ಬೆಂಗಳೂರು, ಜು.8: ಕಾಂಗ್ರೆಸ್ ಶಾಸಕ ಹಾಗೂ ಶಾಸಕರ ಅಂಗರಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಯಂ ಕ್ವಾರೆಂಟೇನ್ ಗೊಳಪಟ್ಟಿದ್ದಾರೆ ಎನ್ನಲಾಗಿದೆ.
ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಂಗನಾಥ್ ಹಾಗೂ ಕರ್ನಾಟಕ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಅಂಗರಕ್ಷಕ ಸೇರಿ ನಾಲ್ವರು ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿದ್ದು, ಚಿಕಿತ್ಸೆಗೊಳಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ನಾಯಕರು ಹಾಗೂ ಕಚೇರಿ ಕೆಲಸಗಾರರಿಗೆ ಕೊರೊನಾ ತಪಾಸಣೆ ನಡೆಸಲಾಗಿತ್ತು.
ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೆಪಿಸಿಸಿ ಕಚೇರಿಗೆ ಹಲವು ಭಾರಿ ರಂಗನಾಥ್ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಎಲ್ಲ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಮುಂಜಾಗೃತಾ ಕ್ರಮವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ನಿವಾಸದಿಂದ ಮೈಸೂರಿಗೆ ತೆರಳಿದ್ದು ಪುತ್ರ ಹಾಗೂ ಶಾಸಕ ಡಾ.ಯತೀಂದ್ರ ಜೊತೆ ಮೈಸೂರಿನ ತೋಟದ ಮನೆಯಲ್ಲಿ ಸ್ವಯಂ ಕ್ವಾರೆಂಟೇನ್ ಗೊಳಾಗಿದ್ದಾರೆ ಎನ್ನಲಾಗಿದೆಯಾದರೂ ಈ ಬಗ್ಗೆ ಸಿದ್ದರಾಮಯ್ಯ ಆಗಲೀ ಅವರ ಕಚೇರಿಯಿಂದಾಗಲೀ ಇದೂವರೆಗೂ ಯಾವುದೇ ಅಧಿಕೃತ ಹೇಳಿಕೆಗಳು ಸ್ಪಷ್ಟವಾಗಿಲ್ಲ.