ಶ್ರೀ ಭಗವದ್ಗೀತಾ ಅಭಿಯಾನ ಕಾರ್ಯಕ್ರಮ
ವಿಜಯಪುರ 13: ಮಕ್ಕಳಲ್ಲಿ ಮನೋ ನಿಗ್ರಹ ಶಕ್ತಿ ವರ್ಧನೆಯಾಗುವುದರ ಮೂಲಕ ಅಧ್ಯಯನದೆಡೆಗೆ ಮನಸ್ಸನ್ನು ಕೇಂದ್ರೀಕರಿಸುವಲ್ಲಿ ಭಗವದ್ಗೀತೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಆಧ್ಯಾತ್ಮದ ಜೊತೆಯಲ್ಲಿ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಸಹ ಭಗವದ್ಗೀತೆಯು ಪರಿಣಾಮಕಾರಿಯಾದ ವಿಷಯವಾಗಿ ಗುರುತಿಸಿಕೊಳ್ಳುತ್ತದೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಪರಮಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.
ಭಗವದ್ಗೀತಾ ಅಭಿಯಾನದ ಪ್ರಯುಕ್ತ ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನುದ್ಧೇಶಿಸಿ ಆಶೀರ್ವಚನ ನೀಡಿದ ಅವರು; ಒತ್ತಡ ಬದುಕಿನಲ್ಲಿ ಜೀವಿಸುತ್ತಿರುವ ಮಾನವನಿಗೆ ಮುಕ್ತಿ ಮಾರ್ಗ ತೋರಿಸುವಲ್ಲಿ ಭಗವದ್ಗೀತೆ ನೆರವಾಗುತ್ತದೆ. ಅಧ್ಯಯನ ಮಾಡುವ ವಿದ್ಯಾರ್ಥಿಗಳ ಮನಸ್ಸು ಗೊಂದಲದ ಗೂಡಾಗಿದ್ದರೆ ಅಲ್ಲಿ ಸ್ಪಷ್ಟವಾದ ಫಲವನ್ನು ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಹೇಗೆ ಕುರುಕ್ಷೇತ್ರ ಯುದ್ಧದಲ್ಲಿ ಗೊಂದಲಗೊಂಡ ಅರ್ಜುನನಿಗೆ ಭಗವಾನ್ ಶ್ರೀಕೃಷ್ಣನ ವಾಣಿಯು ನಿರ್ದಿಷ್ಟ ಗುರಿಯನ್ನು ತೋರಿ ಗೊಂದಲದಿಂದ ಹೊರ ಬರುವಂತೆ ಮಾಡಿತೋ ಹಾಗೆಯೇ ಇಂದು ವಿದ್ಯಾರ್ಥಿ ಜೀವನದಲ್ಲಿ ಭಗವದ್ಗೀತೆಯ ಪಾರಾಯಣದಿಂದ, ಅದರಲ್ಲಿ ನೀಡಿರುವ ಅತ್ಯಮೂಲ್ಯವಾದ ವಿಚಾರಗಳಿಂದ ವಿದ್ಯಾರ್ಥಿಗಳು ಸಹ ನಿರ್ದಿಷ್ಟ ಗುರಿ ಎಡೆಗೆ ಸಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ನಡೆದಾಡುವ ದೇವರಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಅಕ್ಷರ ಕಲಿತ ವ್ಯಕ್ತಿ ಭ್ರಷ್ಟನಾದರೂ ಆಗಬಹುದು. ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಅವರು; ಇಂದು ಸಮಾಜದಲ್ಲಿ ಪರಿವರ್ತನೆಯಾಗಬೇಕಾದರೆ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಪಠ್ಯ ಶಿಕ್ಷಣವನ್ನು ಮಾತ್ರ ಬೋಧಿಸದೇ ಸಂಸ್ಕಾರ ಶಿಕ್ಷಣವನ್ನು ನೀಡಬೇಕು. ಆಗ ಮಾತ್ರ ಸಮಾಜದಲ್ಲಿ ಸುಧಾರಣೆ ತರುವುದಕ್ಕೆ ಸಾಧ್ಯವಾಗುತ್ತದೆ. ಆ ಕಾರಣಕ್ಕಾಗಿಯೇ ಸಿದ್ಧೇಶ್ವರ ಶ್ರೀಗಳು ಸಂಸ್ಕಾರದ ಕುರಿತು ಒತ್ತಿ ಹೇಳಿದ್ದಾರೆ. ಹೀಗಿರುವಾಗ ಯಾರು ಭಗವದ್ಗಿತೆಯನ್ನು ಪಠಿಸುತ್ತಾರೋ, ಯಾರು ಅದರಲ್ಲಿನ ಸದ್ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾರೋ ಅಂತವರು ಸಂಸ್ಕಾರದ ಜೊತೆಯಲ್ಲಿ ಶಿವನ ಸಾಕ್ಷಾತ್ಕಾರಕ್ಕೂ ಬಾಜನರಾಗುತ್ತಾರೆ ಎಂದು ಹೇಳಿದರು. ಹೀಗೆ ಯಾವ ಸಂಸ್ಥೆಯು ಶಿಕ್ಷಣದ ಜೊತೆಯಲ್ಲಿ ಸಂಸ್ಕಾರ ಹಾಗೂ ದೇಶಪ್ರೇಮದ ಜೊತೆಗೆ ನೈತಿಕತೆಯ ಕುರಿತು ತಿಳಿಸಿಕೊಡುತ್ತದೆಯೋ ಅಂಥ ಶಿಕ್ಷಣ ಸಂಸ್ಥೆ ಮಹೋನ್ನತ ಸ್ಥಾನಕ್ಕೆ ಸಾಗುತ್ತದೆ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಎಕ್ಸಲಂಟ್ ಸಂಸ್ಥೆಯು ಈ ನಾಡಿಗೆ ಅತ್ಯುತ್ತಮ ಕೊಡುಗೆ ನೀಡುತ್ತಿದ್ದು ಇದರ ಸೇವೆ ಇನ್ನೂ ಹೆಚ್ಚು ಹೆಚ್ಚು ನಾಡಿಗೆ ದೊರಕುವಂತಾಗಲಿ ಎಂದು ಶುಭ ಹಾರೈದರು.
ಇದೇ ಸಂದರ್ಭದಲ್ಲಿ ವಾಗ್ಮಿ ಹಾಗೂ ಅಂಕಣಕಾರ ಮಂಜುನಾಥ ಜುನಗೊಂಡ ಅವರ ಐದು ಕೃತಿಗಳನ್ನು ಸಾಂಪ್ರದಾಯಿಕವಾಗಿ ಲೋಕಾರೆ್ಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಜಪ ಮುಖಂಡ ಚಂದ್ರಶೇಖರ ಕವಟಗಿ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್, ಅಂಕಣಕಾರ ಮಂಜುನಾಥ ಜುನಗೊಂಡ ಸೇರಿದಂತೆ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ವಿದ್ಯಾರ್ಥಿ ಸಾಹಿಲ್ ಬನಸೋಡೆ ಪ್ರಾರ್ಥಿಸಿದರು. ಉಪನ್ಯಾಸಕ ಶರಣಗೌಡ ಪಾಟೀಲ್ ಸ್ವಾಗತಿಸಿದರು. ರಮೇಶ ಬಾಗೆವಾಡಿ ನಿರೂಪಿಸಿದರು.