ಹಿಂದೂ ಕಾರ್ಯಕರ್ತರ ಹತ್ಯೆಗೆ ಸಿದ್ಧರಾಮಯ್ಯನವರೇ ಕಾರಣ: ಕಟೀಲ

ಲೋಕದರ್ಶನ ವರದಿ

ಶೇಡಬಾಳ 27:  ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರ್ಕಾರವನ್ನು 17 ಜನ ಶಾಸಕರು ಉರುಳಿಸಿದರು ಎಂದು 17 ಜನರನ್ನು ಅನರ್ಹಗೊಳಿಸಲಾಯಿತು. ಆದರೆ ನಿಜವಾಗಿಯೂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದವರು ಈಗೀನ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಎಂದು ಕರ್ನಾಟಕ ರಾಜ್ಯದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರು ಹಾಗೂ ಸಂಸದರಾದ ನಳಿನಕುಮಾರ ಕಟೀಲ ಆರೋಪಿಸಿದರು. ಅವರು ಬುಧವಾರ ಶೇಡಬಾಳ ಪಟ್ಟಣದಲ್ಲಿ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಶ್ರೀಮಂತ ಬಾಳಾಸಾಬ ಪಾಟೀಲರ ಚುನಾವಣಾ ಪ್ರಚಾರ ಸಭೆಯನ್ನುದ್ದೆಶಿಸಿ ಮಾತನಾಡುತ್ತಿದ್ದರು.  ಅವರು ಮುಂದೆ ಮಾತನಾಡಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ 5 ತಿಂಗಳು ಆಗುವಷ್ಟರಲ್ಲಿ ಧರ್ಮಸ್ಥಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಿದ್ಧರಾಮಯ್ಯನವರು ಲೋಕಸಭೆಯ ಚುನಾವಣೆಯ ನಂತರ ಕುಮಾರಸ್ವಾಮಿಯವರ ಸರ್ಕಾರ ಬಿಳುತ್ತದೆ ಎಂದು  ಅವರೇ ಹೇಳಿ ನಂತರ ಸರ್ಕಾರವನ್ನು ಅವರೇ ಬೀಳಿಸಿದರು. ಕಾರಣ ಶ್ರೀಮಂತ ಪಾಟೀಲರು ಅನರ್ಹರಲ್ಲ, 17 ಶಾಸಕರು ಅನರ್ಹರಲ್ಲ. ನಿಜವಾಗಿಯೂ ಸಿದ್ಧರಾಮಯ್ಯನವರೇ ಅನರ್ಹರು ಎಂದು ಕಟೀಲ್ ಆರೋಪಿಸಿದರು. ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಹಿಂದೂ ಕಾರ್ಯಕರ್ತರ ಕಗ್ಗೊಲೆಯಾಗಲು ಸಿದ್ದರಾಮಯ್ಯನವರೇ ಕಾರಣರೆಂದು ಆರೋಪಿಸಿದರು.

ಉಪಚುನಾವಣೆ ಮುಗಿದ ಮೇಲೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ನಿರುದ್ಯೋಗಿಗಳಾಗಲಿದ್ದಾರೆ. ಕಾಂಗ್ರೆಸ್ ಮನೆ ಸಂಪೂರ್ಣ ಖಾಲಿಯಾಗಲಿದ್ದು ಸಿದ್ಧರಾಮಯ್ಯ ಹಾಗೂ ದಿನೇಶ ಗುಂಡುರಾವ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಉಳಿಯಲಿದ್ದಾರೆಂದು ವ್ಯಂಗ್ಯವಾಡಿದರು.

