ಮೈತ್ರಿ ಸರ್ಕಾರ ಉರುಳಲು ಎರಡೂ ಪಕ್ಷಗಳು ಕಾರಣ, ಸಿದ್ದರಾಮಯ್ಯ ಅಲ್ಲ-ಎಚ್ ಎಂ ರೇವಣ್ಣ

ಬೆಂಗಳೂರು ಆಗಸ್ಟ್ 25    ಮೈತ್ರಿಕೂಟದ ಸರ್ಕಾರ ಪತನಗೊಳ್ಳಲು ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ಕಾರಣ ಸಿದ್ದರಾಮಯ್ಯನವರಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ  ಮಾಜಿ ಸಚಿವ ಎಚ್ ಎಂ ರೇವಣ್ಣ ಹೇಳಿದ್ದಾರೆ.     ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಂತರ ಜಾತ್ಯತೀತ ಪಕ್ಷಗಳು ಒಂದಾಗಬೇಕು ಅಂತ ಬಯಸಿದ್ದೆವು. ಬಳಿಕ ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳು, ವ್ಯತ್ಯಾಸಗಳು ಆಗಿವೆ. ಆದರೆ, ಅವೆಲ್ಲವನ್ನೂ ಸರಿಪಡಿಸಿಕೊಳ್ಳಬೇಕಿತ್ತು. ಈಗ ಪರಿಸ್ಥಿತಿ ಕೈಮೀರಿ ಹೋಗಿದೆ. ಮೈತ್ರಿ ಸರ್ಕಾರ ಬೀಳಲು ಎರಡೂ ಪಕ್ಷಗಳೂ ಕಾರಣ.ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಖಂಡಿತಾ ಕಾರಣ ಅಲ್ಲ. ತಮ್ಮ ಕಡೆಯ ಒಬ್ಬರನ್ನು ಕೆಪಿಎಸ್ಸಿ ಸದಸ್ಯರಾಗಿ ಮಾಡಿ ಅಂತ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದರು. ಆದರೆ, ಕುಮಾರಸ್ವಾಮಿ ಮಾಡಲಿಲ್ಲ ಎಂದು ಹೇಳಿದ್ದಾರೆ.     ಬಜೆಟ್ ಅನುದಾನ ಸಹ ಕಾಂಗ್ರೆಸ್ ನವರಿಗಿಂತ ಜೆಡಿಎಸ್ ಶಾಸಕರಿಗೆ ಹೆಚ್ವು ಸಿಕ್ಕಿದೆ. ಸಿದ್ದರಾಮಯ್ಯ ಶಾಸಕರನ್ನು ಮುಂಬೈಗೆ ಕಳಿಸಿಲ್ಲ. ಜೆಡಿಎಸ್ ಶಾಸಕರನ್ನು ಸಿದ್ದರಾಮಯ್ಯ ಕಳಿಸಿರುವುದಕ್ಕೆ ಏನು ಪುರಾವೆ ಇದೆ? ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯರನ್ನು ಸಿದ್ದರಾಮಯ್ಯ ಕಳುಹಿಸಿಲ್ಲ. ಕುಮಾರಸ್ವಾಮಿ ಈ ಬಗ್ಗೆ ಏನೇನೋ ಹೇಳ್ತಾರೆ. ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಅಲ್ಲ. ಆಡಳಿತ ನಡೆಸೋರು ಸರಿಯಾಗಿ ನಡೆಸಬೇಕಿತ್ತು. ಶಾಸಕರು ಮುಂಬೈಗೆ ಹೋಗಿದ್ದರ ಬಗ್ಗೆ ಕುಮಾರಸ್ವಾಮಿ ಗೆ ಮಾಹಿತಿ ಇತ್ತು. ಆದರೆ, ಅದನ್ನೇಕೆ ಕುಮಾರಸ್ವಾಮಿ ತಡೆಯಲಿಲ್ಲ? ಎಸ್ ಟಿ ಸೋಮಶೇಖರ್, ಮುನಿರತ್ನ ಸಿದ್ದರಾಮಯ್ಯ ಆಪ್ತರಲ್ಲ. ಸೋಮಶೇಖರ್ ಮೊದಲಿಂದಲೂ ಕಾಂಗ್ರೆಸ್ ನಲ್ಲಿದ್ದವರು. ಇನ್ನು, ಮುನಿರತ್ನ ಬಿ ಕೆ ಹರಿಪ್ರಸಾದ್ ಬೆಂಬಲಿಗರು ಎಂದು ಎಚ್ಎಂ ರೇವಣ್ಣ ಅವರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ್ದಾರೆ.