ಹಾವೇರಿ, ನ.28- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೆ.ಜೆ. ಜಾರ್ಜ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸಿದ್ದರಾಮಯ್ಯರ ಹುಂಡಿ ಎಲ್ಲೆಲ್ಲಿದೆ ಎಂಬುದು ಗೊತ್ತಾಗಲಿದೆ. ಆಗ ಯಾರು ನಾಲಾಯಕ್ ಎಂಬುದು ಗೊತ್ತಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಹಿರೆಕೇರೂರಿನ ತಮ್ಮ ಸ್ವಗ್ರಹದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ನಾಲಾಯಕ್ ಅಂದರೆ ನೀವೂ ನಾಲಾಯಕ್ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಕುರಿ ಕೋಳಿ ಎಮ್ಮೆ ಥರ ಶಾಸಕರು ಮಾರಾಟ ಆದರು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋದಾಗ ಎಷ್ಟು ಕೋಟಿಗೆ ತಮ್ಮನ್ನು ಮಾರಿಕೊಂಡಿದ್ದರು. ಅವರು ಮಾರಿಕೊಂಡಿರುವುದಕ್ಕಾಗಿ ಅವರಿಗೆ ಈ ಮಾರಾಟ ಸಂಸ್ಕೃತಿಯ ಬಗ್ಗೆ ಅರಿವಿದೆ ಎಂದು ಪಾಟೀಲ್ ತಿರುಗೇಟು ನೀಡಿದ್ದಾರೆ.
ಇಂಥ ಕೀಳುಮಟ್ಟದ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ದೆಹಲಿಯಿಂದ ಹಣ ಬಂದಿತ್ತಾ ? ಕಾಂಗ್ರೆಸ್ ಪಕ್ಷ ಸೇರುವ ಉದ್ದೇಶದಿಂದಲೇ ಜೆಡಿಎಸ್ ಪಕ್ಷವನ್ನು ಅವರು ತೊರೆದಿದ್ದರು. ಆಗ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಬೆನ್ನಿಗೆ ಸಿದ್ದರಾಮಯ್ಯ ಚೂರಿ ಹಾಕಿದರು ಎಂದು ತಿರುಗೇಟು ನೀಡಿದರು.
ತಾನು ಗೌರವಯುತವಾಗಿ ಪೊಲೀಸ್ ಕೆಲಸ ಮಾಡಿದ್ದೇನೆ. ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರ ಮೂಲಕ ಸಿದ್ದರಾಮಯ್ಯ ಏನೆಲ್ಲಾ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಆಡಳಿತದಲ್ಲೇ ಹೆಚ್ಚಿನ ಪೊಲೀಸರ ಆತ್ಮಹತ್ಯೆ ಪ್ರಕರಣ ನಡೆದಿದೆ. ಈಗ ಪೊಲೀಸ್ ಬಗ್ಗೆ ಮಾತನಾಡುತ್ತಿದ್ದಾರೆ. ಪೊಲೀಸ್ ಬುದ್ದಿ ಎಂದು ಹೇಳಿದ್ದಾರೆ. ಈ ಕೂಡಲೇ ಅವರು ಪೊಲೀಸ್ ಇಲಾಖೆಯ ಕ್ಷಮೆ ಕೇಳಬೇಕು. ಪೊಲೀಸರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಪೊಲೀಸ್ ಇಲಾಖೆ ನಿಮ್ಮ ವಿರುದ್ಧ ತಿರುಗಿ ಬೀಳಲಿದೆ ಎಂದು ಪಾಟೀಲ್ ಎಚ್ಚರಿಸಿದರು.
ಸಿದ್ದರಾಮಯ್ಯ ಆಟ, ಕಾಂಗ್ರೆಸ್ ಗೆ ಗೂಟ, ಸಿದ್ದರಾಮಯ್ಯ ಅವರನ್ನು ನಂಬಿಕೊಂಡವ ಕೆಟ್ಟ ಎಂದು ವ್ಯಂಗ್ಯವಾಡಿದ ಬಿ.ಸಿ.ಪಾಟೀಲ್, ಕಾಂಗ್ರೆಸ್ ನಿರ್ನಾಮ ಆಗುತ್ತದೆ. ಕಾಂಗ್ರೆಸ್ ಮುಕ್ತ ಹಿರೆಕೇರೂರು ಆಗುತ್ತದೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು. ನಾನೇ ಸಿದ್ದರಾಮಯ್ಯನವರನ್ನು ನಾನು ನಂಬಿದ್ದೆ, ಆದರೆ ಅವರೇ ನನ್ನ ಎದೆಗೆ ಚೂರಿ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು.