ಕೊಪ್ಪಳ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದ ರಥಕ್ಕೆ ತ್ವರಿತವಾಗಿ ಗಾಲಿಗಳನ್ನು ಹೊಸದಾಗಿ ನಿರ್ಮಾಣ ಮಾಡುವುದು ಮತ್ತು ರಥದ ಗಾಲಿಗಳಿಗೆ ಅಚ್ಚುಗಳನ್ನು ನಿರ್ಮಿಸುವುದು ತುಂಬಾ ಅವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು (ನ.06) ಜರುಗಿದ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಶ್ರೀ ಕನಕಾಚಲಪತಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನಕಾಚಲಪತಿ ದೇವಸ್ಥಾನದ ರಥಕ್ಕೆ ತ್ವರಿತವಾಗಿ ಅಚ್ಚುಗಳು ಮತ್ತು ಗಾಲಿಗಳನ್ನು ಹೊಸದಾಗಿ ನಿರ್ಮಾಣ ಮಾಡುವುದು ಮತ್ತು ಜಾತ್ರೆಗೆ ಮುಂಚೆ ರಥದ ಗಾಲಿಗಳು ಹಾಗೂ ಅಚ್ಚುಗಳನ್ನು ನಿರ್ಮಿಸುವುದು ತುಂಬಾ ಅವಶ್ಯಕವಾಗಿದೆ. ಈ ಕುರಿತು ಮೂರು ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಉಪ ಸಮಿತಿ ಒಂದನ್ನು ರಚಿಸಬೇಕು. ರಥದ ಗಾಲಿಗಳು ಹಾಗೂ ಅಚ್ಚುಗಳನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲು ಹಾಗೂ ಜಾತ್ರೆಯ ಸಮಯದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸಬೇಕು. ಅದರಂತೆ ಜಾತ್ರೆಯ ಮಹಾರಥೋತ್ಸವಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು ಹೊಂದಿಸಿಕೊಂಡು ರಥವನ್ನು ಸಿದ್ಧಪಡಿಸಿ, ರಥೋತ್ಸವಕ್ಕೆ ಸಜ್ಜುಗೊಳಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಕನಕಗಿರಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿಶ್ವನಾಥ ನಾಯಕ, ಯೋಜನಾ ನಿರ್ದೇಶಕರು, ಕೊಪ್ಪಳ ಕೆ.ಆರ್.ಐ.ಡಿ.ಎಲ್. ಕಾರ್ಯಪಾಲಕ ಅಭಿಯಂತರರು, ಕೊಪ್ಪಳ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರರು ಉಪಸ್ಥಿತರಿದ್ದರು.