ಸಿಂದಗಿ: ಮನುಷ್ಯ ಮರಗಿಡಗಳ ಜೊತೆಗೆ ಬದುಕಬೇಕು: ಪಾಟೀಲ

ಲೋಕದರ್ಶನ ವರದಿ

ಸಿಂದಗಿ 13: ಮನುಷ್ಯ ಮರಗಿಡಗಳ ಜೊತೆಗೆ ಬದುಕಬೇಕು ಇಲ್ಲ ಭೂಮಿಯಿಂದ ಮಾಯವಾಗಬೇಕು ಎಂದು ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ, ತಾಲೂಕಾ ರೇಡ್ ಕ್ರಾಸ್ ಚೇರಮನ್ ಬಿ.ಎನ್.ಪಾಟೀಲ ಇಬ್ರಾಹಿಂಪೂರ ಹೇಳಿದರು.

ಪಟ್ಟಣದ ಲೋಯೋಲಾ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವಪರಿಸರ ದಿನ, 2019-20ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಎಂದರೆ ಮನುಷ್ಯ, ಕಲ್ಲು-ಮಣ್ಣು, ಪ್ರಾಣಿ-ಪಕ್ಷಿ, ಗಾಳಿ-ನೀರು, ಬೆಳಕು ಎಲ್ಲವನ್ನು ಒಳಗೊಂಡಿರುತ್ತದೆ.  ಇಂದು ಜನಸಂಖ್ಯೆ ಹೆಚ್ಚಾದ ಕಾರಣ ಗಿಡ-ಮರಗಳು ಹೆಚ್ಚು ಹೆಚ್ಚು ನಾಶವಾಗಿ ಭೂಮಿಯ ಮೇಲಿನ ನೈಸರ್ಗಿಕ  ಸಮತೋಲನ ತಪ್ಪಿಹೋಗುವದರ ಜೊತಗೆ ಸಸ್ಯ- ಪ್ರಾಣಿ ಸಂಕುಲದ ಪ್ರಬೇಧಗಳು ಅಳಿವಿನ ಅಂಚಿಗೆ ತಳ್ಳಲ್ಲಪ್ಪಡುತ್ತವೆ ಎಂದರು.

ಮನುಷ್ಯನ ಅಳೀವು ಉಳಿವು ಅರಣ್ಯಗಳ ಮೇಲೆ ಅವಲಂಭಿಸಿರುತ್ತದೆ. ಅದಕ್ಕಾಗಿಯೇ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ಗಿಡಮರಗಳನ್ನು ದೇವ ದೇವತೆಗಳಂತೆ ಪೂಜಿಸುವ ಪದ್ದತಿ ನಡೆದುಕೊಂಡು ಬಂದಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಗಿಡ ಮರಗಳನ್ನು ನಾಶಮಾಡುತ್ತಿರುವುದು ವಿಷಾಧನಿಯ ಎಂದು ವಿಷಾಧಿಸಿದರು.

ಪತ್ರಕರ್ತ ಮುರಗೇಶ ಹಿಟ್ಟಿ ಅವರು ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರ ನೀಡಿ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಎಂದು ಹೇಳಿದರು. 

ಬಿಜೆಇಸಿಎಸ್ ಉಪಾಧ್ಯಕ್ಷ ಪಾಧರ್ ಆ್ಯಂಟೋನಿದಾಸ್, ಲೋಯೊಲಾ ಶಾಲೆಯ ನೂತನ ವ್ಯವಸ್ಥಾಪಕ ಪಾಧರ್ ಅಲ್ವಿನ್ ಡಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಪರಿಸರದ ಬಗ್ಗೆ ಜಾಗೃತಿಮೂಡಿಸುವ ಕಿರು ನಾಟಕಗಳನ್ನು ಪ್ರದರ್ಶನ ಮಾಡಿದರು. ಶಾಲಾ ಮಕ್ಕಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.