‘ಯಾರದೋ ಹಿತಕೆ ಯಾವುದೋ ಸ್ವಾರ್ಥಕ್ಕೆ ಬಲಿಯಾಗುತ್ತಾ, ಕಣ್ಣಲು ಸೂಜಿಯ ಚುಚ್ಚಿಕೊಂಡಿದ್ದೇನೆ ಬದುಕು ಬಲುಭಾರ’ ಎಂದು ಬರೆಯುವ ಹಿರಿಯ ಕವಿ ಸಿದ್ಧರಾಮ ಹಿರೇಮಠ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರು. ಸ್ಥಳೀಯ ಹಿರೇಮಠ ವಿದ್ಯಾಪೀಠ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 32 ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಂತರಸರಿಂದ ಕಾವ್ಯ ಬರೆಯಲು ಪ್ರೇರೇಪಣೆ ಪಡೆದ ಇವರು ಕವಿತೆ, ಗಜಲ್, ಹೈಕು, ಲೇಖನಗಳು ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಬರವಣಿಗೆ ಮಾಡಿದ್ದಾರೆ. ಬಾನು ಸುರಿದ ಮಾತು, ಅನನ್ಯ, ನನ್ನೊಳಗಿನ ನಾನು ಇವರ ಪ್ರಕಟಿತ ಕವನ ಸಂಕಲನಗಳಾದರೆ ‘ಲಹರಿ’ ಗಜಲ್ ಸಂಕಲನ, ‘35 ಗಜಲ್ 45 ಹೈಕುಗಳು’ ಇವರ ಗಜಲ್ ಮತ್ತು ಹೈಕುಗಳನ್ನೊಳಗೊಂಡ ಕೃತಿಯಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಆಂಡಯ್ಯ’ ಕೃತಿಯನ್ನು ಸಂಪಾದನೆ ಮಾಡಿದ್ದಾರೆ. ‘ವಡೇವು’ ಕೂಡ್ಲಿಗಿ ತಾಲೂಕಿನ ವೈಶಿಷ್ಟ್ಯ ಲೇಖನಗಳ ಸಂಗ್ರಹವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಗಜಲ್ ಕೃತಿಯಲ್ಲಿ ಇವರ ಗಜಲ್‌ಗಳು ಪ್ರಕಟಗೊಂಡಿವೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ವಾಚನ ಮಾಡಿದ್ದಾರೆ. ವಿವಿಧ ಕಾರ್ಯಕ್ರಮ, ಗೋಷ್ಠಿಗಳಲ್ಲಿ ಉಪನ್ಯಾಸ ಮಾಡಿದ್ದಾರೆ. ಇತ್ತೀಚೆಗೆ ಇವರ ಗಜಲ್ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕವು ‘ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ. ಇವರು ಬರೆದ ಒಂದು ಗಜಲ್‌ನ ಓದು ಮತ್ತು ಒಳನೋಟ ನಿಮಗಾಗಿ.
ಗಜಲ್
ಒಲವಿನ ಅರ್ಥ ಇನ್ನೂ ತಿಳಿಯುತ್ತಿಲ್ಲ ದೂರವಿರು ಸಾವೇ
ನೋವಿನ ಹಾದಿ ಇನ್ನೂ ಮುಗಿದಿಲ್ಲ ದೂರವಿರು ಸಾವೇ
ಒಲಿದವಳೋ ಬೆಂಕಿಯನ್ನುರಿಸಿ ನಡೆದು ಹೋದಳು
ಹೃದಯವಿನ್ನೂ ಬೆಂದು ಬೂದಿಯಾಗಿಲ್ಲ ದೂರವಿರು ಸಾವೇ
ಬದುಕಿನ ಅನುಭವಗಳ ಮೂಟೆಯನ್ನು ಹೊತ್ತು ಹೊತ್ತೇ ಕುಸಿದಿರುವೆ
ನಡೆವ ಚೈತನ್ಯವಿನ್ನೂ ಉಡುಗಿಲ್ಲ ದೂರವಿರು ಸಾವೇ
ಪ್ರೀತಿ ಪ್ರೇಮಗಳ ಹುಚ್ಚು ಸುಳಿಯಲ್ಲಿ ಸಿಲುಕಿ ತಿರುಗುತ್ತಿರುವೆ
ಆಸರೆಯ ಭರವಸೆಯಿನ್ನೂ ಮುಳುಗಿಲ್ಲ ದೂರವಿರು ಸಾವೇ
ನಾನು ಏನೆಂಬುದನ್ನರಿಯಲು ಚಡಪಡಿಸುತಿರುವೆ ಸದಾ
ಸಿದ್ಧನ ಹುಡುಕಾಟವಿನ್ನೂ ಮುಗಿದಿಲ್ಲ ದೂರವಿರು ಸಾವೇ
- ಸಿದ್ಧರಾಮ ಹಿರೇಮಠ, ಕೂಡ್ಲಿಗಿ
ಗಜಲ್‌ನಲ್ಲಿ ಪ್ರೀತಿ, ಪ್ರೇಮ, ವಿರಹ ಮತ್ತು ಸಾವು ತುಂಬ ಕಾಡುವ ಪ್ರತಿಮೆಗಳು. ಅದರಲ್ಲೂ ಸಾವು ಕಾಡಿದಷ್ಟು ಬೇರೆ ಯಾವ ಭಾವಗಳೂ ಕವಿಗಳನ್ನು ಕಾಡಿಲ್ಲ. ಬೇಂದ್ರೆ ಅವರು ‘ಸಾವಿಗೆ ನಾನೆಂದೂ ಭಯ ಪಡುವುದಿಲ್ಲ. ಏಕೆಂದರೆ ಅದು ಬಂದಾಗ ನಾನಿರುವುದಿಲ್ಲ’ ಎಂದು ನುಡಿಯುತ್ತಾರೆ. ಹುಟ್ಟು ಬದುಕಿನ ಒಂದು ಮುಖವಾದರೆ ಸಾವು ಅದರ ಇನ್ನೊಂದು ಮುಖ. ಒಂದು ಬಯಸದೇ ಬಂದದ್ದು ಮತ್ತೊಂದು ಬಯಸಿದರೂ ಬಿಡಲಾರದ್ದು. ಈ ಗಜಲ್‌ನಲ್ಲಿ ಸಿದ್ಧರಾಮ ಹಿರೇಮಠ ಅವರನ್ನು ಸಾವು ಕಾಡಿದೆ, ಹಾಗಾಗಿಯೇ ಅದರ ಮುಂದೆ ಕವಿ ವಿನಂತಿಸಿಕೊಳ್ಳುತ್ತಾನೆ. ‘ಇನ್ನೂ ಏನೇನೆಲ್ಲಾ ಆಗಬೇಕಿದೆ ಈ ಬದುಕಿನಲ್ಲಿ? ನೀನು ಈಗಲೇ ಧುತ್ತೆಂದು ಇದಿರಾದರೆ ಹೇಗೆ? ಸ್ವಲ್ಪ ದೂರವಿರು ಸಾವೇ....’ ಎಂಬ ಪ್ರಾರ್ಥನೆ ಇದೆಯಲ್ಲ ಅದು ಕಾಡುತ್ತದೆ. ಬದುಕಿನಲ್ಲಿ ಎಷ್ಟೆಲ್ಲಾ ಅವುಡುಗಚ್ಚಿ ಎದುರಿಸಿದರೂ, ಇನ್ನೂ ಎಲ್ಲದಕ್ಕೂ ಸಿದ್ಧನಿದ್ದೇನೆ ಎಂಬ ಉತ್ಸಾಹ, ಆಶಾಭಾವನೆ ಚಿಮ್ಮುವಂತೆ ಮಾಡಿ, ಸಾವನ್ನೂ ತಡೆಹಿಡಿದು ನಿಲ್ಲಿಸುವ ಭಾವ ಗಜಲ್‌ನಲ್ಲಿ ನನಗೆ ತುಂಬ ಹಿಡಿಸಿತು.
‘ಒಲವೆಂಬ ಹೊತ್ತಿಗೆಯನೋದಬಯಸುತ ನೀನು ಬೆಲೆ ಎಷ್ಟು ಎಂದು ಕೇಳುತಿಹೆ ಹುಚ್ಚ, ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ ನೀ ತೆತ್ತಲಾರೆ ಬರೀ ಅಂಚೆ ವೆಚ್ಚ’ ಎನ್ನುತ್ತಾರೆ ಬೇಂದ್ರೆ. ಹಾಗೆಂದ ಮೇಲೆ ಒಲವಿನ ಅರ್ಥ ಸಂಪೂರ್ಣ ತಿಳಿಯುವುದೇ? ಇಲ್ಲ. ಇಲ್ಲಿ ಕವಿ ಪ್ರೀತಿಯ ಅರ್ಥವೇ ಇನ್ನೂ ತಿಳಿಯುತ್ತಿಲ್ಲ, ತಿನ್ನುವ ನೋವುಗಳ ಪಟ್ಟಿ ಕೊನೆಯಾಗಿಲ್ಲ ದಯವಿಟ್ಟು ದೂರವಿರು ಸಾವೇ. ನನ್ನ ಪಾಲಿನದೆಲ್ಲವನ್ನು ಅನುಭವಿಸಿಯೇ ತೀರುತ್ತೇನೆ ಎನ್ನುತ್ತಾನೆ. ಪ್ರೀತಿಯ ಇನ್ನೊಂದು ಮುಖವೇ ಮೋಸ. ಒಲಿದವಳು ಎದೆಗಿರಿದು ನಡೆದಾಗ ಹೃದಯ ಅನುಭವಿಸುವ ಸಂಕಟ ಇದೆಯಲ್ಲ ವರ್ಣನೆಗೆ, ವಿವರಣೆಗೆ ನಿಲುಕದ್ದು. ಅವಳ ವಿರಹ ವೇದನೆಯಲ್ಲಿ ಹೃದಯ ಪೂರ್ಣ ಬೆಂದು ಹೋಗಲಿ ಎನ್ನುತ್ತಾನೆ ಕವಿ. ಬದುಕಿನ ಅನುಭವಗಳು ಎಂದಿಗೂ ಕೊನೆಯಾಗುವುದೇ ಇಲ್ಲ. ಅವುಗಳ ಭಾರ ಹೊತ್ತು ಬಸವಳಿದರೂ ಚೈತನ್ಯ ಕಳೆದುಕೊಳ್ಳದ ಕವಿ, ಮತ್ತಷ್ಟು ಅನುಭವಗಳಿಗೆ ಎದೆತೆರೆದು ನಿಲ್ಲುತ್ತಾನೆ. ಪ್ರೀತಿ ಪ್ರೇಮಗಳ ಹುಚ್ಚು ಬಲೆಯಲ್ಲಿ ಸಿಲುಕಿ ನೋವುಂಡರೂ ಅದರ ಆಸರೆಯ ಭರವಸೆಯನ್ನು ಕಳೆದುಕೊಳ್ಳದ ಕವಿ ಸಾವಿಗೆ ದೂರವಿರುವಂತೆ ಗೋಗರೆಯುತ್ತಾನೆ. ತನ್ನ ತಾನರಿತವನೆ ಬುದ್ಧ ಎಂಬಂತೆ ತನ್ನೊಳಗಿನ ತನ್ನನ್ನೇ ಅರಿಯುವ ಪ್ರಯತ್ನದಲ್ಲಿರುವ ‘ಸಿದ್ಧ’ನ ಹುಡುಕಾಟ ಜಾರಿಯಲ್ಲಿದೆ. ಅದು ಈಡೇರಿದ ಮೇಲೆಯೇ ಕಾಲನ ಕರೆ ಬರಲಿ ಎಂಬ ವಿನಂತಿ ಕೂಡ ಇದೆ. ತುಂಬ ಸರಳವಾಗಿ ಬದುಕಿನ ದ್ವಂದ್ವ, ತಾಕಲಾಟಗಳನ್ನು ಗಜಲ್ ಉದ್ದಕ್ಕೂ ಬಿಚ್ಚಿಡುವ ಕವಿ ಸಿದ್ಧರಾಮ ಹಿರೇಮಠ, ನಾಳಿನ ಭರವಸೆ, ಹೊಸ ಹುರುಪನ್ನು ತುಂಬುತ್ತ ಸಹನೆ, ಹೊಣೆಗಾರಿಕೆಯ ಕರ್ತವ್ಯಗಳನ್ನು ನೆನಪಿಸುತ್ತಾರೆ.
ಬೆಂಕಿಯನ್ನೇ ಬೆಳಕು ಮಾಡಿಕೊಳ್ಳುವ ಆಶಯ ಹೊತ್ತ ಸಿದ್ಧರಾಮ ಹಿರೇಮಠರ ಗಜಲ್ ಕಾಡುತ್ತದೆ. ಅವರಿಗೊಂದು ಸಲಾಮ್ ಹೇಳುತ್ತ, ಮತ್ತಷ್ಟು ಜೀವಪರ ಆಶಯದ ಗಜಲ್‌ಗಳನ್ನು ಅವರಿಂದ ನೀರೀಕ್ಷಿಸುವೆ.
- * * * -