2019-20ರಲ್ಲಿ ಭಾರತ-ಪಾಕ್ ನಡುವಿನ ವಾಣಿಜ್ಯ ವಹಿವಾಟು ಗಣನೀಯ ಕುಸಿತ

ಇಸ್ಲಾಮಾಬಾದ್, ಜ 23 :    ಭಾರತ-ಪಾಕಿಸ್ತಾನ ನಡುವಿನ ಹಗೆತನದಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಗಣನೀಯ ಕುಸಿತವಾಗಿದೆ.  

2019-20ರ ಮೊದಲಾರ್ಧ ಅವಧಿಯಲ್ಲಿ ಪಾಕಿಸ್ತಾನ, ಭಾರತಕ್ಕೆ ಕೇವಲ 16.8 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದೆ. 2018-19ರ ಮೊದಲಾರ್ಧದಲ್ಲಿ ನಡೆದಿದ್ದ 213 ದಶಲಕ್ಷ ಡಾಲರ್ ವಹಿವಾಟಿಗೆ ಹೋಲಿಸಿದರೆ ಇದು ಗಮನಾರ್ಹ ಕುಸಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಪ್ರಕಟಿಸಿರುವ ಮಾಹಿತಿಯಿಂದ ಗೊತ್ತಾಗಿದೆ.   

ಡಾನ್ ಪತ್ರಿಕೆಯ ವರದಿ ಪ್ರಕಾರ, ಭಾರತದಿಂದ ಪಾಕಿಸ್ತಾನಕ್ಕೆ ಆಮದು ಪ್ರಮಾಣ ಸಹ ತೀವ್ರ ಕುಸಿತವಾಗಿದೆ.  2019-20ರ ಮೊದಲಾರ್ಧದಲ್ಲಿ ಕೇವಲ 286.6 ದಶಲಕ್ಷ ಡಾಲರ್ ವಹಿವಾಟು ನಡೆದಿದೆ. ಆದರೆ, 2018-19ರಲ್ಲಿ ಇದೇ ಅವಧಿಯಲ್ಲಿ 865 ದಶಲಕ್ಷ ಡಾಲರ್ ವಹಿವಾಟು ನಡೆದಿತ್ತು. 

ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ಉಗ್ರರ ದಾಳಿ ಮತ್ತು ಆ ನಂತರ ಭಯೋತ್ಪಾದಕ ಶಿಬಿರಗಳಿದ್ದ ಬಾಲಕೋಟ್‍ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿದ ನಂತರ ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸಿತ್ತು. ಕಳೆದ ಆಗಸ್ಟ್ ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನ, ಭಾರತದ ವಿರುದ್ಧ ರಾಜತಾಂತ್ರಿಕ ದಾಳಿಯನ್ನು ಆರಂಭಿಸಿತ್ತು.