ಕಾರವಾರ 17: ಗೋವಾದ ವಾಸ್ಕೋ ರೈಲ್ವೆ ನಿಲ್ದಾಣದಲ್ಲಿ ನಗರದ ಕೋಡಿಭಾಗದಲ್ಲಿನ ಸಾಯಿ ಮಂದಿರದಲ್ಲಿ ಕದ್ದ ದೇವರ ಕೊಡೆಯನ್ನ ಕಳ್ಳರು ಬಿಟ್ಟು ಪರಾರಿಯಾಗಿದ್ದು ರೈಲ್ವೆ ಪೊಲೀಸರು ಇದನ್ನ ಪತ್ತೆ ಮಾಡಿದ್ದಾರೆ. ಇನ್ನು ಕಳ್ಳರ ಗುರುತು ಸಹ ಪೊಲೀಸರು ಪತ್ತೆ ಹಚ್ಚಿದ್ದು ಶೀಘ್ರದಲ್ಲಿ ಬಂದಿಸುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಬೆಳಗಿನ ಜಾವ ಕಾರವಾರ ನಗರದ ಸಾಯಿಕಟ್ಟಾ ಸಾಯಿಮಂದಿರದಲ್ಲಿ ಕಳ್ಳತನ ನಡೆದಿದ್ದು, ಈ ವೇಳೆ ದೇವರ ಬೆಳ್ಳಿ ಕೊಡೆ, ಪಾದುಕೆ, ಪ್ರಭಾವಳಿ ಸೇರಿದಂತೆ ಸುಮಾರು 12 ಕೆ.ಜಿ.ಗೂ ಅಧಿಕ ಮೌಲ್ಯದ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಮೂರು ಆರೋಪಿಗಳು ಬೆಳಗ್ಗಿನ ಜಾವ ಬೆಳ್ಳಿ ವಸ್ತುಗಳನ್ನ ಕದ್ದು ಪರಾರಿಯಾಗಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.ಕಳ್ಳತನ ನಡೆದ ದಿನವೇ ಸಂಜೆ ವೇಳೆ ಗೋವಾದ ವಾಸ್ಕೋ ರೈಲ್ವೆ ನಿಲ್ದಾಣದಲ್ಲಿ ರೂ. 5.3 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳ್ಳಿಯ ಕೊಡೆ ಕಂಡುಬಂದಿತ್ತು. ರೈಲ್ವೆ ಪೊಲೀಸರು ಎಂದಿನಂತೆ ಪೆಟ್ರೋಲಿಂಗ್ ಮಾಡುತ್ತಿದ್ದ ವೇಳೆ ಒಂದು ಬೆಡ್‌ಶೀಟ್‌ನಲ್ಲಿ ಸುತ್ತಿದ್ದ ಅನಾಥವಾಗಿ ಬಿದ್ದಿದ್ದ ಬ್ಯಾಗ್ ಅನ್ನು ಗಮನಿಸಿದ್ದರು. ಅದರೊಳಗಿನ ವಸ್ತುಗಳನ್ನು ಪರೀಶೀಲಿಸಿದಾಗ, ಬಿಳಿ ಲೋಹದ ವಸ್ತು ಇದ್ದುದು ಕಂಡುಬಂತು. ಇದು ಬೆಳ್ಳಿಯದೇನೋ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಅಕ್ಕಸಾಲಿಗರ ಸಹಾಯ ಪಡೆದರು.ಸ್ಥಳಕ್ಕೆ ಧಾವಿಸಿದ ಅಕ್ಕಸಾಲಿಗರು ಹಾಗೂ ಬಂಗಾರದ ವ್ಯಾಪಾರಿ ಪರೀಕ್ಷಿಸಿದ ನಂತರ, ಈ ವಸ್ತು ಶೇ. 87.50 ಬೆಳ್ಳಿಯಿಂದ ಮಾಡಲ್ಪಟ್ಟ ಸಾಂಪ್ರದಾಯಿಕ ದೇವರ ಕೊಡೆ ಎಂದು ದೃಢಪಡಿಸಿದರು. ಇದರ ತೂಕ ಸುಮಾರು 6.4 ಕೆ.ಜಿ.ಯಿದ್ದು, ಸುಮಾರು ರೂ. 5,37,600 ರೂ. ಮೌಲ್ಯದ್ದಾಗಿದೆ ಎಂದು ಅಂದಾಜು ಮಾಡಲಾಗಿದೆ.
