ಸಿಂದಗಿ: ಆನೆಕಾಲು ರೋಗ ತಡೆಗಟ್ಟಲು ಸಹಕರಿಸಿ

ಲೋಕದರ್ಶನ ವರದಿ

ಸಿಂದಗಿ 18: ಆನೆಕಾಲು ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸಹಕರಿಸಬೇಕು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ. ಆರ್.ಎಸ್.ಇಂಗಳೆ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿ ಸಾಮೂಹಿಕ ಔಷಧಿ ನುಂಗಿಸುವ  ತಾಲೂಕಾ ಚಾಲನಾ ಸಮಿತಿ ಸಭೆ ಹಾಗೂ ಡೆಂಗ್ಯೂ ಮತ್ತು ಚಿಕೂನ್ ಗುನ್ಯ ನಿಯಂತ್ರಣದ ಬಗ್ಗೆ ಮತ್ತು ಸಕ್ರೀಯ ಕುಷ್ಠ ರೋಗ ಪತ್ತೆ ಹಚ್ಚುವ ಕಾರ್ಯಕ್ರಮದ ತಾಲೂಕ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಒಟ್ಟು 455030 ಜನಸಂಖ್ಯೆ ಇದ್ದು ಒಟ್ಟು ಮನೆಗಳ ಸಂಖ್ಯೆ 91006 ಇರುತ್ತದೆ. ಒಟ್ಟು ಮಾತ್ರೆ ನುಂಗಿಸಲು ಅರ್ಹ ಜನಸಂಖ್ಯೆ 418628 ಇರುತ್ತದೆ. ಆ.26 ರಿಂದ 31 ರವರೆಗೆ ನಡೆಯುವ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಾಮೂಹಿಕ ಡಿ.ಈ.ಸಿ ಮಾತ್ರೆ ನುಂಗಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಲ್ಲರೂ ಸಹಕರಿಸಬೇಕು. ಬೇಕಾಗುವ ಡಿ.ಈ.ಸಿ ಮಾತ್ರೆಗಳು 1137575 ಹಾಗೂ 455030 ಅಲ್ಬೆಂಡಾಝೋಲ ಮಾತ್ರೆಗಳನ್ನು ನುಂಗಿಸಬೇಕಾಗಿದೆ ಎಂದು ಹೇಳಿದರು.

ತಹಶೀಲ್ದಾರರು ಹಾಗೂ ಚಾಲನಾ ಸಮಿತಿ ಅಧ್ಯಕ್ಷ ಬಿ.ಎಸ್.ಕಡಕಬಾವಿ ಅವರು ಪ್ರಚಾರ ಮೈಕಿಂಗ್ ಉದ್ಘಾಟಿಸಿ ಬ್ಯಾನರ್, ಬಿತ್ತಿಪತ್ರ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.               

ಹಿರಿಯ ಆರೋಗ್ಯ ಸಹಾಯಕ ಪಿ.ವಾಯ್.ಚೌಡಕಿ ಮಾತನಾಡಿ, ಸೆ.4ರಿಂದ 23 ರವರೆಗೆ ಸಕ್ರೀಯ ಕುಷ್ಠರೋಗ ಪತ್ತೆ ಹಚ್ಚುವ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮ ಯಶಸ್ವಿಗೆ ಎಲ್ಲ ಇಲಾಖೆಗಳ ಸಹಕಾರ ಕೋರಿದರು.

ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಎಸ್.ಎನ್.ಹಡಗಲಿ, ಡಾ.ಸರೋಜಿನಿ ದಾನಗೊಂಡ ಹಾಗೂ ಸಿಬ್ಬಂದಿಗಳಾದ ಜಹಾಂಗೀರ ಸಿಂದಗಿಕರ, ಪ್ರಭು ಜಂಗಿನಮಠ, ಎ.ಎಸ್.ಪಾಟೀಲ, ಬಿ.ಎಸ್.ಡಿಗ್ಗಿ, ಪಿ.ಎಸ್ ರೂಡಗಿ, ಶಿವಾನಂದ ಬಮ್ಮನಳ್ಳಿ ವಿ.ಎಸ್.ಬಂದಿ ಹಾಗೂ ಇತರರು ಇದ್ದರು.