು. ಛಂದಸ್ಸು, ದೃಶ್ಯಗಳು ಮನಸ್ಸು ಹಾಗೂ ಮೆದುಳಿಗೆ ಮುಟ್ಟುವಂತಿರಬೇಕು ಎಂದು ಯುವ ಸಾಹಿತಿಗಳಿಗೆ ಸಲಹೆ ನೀಡಿದರು.
ಮನದ ಮಲ್ಲಿಗೆ ಪುಸ್ತಕ ಪರಿಚಯ ಮಾಡಿಕೊಟ್ಟ ಮುಳವಾಡ ಮಕ್ಕಳ ಸಾಹಿತಿ ಫ. ಗು ಸಿದ್ದಾಪುರ, ಸಿಂದಗಿ ನಾಡಿನ ಮಣ್ಣಿನ ಪ್ರತಿ ಕಣದಲ್ಲೂ ಸಾಹಿತ್ಯದ ಘಮಲೂ ತುಂಬಿದೆ. ಸಾಹಿತ್ಯ ಇಲ್ಲಿ ಮಡುಗಟ್ಟಿದೆ. ಒಟ್ಟಾರೆ ಸಿಂದಗಿ ಸಾಹಿತ್ಯದ ತೂಗು ತೊಟ್ಟಿಲು. ಇಲ್ಲಿನ ಹಲವಾರು ಕವಿ ಸಾಹಿತಿಗಳು, ನಾಡಿನಾದ್ಯಾಂತ ಪಸರಿಸಿದ್ದಾರೆ. ಅದೇ ರೀತಿ ದಾವಣಗೆರೆಯಿಂದ ಇಲ್ಲಿಗೆ ಬಂದು ಸಾಹಿತ್ಯದ ಕೃಷಿಯಲ್ಲಿ ಅನುಪಮಾ ಅವರು ತೊಡಗಿಸಿಕೊಂಡಿದ್ದಾರೆಂದರೇ ಅದು ಈ ಮಣ್ಣಿನ ಗುಣ. ತೋಟದ ಸಿದ್ದಲಿಂಗ ಜಗದ್ಗುರುಗಳನ್ನು, ರಮಾನಂದ ತೀರ್ಥರಂತ ಮಹಾನ ದಾರ್ಶನಿಕರನ್ನು ಕೊಟ್ಟಂತಹ ನಾಡಿನಲ್ಲಿ ಹೊರ ಹೊಮ್ಮಿದ ಮನದ ಮಲ್ಲಿಗೆ ಹೂ ಬುಟ್ಟಿಯಲ್ಲಿ ಮುಳ್ಳಿನಲ್ಲಿ ಅರಳಿದ ಗುಲಾಬಿಗಳಿವೆ. ಕಂಡುಂಡು ಅನುಭವಿಸಿದ ಪರಕಾಯ ಪ್ರವೇಶಿಸಿ ಬರೆದ ಅದ್ಭುತ ಕವಿತೆಗಳ ಸಂಗ್ರಹ ಮನದ ಮಲ್ಲಿಗೆಯಾಗಿದೆ ಎಂದು ಬಣ್ಣಿಸಿದರು.
ಪುಸ್ತಕ ಬಿಡುಗಡೆಯ ನಂತರ ಕವಿಗೋಷ್ಠಿ, ಬಸವರಾಜ ಅಗಸರ, ಮಹಾಂತೇಶ ನೂಲಾನವರ, ಅಶೋಕ ಬಿರಾದಾರ, ರವಿ ಪದ್ಮ, ಈರಣ್ಣಗೌಡ ಬಿರಾದಾರ, ಮುತ್ತು ಬ್ಯಾಕೋಡ, ಕಲ್ಯಾಣಕುಮಾರ ಪೂಜಾರಿ, ಗುಂಡಣ್ಣ ಕುಂಬಾರ ಕವಿತೆಗಳನ್ನು ವಾಚಿಸಿದರು.
ವೇದಿಕೆಯಲ್ಲಿ ಶಿಕ್ಷಣ ತಜ್ಞ ಎಚ್. ಟಿ ಕುಲಕಣರ್ಿ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಆಲಮೇಲದ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಂಡಿತ ಅವಜಿ, ಕಾವ್ಯ ಶಿಕ್ಷಣ ಸಂಸ್ಥೆಯ ಚಂದ್ರಶೇಖರ ನಾಗರಬೆಟ್ಟ, ಪ್ರಜಾಸ್ತ್ರ ವೆಬ್ ಪತ್ರಿಕೆಯ ನಾಗೇಶ ತಳವಾರ ಇದ್ದರು.
ಮಹಾಂತೇಶ ನೂಲಾನವರ ಸ್ವಾಗತಿಸಿದರು. ಮಂದಾರ ಶಿಕ್ಷಣ ಸಂಸ್ಥೆಯ ಸಂಚಾಲಕ ಸಿದ್ದಲಿಂಗ ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಬಿರಾದಾರ ವಂದಿಸಿದರು.