ಇನ್ನು ಇದೇ ವೇಳೆ ಈ ವಿಚಾರ ಕಾರವಾರ ಪೊಲೀಸರ ಗಮನಕ್ಕೆ ಬಂದಿದ್ದು ಪರೀಶೀಲನೆ ನಡೆಸಿದಾಗ ಇದು ಸಾಯಿ ಮಂದಿರದಲ್ಲಿಯೇ ಕದ್ದ ದೇವರ ಕೊಡೆ ಎಂದು ಪತ್ತೆಯಾಗಿದೆ. ಇನ್ನು ಪೊಲೀಸರು ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿ ವಿಡಿಯೋಗಳನ್ನ ಪರೀಶೀಲಿಸಿ ಕಳ್ಳರು ಎತ್ತ ಸಾಗಿದ್ದಾರೆ ಎನ್ನುವ ಮಾಹಿತಿ ಪಡೆದು ಬಂದಿಸಲು ಜಾಡು ಬೀಸಿದ್ದು ಶೀಘ್ರದಲ್ಲಿಯೇ ಬಂದಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಉತ್ತರ ಭಾರತದವರು ಎಂಬ ಸುಳಿವು ಲಭ್ಯ:ಕಾರವಾರದ ಸಾಯಿ ಮಂದಿರದಲ್ಲಿ ನಡೆದ ಕಳ್ಳತನದಲ್ಲಿ ಉತ್ತರ ಭಾರತ ಮೂಲದ ಮೂವರು ಆರೋಪಿಗಳು ಮಾಡಿರುವ ಗುರುತು ಪತ್ತೆಯಾಗಿದೆ ಎನ್ನಲಾಗಿದೆ. ಈಗಾಗಲೇ ಗೋವಾದ ರೈಲ್ವೆ ನಿಲ್ದಾಣದಲ್ಲಿ ದೇವರ ಬೆಳ್ಳಿ ಕೊಡೆ ಸಿಕ್ಕ ತಕ್ಷಣ ಪೊಲೀಸರ ತಂಡ ಗೋವಾಕ್ಕೆ ತೆರಳಿ ಪರೀಶೀಲನೆಗೆ ಮುಂದಾಗಿದ್ದು ಈ ವೇಳೆ ಕಳ್ಳರ ಗುರುತನ್ನ ಸಹ ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.ಆರೋಪಿತರು ಈ ಹಿಂದೆಯೂ ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತಾ ಬಂದಿದ್ದು ದೆಹಲಿಯಲ್ಲಿ ಈ ಹಿಂದೆ ಕಳ್ಳತನ ಪ್ರಕರಣ ಮಾಡಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ ಎನ್ನುವ ಮಾಹಿತಿ ಪಡೆದಿದ್ದು ಆರೋಪಿಗಳ ಊರನ್ನ ಪತ್ತೆ ಹಚ್ಚಿ ಬಂಧಿಸಿಕೊಂಡು ಬರುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.
ಈಗಾಗಲೇ ಆರೋಪಿಗಳ ಬೆನ್ನು ಹತ್ತಿರುವ ರೈಲುಗಳ ಮಾಹಿತಿ ಪಡೆದು ಎಲ್ಲಿ ಹೋಗಿರಬಹುದು ಎನ್ನುವ ಮಾಹಿತಿಯನ್ನ ಸಹ ಕಲೆ ಹಾಕುತ್ತಿದ್ದು ಬೇರೆ ರಾಜ್ಯದ ಪೊಲೀಸರ ಸಹಾಯ ಪಡೆದು ಆರೋಪಿಗಳ ಬಂಧನ್ಕೆ ಪೊಲೀಸರು ಬಲೆ ಬೀಸಿದ್ದಾರೆ.