ಲೋಕದರ್ಶನ ವರದಿ
ಸಿಂದಗಿ 02: ರಾಜ್ಯದಾದ್ಯಂತ ನಶಿಸಿಹೋಗುತ್ತಿರುವ ಜಾನಪದ ಕಲೆ, ಸಾಹಿತ್ಯ ರಕ್ಷಣೆಯ ಜತೆಗೆ, ರಾಜ್ಯದಾದ್ಯಂತ ಅಲೆಮಾರಿ ಜನಾಂಗದವರನ್ನು ಗುರುತಿಸಿ ಅವರ ಕಲೆಯನ್ನು ಬೆಳಕಿಗೆ ತರುವಲ್ಲಿ ನಾವೆಲ್ಲರೂ ಶ್ರಮಿಸ ಬೇಕು ಎಂದು ಕನ್ನಡ ಹಿರಿಯ ಪ್ರಾಧ್ಯಾಪಕಿ ಡಾ. ಪಿ.ಎಸ್.ಚೌಕಿಮಠ ಹೇಳಿದರು.
ಪಟ್ಟಣದ ವಿದ್ಯಾನಗರದ ಬಡಾವಣೆ ಮತ್ತು ಸ್ಲಂ ಪ್ರದೇಶದಲ್ಲಿ ಸ್ಥಳಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಸಾಮಾಜಿಕ ಮತ್ತು ಭಾಷಿಕ ವೇದಿಕೆಯಿಂದ ಹಮ್ಮಿಕೊಂಡ ಜಾನಪದ ಕಲೆ ಉಳಿಸಿ ಎಂಬ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಒಬ್ಬರಿಂದ ಒಬ್ಬರಿಗೆ ಬಾಯಿ ಮೂಲಕ ಹರಡಿದ ಜಾನಪದ ಸಾಹಿತ್ಯವನ್ನು ನಾವು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಎಚ್.ಎಲ್.ನಾಗೇಗೌಡರು ಕಟ್ಟಿದ ಕನರ್ಾಟಕ ಜಾನಪದ ಪರಿಷತ್ತು ಇಂದು ಟಿ. ತಿಮ್ಮೇಗೌಡರ ನೇತೃತ್ವದಲ್ಲಿ ನಾಡಿನ ಉದ್ದಗಲಕ್ಕೂ ಜಾನಪದ ಕಲಾವಿದರನ್ನು ಗುರುತಿಸುವ ಮೂಲಕ ತನ್ನದೆಯಾದ ಛಾಪು ಮೂಡಿಸಿದೆ ಎಂದು ಹೇಳಿದರು.
ಪ್ರಾಧ್ಯಾಪಕ ಡಾ.ನಾಗರಾಜ, ಪ್ರೊ.ರವಿ, ಡಾ.ಶ್ರೀಧರ, ಡಾ.ಸುಮಾ, ಪ್ರೊ.ವಿಕ್ರಮ, ಪ್ರತಿಕಾ, ವಿದ್ಯಾರ್ಥಿ ಪ್ರತಿನಿಧಿ ಶಿವಾನಂದ, ಮಲ್ಲು, ಅಶ್ವಿನಿ, ಪ್ರಶಾಂತ ಜಾಥಾದ ನೇತ್ರತ್ವ ವಹಿಸಿಕೊಂಡಿದ್ದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿ ಸೋಬಾನ ಪದ, ಚೌಡಕಿಪದ, ಹಂತಿ ಹಾಡುಗಳನ್ನು ಹಾಡಿ ಕುಣಿದರು. ಜನಪದ ಸಂಸ್ಕೃತಿ ಉಳಿಸೋಣ-ಬೇಳಿಸೋಣ ಎಂಬ ಘೋಷಣೆ ಕೂಗಿದರು.