ಬೆಂಗಳೂರು, ಜೂ 10,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ನಡೆಸಲು ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶದಿಂದ ಅನುಮತಿ ನೀಡಿಲ್ಲ. ಇದು ಬಿಜೆಪಿಯ ಷಡ್ಯಂತ್ರ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 14 ರ ಕಾರ್ಯಕ್ರಮಕ್ಕೆ ಅನುಮತಿ ಕೊಡದೇ ಇರುವುದು ಅರ್ಕಾರದ ಧಮನಕಾರಿ ಧೋರಣೆಯಾಗಿದೆ. ಕಾಂಗ್ರೆಸ್ ಮೇಲೆ ಬಿಜೆಪಿ ಗದಾ ಪ್ರಹಾರ ಮಾಡಲು ಹೊರಟಿದೆ ಎಂದರು.
ಪದಗ್ರಹಣ ಕಾರ್ಯಕ್ರಮದಲ್ಲಿ 150 ಅಲ್ಲ. 60 ಜನ ಸಹ ಸೇರುತ್ತಿರಲಿಲ್ಲ. ಸರ್ಕಾರದ ಈ ನೀತಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಹೇಳಿದ್ದಾರೆ. ಲಾಕ್ ಡೌನ್ ಮಾರ್ಗಸೂಚಿ ನೆಪ ಹೇಳುವ ಕೇಂದ್ರ ಸರ್ಕಾರ ಬಿಹಾರ, ಉತ್ತರ ಪ್ರದೇಶದಲ್ಲಿ ಜಾಥಾ ನಡೆಸಲು ಬಿಜೆಪಿಯವರಿಗೆ ಅನುಮತಿ ಕೊಟ್ಟಿದ್ದು ಏಕೆ? ಅಮಿತ್ ಶಾ ವರ್ಚುವಲ್ ರಾಲಿಗೆ ಅನುಮತಿ ನೀಡಿ ನಮಗೆ ಅವಕಾಶ ನಿರಾಕರಿಸುವ ಉದ್ದೇಶವಾದರೂ ಏನು?. ಅವರಿಗೊಂದು ನೀತಿ, ನಮಗೊಂದು ನೀತಿಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.