ಅಥಣಿ 17: ಶ್ರೀ ಮುರುಘೇಂದ್ರ ಶಿವಯೋಗಿ ಅರ್ಬನ್ ಕೋ ಆಪ್ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಆಡಳಿತ ಮಂಡಳಿ ಸದಸ್ಯರನ್ನು ಅಥಣಿಯ ಬುಧವಾರ ಪೇಠ ವ್ಯಾಪಾರಸ್ಥರು ಸತ್ಕರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ನಿರ್ದೇಶಕ, ಮಾಜಿ ಅಧ್ಯಕ್ಷ ಸಂಜಯ ತೆಲಸಂಗ, ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆಯಬಾರದಿತ್ತು ಆದರೆ ಕೆಲವರ ಅನಗತ್ಯ ಹಸ್ತಕ್ಷೇಪದ ಪರಿಣಾಮ ಚುನಾವಣೆ ನಡೆಯಿತಾದರೂ ಸದಸ್ಯರು ನಮ್ಮ ಪ್ಯಾನಲ್ ಅಭ್ಯರ್ಥಿಗಳ ಮೇಲೆಯೇ ವಿಶ್ವಾಸ ಇಟ್ಟು ಮತ ಚಲಾಯಿಸುವ ಮೂಲಕ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದ ಅವರು ಬ್ಯಾಂಕನ್ನು ಸಂಕಷ್ಟದ ಸಮಯದಲ್ಲಿಯೂ ಮುನ್ನಡೆಸಿಕೊಂಡು ಬಂದ ಸಿ.ಎ.ವಸ್ತ್ರದ, ಸಿ.ಜಿ.ತೆಲಸಂಗ, ಧರ್ಮಗೌಡ ಪಾಟೀಲ, ವ್ಹಿ.ಜಿ.ತೆಲಸಂಗ ಸೇರಿದಂತೆ ಅನೇಕ ಹಿರಿಯರನ್ನು ನಮ್ಮ ವಿರೋಧಿಗಳು ಬಹಿರಂಗವಾಗಿಯೇ ಟಿಕಿಸಿದರು ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪ್ರಜ್ಞಾವಂತ ಮತದಾರರು ನಮ್ಮ ಪರವಾಗಿ ಮತ ಚಲಾಯಿಸಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕನ್ನು ಅಭಿವೃದ್ಧಿಯತ್ತ ಕೊಂಡೋಯ್ಯುತ್ತೇವೆ ಎಂದರು.
ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಬ್ಯಾಂಕಿನ ಶತಮಾನೋತ್ಸವದ ಅಂಗವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಈ ನಿಟ್ಟಿನಲ್ಲಿ ಶಾಸಕ ಸವದಿಯವರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.
ನೂತನ ನಿರ್ದೇಶಕ ಸಂತೋಷ ಸಾವಡಕರ ಮಾತನಾಡಿ, ಆಧ್ಯಾತ್ಮ ಗುರು ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಾರಂಭಗೊಂಡ ಪ್ರತಿಷ್ಠಿತ ಈ ಬ್ಯಾಂಕು ಶತಮಾನದ ಅಂಚಿನಲ್ಲಿದ್ದು, ಕಳೆದ 45 ವರ್ಷಗಳಿಂದ ಆಡಳಿತ ಮಂಡಳಿಗೆ ಚುನಾವಣೆ ನಡೆದಿರಲಿಲ್ಲ ಆದರೂ ಅನಿವಾರ್ಯವಾಗಿ ಚುನಾವಣೆ ನಡೆದ ಪರಿಣಾಮ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ ಎಂದ ಅವರು ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ನಮಗೆ ಮತ ಚಲಾಯಿಸಿದ ಮತದಾರರ ವಿಶ್ವಾಸ ಉಳಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಥಣಿ ಪಟ್ಟಣದ ಗಣ್ಯ ವ್ಯಾಪಾರಸ್ಥರಾದಬಸು ಬಾವಣ್ಣವರ್, ಮಲ್ಲಿಕಾರ್ಜುನ ಉಮರಾಣಿ, ರುದ್ರ್ಪ ಕರಣಿ, ಪ್ರಫುಲ್ ಮೆಟಗುಡ್, ಸುಧೀರ್ ಸಂಕ, ಚಂದ್ರು ಯಲ್ಲಟ್ಟಿ, ಬಾಹುಬಲಿ ಕೊಪ್ಪ, ