ಬೆಂಗಳೂರು,ನ 30-ಸಿದ್ದರಾಮಯ್ಯ ನೂರು ಕಾಲ ಬದುಕಲಿ, ಆದರೆ ಅವರು ಹೋದ ಪಕ್ಷ ಛಿದ್ರ ಛಿದ್ರ ಆಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ಕಚ್ಚಾಟ ಮಾಡಿದ್ದನ್ನು ರಾಜ್ಯ ಜನರು ನೋಡಿದ್ದಾರೆ. ಈ ಪಕ್ಷಗಳಿಗೆ ಜನರು ಉಪ ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲ.ಸುಭದ್ರ ಸರ್ಕಾರ ಹಾಗೂ ಅಭಿವೃದ್ಧಿ ಪರ ಸರ್ಕಾರಕ್ಕೆ ಜನ ಬೆಂಬಲ ನೀಡುತ್ತಾರೆ.ಕಿತ್ತಾಟ,ಅಭಿವೃದ್ಧಿ ಶೂನ್ಯ ಜೆಡಿಎಸ್ ಕಾಂಗ್ರೆಸ್ ಪಕ್ಷದ ಗುಣಗಳು. ಅನರ್ಹ ಶಾಸಕರಿಂದ ಮೈತ್ರಿ ಸರ್ಕಾರ ಸರ್ಕಾರ ಪತನವಾಯಿತು ಎಂದು ಹೊಸ ರಾಗವನ್ನು ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹಾಡುತ್ತಿದ್ದಾರೆ.ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಎಂಬುದು ಅವರು ಕರೆ ನೀಡಿದ್ದಾರೆ.ಈರ್ವರು ನಾಯಕರೂ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಹೇಳುತ್ತಿಲ್ಲ ಎಂದು ಅವರು ಲೇವಡಿ ಮಾಡಿದರು.
ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇದೆ. ಏಕಾಂಗಿಯಾಗಿ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಯಾವ ನಾಯಕರು ಅವರ ಜತೆ ಇಲ್ಲ ನಿರೀಕ್ಷೆ ಮೀರಿ ಜನ ಬೆಂಬಲ ನೀಡುತ್ತಿದ್ದಾರೆ.ಸಿದ್ದರಾಮಯ್ಯ ಇನ್ನು ಎಂದೂ ಮುಖ್ಯಮಂತ್ರಿ ಆಗುವುದಿಲ್ಲ.ಅವರು ಐದು ವರ್ಷ ಮುಖ್ಯಮಂತ್ರಿ ಆಗಿದ್ದೇ ದೊಡ್ಡ ಸಾಧನೆ. ಅವರ ಪಕ್ಷವನ್ನು ಅವರೇ ಸಾಯಿಸುತ್ತಿದ್ದಾರೆ. ಆದರೆ ಅವರು ಮಾತ್ರ ನೂರು ಕಾಲ ಬದುಕಬೇಕು. ಸಿದ್ದರಾಮಯ್ಯ ಗೆ ಹುಚ್ಚು ಹಿಡಿದಂತಿದೆ. ಮುಖ್ಯಮಂತ್ರಿ ಆಗುತ್ತೇನೆ ಎಂದು ಹುಚ್ಚು ಹಿಡಿದಿದೆ ಅವರು ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಪ್ಪಿನಲ್ಲಿ ಇದ್ದು, ದೇಶದ ಬಗ್ಗೆ ಜನರ ಧ್ಯಾನ ಮಾಡಿ ಬಿಜೆಪಿ ಸರ್ಕಾರವನ್ನು ನೋಡಿ ಕಲಿಯಲಿ. ಅವರೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಅವರ ಜತೆ ಯಾರೂ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ನಿರ್ಧರಿಸಲ್ವಾ? ಅವರು ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಇರಲು ಯೋಗ್ಯರೋ, ಅಯೋಗ್ಯರೂ ಎಂದು ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರನ್ನು ನಂಬಿದಂಥ ವ್ಯಕ್ತಿಯನ್ನು ಉದ್ಧಾರ ಮಾಡಿದ್ದಾರಾ?. ಎಚ್.ವಿಶ್ವನಾಥ್ ರನ್ನು ಮುಳುಗಿಸಿದ್ದರು. ವಿಜಯ ಶಂಕರ್ ರನ್ನು ಕಾಂಗ್ರೆಸ್ ಗೆ ಕರೆದೊಯ್ದು ಸೋಲಿಸಿದರು. ಭೈರತಿ ಬಸವರಾಜು, ಎಂಟಿಬಿ ನಾಗರಾಜ್ ಬಗ್ಗೆ ಕೆಟ್ಟ ಮಾತುಗಳನ್ನು ಬಳಸುತ್ತಿದ್ದಾರೆ. ಅವರಿಬ್ಬರೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಹಣ ಕೊಟ್ಟಿದ್ದರು ಈಗ ಅವರನ್ನೇ ಬಯ್ಯುತ್ತಿದ್ದಾರೆ. ಅವರ ಹಿತೈಷಿಗಳನ್ನು ತುಳಿಯುವಂಥ ವ್ಯಕ್ತಿ. ಯಾವೊಬ್ಬ ಕುರುಬರನ್ನು ಉದ್ಧಾರ ಮಾಡಿಲ್ಲ ಎಂದು ಅವರು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಸೇಬಿನ ಹಾರದ ಸರದಾರ ಆಗಿದ್ದಾರೆ. ಕೆ.ಎಚ್.ಮುನಿಯಪ್ಪ ಸಿದ್ದರಾಮಯ್ಯ ರನ್ನು ಹಿಗ್ಗಾಮುಗ್ಗಾ ಬಯ್ಯುತ್ತಿದ್ದಾರೆ. ರಮೇಶ್ ಕುಮಾರ್ ಸತ್ಯ ಹರಿಶ್ಚಂದ್ರ, ಅಂಬೇಡ್ಕರ್ ಬಿಟ್ಟರೆ ಅವರಂತೆಯೇ ಆಡುತ್ತಿದ್ದಾರೆ. ಅವರೊಬ್ಬ ಪಕ್ಷ ದ್ರೋಹಿ. ಲೋಕಸಭೆ ಚುನಾವಣೆಯಲ್ಲಿ ಅವರು ಕೆ.ಎಚ್.ಮುನಿಯಪ್ಪರನ್ನು ಸೋಲಿಸಿಲ್ಲ ಎಂದು ಅವರು ಎದೆ ಮುಟ್ಟಿ ಹೇಳಲಿ.ಸಿದ್ದರಾಮಯ್ಯ ಕೂಡ ಪಕ್ಷ ದ್ರೋಹಿ ಆಗಿದ್ದಾರೆ. ದೇವೇಗೌಡರನ್ನು ಸೋಲಿಸಲು ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ. ಸಂಖ್ಯಾ ಬಲ ಇಲ್ಲದಿದ್ದರೂ ಖರ್ಗೆಯನ್ನು ರಾಜ್ಯಸಭೆಗೆ ಅಭ್ಯರ್ಥಿಯಾಗಿ ನಿಲ್ಲಿಸಲು ಹೊರಟಿದ್ದಾರೆ. ಆ ಮೂಲಕ ಅವರನ್ನೂ ಮುಗಿಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎಚ್ ಡಿಕೆ ಹೋದಲ್ಲೆಲ್ಲಾ ಕಣ್ಣೀರು ಹಾಕುತ್ತಿದ್ದಾರೆ. ತೆನೆ ಹೊತ್ತ ಮಹಿಳೆ ಬದಲು ಜೆಡಿಎಸ್ ಅವರು ಕಣ್ಣೀರು ಹಾಕುವ ಮಹಿಳೆಯನ್ನು ಪಕ್ಷದ ಚಿಹ್ನೆಯನ್ನಾಗಿ ಬದಲಿಸಿಕೊಳ್ಳಲಿ ಎಂದು ಅವರು ಲೇವಡಿ ಮಾಡಿದರು.