ಇಂದಿರಾ ಕ್ಯಾಂಟೀನ್ ನಲ್ಲಿ ಫುಡ್ ಪ್ಯಾಕೇಟ್ ವಿತರಣೆ: ಕೊರೊನಾ ನಿರ್ವಹಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಲು ಸಂಪುಟದಲ್ಲಿ ಮಹತ್ವದ ತೀರ್ಮಾನ

ಬೆಂಗಳೂರು, ಮಾ 27,ದೇಶದಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳಬೇಕಾದ ಜರೂರು ಕ್ರಮಗಳು ಹಾಗೂ ಸಚಿವರಿಗೆ ಜವಾಬ್ದಾರಿ ವಹಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೊರೋನಾ ನಿರ್ವಹಣೆಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಿದ ಮುಖ್ಯಮಂತ್ರಿ, ಈ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆಯಾ ಜಿಲ್ಲಾಧಿಗಳ ಜೊತೆ ಸಭೆ ನಡೆಸಿ ಆಯಾ ಜಿಲ್ಲೆಗಳ ಉಸ್ತುವಾರಿಗಳು ಕ್ಷೇತ್ರಕ್ಕೆ ಹೋಗಿ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಬೇಕು ಎಂದು  ಮುಖ್ಯಮಂತ್ರಿ ಸೂಚಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಏ 14ರವರೆಗೆ ದೇಶಾದ್ಯಂತ ಲಾಕ್ ಡೌನ್ ಆಗಿರುವುದರಿಂದ ಆಹಾರದ ಕೊರತೆಯಾಗದಂತೆ ನೋಡಿಕೊಳ್ಳಲು ಇಂದಿರಾ ಕ್ಯಾಂಟೀನ್ ನಲ್ಲಿ ಫುಡ್ ಪ್ಯಾಕೆಟ್ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಮೂರು ನೀರಾವರಿ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಟ್ರಾಕ್ಟರ್ ಟಿಲ್ಲರ್ ಸಾಲ ಬಡ್ಡಿ ಮನ್ನಾ ಅವಧಿಯನ್ನು ಮಾ 31 ರಿಂದ   ಜೂ. 31 ರವರೆಗೆ ವಿಸ್ತರಣೆ ಮಾಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಮನೆ ಮನೆಗೆ ಪ್ರತಿದಿನದ ದಿನಸಿ ಹಂಚಿಕೆ ಮಾಡಲು ಸಹ ತೀರ್ಮಾನಿಸಲಾಗಿದೆ.
ಅಗತ್ಯ ವಸ್ತುಗಳಾದ ಮಾಂಸ, ಬೆಳೆಕಾಳು, ತರಕಾರಿ, ಹಣ್ಣುಗಳು ಸೇರಿದಂತೆ ಆಹಾರಧಾನ್ಯಗಳು ಕೊರತೆಯಾಗದಂತೆ ಸರ್ಕಾರ ಕ್ರಮಕೈಗೊಳ್ಳಲು ಹಾಗೂ ರೈತರ ಬೆಳೆಗಳು ಗೋದಾಮಿಗೆ, ಗೋದಾಮಿನಿಂದ ಚಿಲ್ಲರೆ ಮಾರುಕಟ್ಟೆಗಳಿಗೆ  ಸುಗಮವಾಗಿ ಸರಬರಾಜು ಮಾಡಲು ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಮೀನುಗಾರರಿಗೆ ನೀಡಲಾಗುವ    ಮತ್ಯೋತ್ಸವ ಮನೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಹಂಚಿಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ನಿಗಮ ಮನೆಗಳನ್ನು ಹಂಚಿಕೆ ಮಾಡಲು ಹಿಂದೆ ಸರಿದ ಕಾರಣ ಇನ್ನುಮುಂದೆ ಮೀನುಗಾರಿಕೆ ಇಲಾಖೆಯಿಂದಲೇ ಮೀನುಗಾರರಿಗೆ ನೇರವಾಗಿ ಮನೆಗಳನ್ನು ನೀಡಲು ಅನುಮತಿ ನೀಡಿದ್ದು, ೩೯.೬೩ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಕರ್ನಾಟಕ ಕಲ್ಲುಪುಡಿ ಕ್ರಷರ್ ಗಳನ್ನು ಫೆ 30ರೊಳಗೆ ನವೀಕರಣ ಮಾಡಬೇಕಿತ್ತು. ಆದರೆ ನವೀಕರಣ ವಿಳಂಬವಾಗಿರುವ ಕಾರಣ ಸುಗ್ರೀವಾಜ್ಞೆ ಮೂಲಕ ನವೀಕರಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು. ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಯನ್ನು ಮೇಲ್ಮನೆಯಲ್ಲಿ ಮಂಡಿಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿಲ್ಲ. ಬೆಂಗಳೂರು ನಗರಪಾಲಿಕೆ ಕಾಯಿದೆಗೆ ಸಂಪುಟದಲ್ಲಿ ಘಟನೋತ್ತರ ಒಪ್ಪಿಗೆ ನೀಡಲಾಗಿದೆ. ಜಂಟಿ ಪರಿಶೀಲನಾ ಸಮಿತಿಯಿಂದ ವರದಿ ಬಂದ ಬಳಕ ಕಾಯ್ದೆಗೆ  ಒಪ್ಪಿಗೆ ನೀಡಲಾಗುವುದು ಎಂದರು.