ಹೆಸರೇ ಸೂಚಿಸುವಂತೆ ಶ್ರೀಮಂತ ಪಾಟೀಲರು ಹೃದಯದಿಂದಲೂ ಶ್ರೀಮಂತರಾಗಿದ್ದಾರೆ ಎಂಬುವುದಕ್ಕೆ ಈಗ ನೆರೆದಿರುವ ಜನಸ್ತೋಮವೇ ಸಾಕ್ಷಿವಾಗಿದೆ. ರಾಜ್ಯದ ಇತಿಹಾಸದಲ್ಲಿಯೇ 33 ಸಾವಿರ ಅಧಿಕ ಮತಗಳ ಅಂತರದಿಂದ ವಿಜಯಶಾಲಿಯಾಗಿರುವ ಶಾಸಕನೊರ್ವ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೇ ಚುನಾವಣೆಗೆ ಸ್ಪರ್ಧಿಸುತ್ತಿರುವುದು ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟ ಮೊದಲಾಗಿದ್ದು, ಆ ಕಾರ್ಯವನ್ನು ಕೈಗೊಂಡಿದ್ದು ಏಕೈಕ ವ್ಯಕ್ತಿ ಶ್ರೀಮಂತ ಪಾಟೀಲರಾಗಿದ್ದಾರೆ. ಅವರು ಶಾಸಕ ಸ್ಥಾನ ತ್ಯಜಿಸಲು ಕಾರಣ ಸಮ್ಮಿಶ್ರ ಸರ್ಕಾರದಿಂದ ಕಾಗವಾಡ ಕ್ಷೇತ್ರ ಅಭಿವೃದ್ಧಿ ಅಸಾಧ್ಯ ಎಂಬುವುದು ಮನವರಿಕೆ ಆದಾಗ ದೃಢ ನಿರ್ಧಾರ ಕೈಗೊಂಡು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡರು. ಅವರ ಧ್ಯೇಯ ಒಂದೇ ಕಾಗವಾಡ ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂಬುದು. ಮಂಗಸೂಳಿಯಿಂದ ಶೇಡಬಾಳದವರೆಗೆ 11 ಕಿ.ಮೀ. ಬೈಕ್ ರ್ಯಾಲಿಯಲ್ಲಿ ಸ್ವಪ್ರೇರಣೆಯಿಂದ ಭಾಗವಹಿಸಿದ ಸಾವಿರಾರು ಕಾರ್ಯಕರ್ತರನ್ನು ಕಂಡು ನಾನು ಪುಲಕಿತಗೊಂಡಿದ್ದೇನೆ. ಕಾಗವಾಡ ಕ್ಷೇತ್ರದ ಜನ ತಾವರೆ(ಕಮಲ)ಯನ್ನು ಮೆಚ್ಚಿದ್ದಾರೆ. ತಾವರೆಯನ್ನು ಅಪ್ಪಿದ್ದಾರೆ. ತಾವರೆಯನ್ನು ಅರಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಕರ್ನಾಟಕ ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಭಾರಿಸಲಿದೆ. ಅದರಲ್ಲಿಯೂ ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಬಾಳಾಸಾಬ ಪಾಟೀಲರು ದಾಖಲೆ ಮತಗಳ ಅಂತರದಿಂದ ವಿಜಯಶಾಲಿಗಳಾಗುತ್ತಾರೆಂದು ನಳೀನ್ಕುಮಾರ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಕಾಗವಾಡ ಮತಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮಂತ ಪಾಟೀಲರ ಗೆಲುವಿಗಾಗಿ ಕಾಗವಾಡ ಮತಕ್ಷೇತ್ರಕ್ಕೆ ಸಾರಥಿಯನ್ನಾಗಿ ಶ್ರೀಕೃಷ್ಣ ಕುಡಚಿ ಶಾಸಕ ಪಿ.ರಾಜೀವ ಅವರನ್ನು ಕಳುಹಿಸಿದ್ದೇವೆ. "ಶ್ರೀಕೃಷ್ಣನ ಚಕ್ರ ಕೆಲಸ ಮಾಡುತ್ತೆ, ಕಾಗೆ (ರಾಜು ಕಾಗೆ) ಕಾಡಿಗೆ ಹೋಗುತ್ತೆ" ಎಂದು ಹಾಸ್ಯ ಚಟಾಕಿ ಹಾರಿಸಿದರು. ಮಾಜಿ ಶಾಸಕ ಸಂಜಯ ಪಾಟೀಲ, ಕುಡಚಿ ಶಾಸಕ ಪಿ. ರಾಜೀವ, ವಿಧಾನ ಪರಿಷತ್ ಸದಸ್ಯ ವಿರುಪಾಕ್ಷ ಕವಟಗಿಮಠ, ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಮೊದಲಾದ ಮುಖಂಡರು ಸಭೆಯನ್ನುದ್ದೆಶಿಸಿ ಮಾತನಾಡಿದರು.

ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ಶಶಿಕಾಂತ ನಾಯಿಕ, ಮಂಡಲ ಅಧ್ಯಕ್ಷ ನಿಂಗಪ್ಪ ಖೋಕಲೆ, ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ, ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಶೀತಲ ಪಾಟೀಲ, ಮಾಜಿ ಶಾಸಕಿ ಸೀಮಾ ಕಲೂತಿ, ಭರತೇಶ ನರಸಗೌಡರ, ಅಪ್ಪಾಸಾಬ ಚೌಗಲಾ, ಅಭಿಜಿತ ಪಾಟೀಲ, ತಾಪಂ ಸದಸ್ಯ ಸಂಭಾಜಿ ಪಾಟೀಲ, ತಾಪಂ ಸದಸ್ಯ ಸುಧಾಕರ ಭಗತ, ಭರತೇಶ ನರಸಗೌಡರ, ಬಾಳಾಸಾಹೇಬ ಪಾಟೀಲ, ಸುಜಯ ಮಾಂಗುರೆ, ಸುಮತಿನಾಥ ಪಾಟೀಲ, ಬಾಬಾಸಾಬ ಗಣೆ, ಎಂ.ಎ.ಗಣೆ, ಶೀತಲ ಲಕ್ಕಪ್ಪಗೋಳ, ಸುಭಾಷ ಢಾಲೆ, ಶ್ರೀನಿವಾಸ ಕಾಂಬಳೆ, ರವಿ ಕಾಂಬಳೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕಾರ್ಯಕರ್ತರು, ಮುಖಂಡರು ಅಪಾರ ಸಂಖ್ಯೆಯಲ್ಲಿ ಇದ್ದರು.