ಇಡೀ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒಂದೇ ಸಮಿತಿ ಇತ್ತು. ಈಗ ಅದನ್ನು ಪುನರ್ ವಿಂಗಡಣೆ ಮಾಡಿ ಜಿಲ್ಲಾವಾರು ಸಮಿತಿ ರಚನೆಗೆ ಸಂಪುಟ ಒಪ್ಪಿದೆ. ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೀಡಲಾಗಿದ್ದ ನೇರ ನೇಮಕಾತಿ ಅಧಿಕಾರವನ್ನು ಹಿಂಪಡೆದು ಸಮಗ್ರ ಪರಿಶೀಲನೆಯನ್ನು ಇನ್ನುಮುಂದೆ ಸರ್ಕಾರವೇ ವಹಿಸಿಕೊಳ್ಳಲಿದೆ. ಮೈಶುಗರ್ ಕಾರ್ಖಾನೆಯಲ್ಲಿ ಇ ಟೆಂಡರ್ ಗೆ ಅವಕಾಶ ನೀಡುವ ಮತ್ತು ಮಂಡ್ಯದ ಮೈ ಶುಗರ್ ಕಾರ್ಖಾನೆಯನ್ನು ಎಲ್.ಆರ್.ಓ.ಟಿ ಆಧಾರದ ಮೇಲೆ ಖಾಸಗಿ ಕಂಪನಿಗೆ 40 ವರ್ಷ ಅವಧಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ.
ಮಹದಾಯಿ ಯೋಜನೆಯ ಬಂಡೂರು ನಾಲಾ ತಿರುವು ಯೋಜನೆಯ 799 ಕೋಟಿ ರೂ,, ಕಳಸಾನಾಲಾ ತಿರುವು ಯೋಜನೆಯ 855.80 ಕೋಟಿ ಮೊತ್ತದ ಕಾಮಗಾರಿ ಮತ್ತು 964 ಕೋಟಿ ಮೊತ್ತದ ಭೀಮಾ ಏತನೀರಾವರಿ ಯೋಜನೆಗೆ ಸಂಫುಟ ಒಪ್ಪಿಗೆ ನೀಡಿದೆ ಎಂದು ಸಚಿವ ಜೆ.ಸಿ. ಮಾಧು ಸ್ವಾಮಿ ಹೇಳಿದರು. ಹಾವೇರಿ ಜಿಲ್ಲೆಯ ಬಸಾಪುರ, ರಾಯಚೂರಿನ ಸಂಕನೂರು ಹಾಗೂ  ಕೊಪ್ಪಳ ಜಿಲ್ಲೆ ಲಿಂಗದಹಳ್ಳಿಯಲ್ಲಿ ತಲಾ ಒಂದೊಂದು ೨೫ ಕೋಟಿ ರೂ ಅನುದಾನದಲ್ಲಿ ಅಲ್ಪಸಂಖ್ಯಾತ ವಸತಿ ಶಾಲೆಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಲೋಕೋಪಯೋಗ ಇಲಾಖೆಯಿಂದ ಕಾರವಾರ ಬಂದರಿನಲ್ಲಿ ೧೯ ಕೋಟಿ ರೂ ಅನುದಾನದಲ್ಲಿ ಬೆಂಕಿ ಆರಿಸುವ ಉಪಕರಣ ಖರೀದಿಗೆ ಒಪ್ಪಿಗೆ ನೀಡಲಾಗಿದೆ ಎಂದರು.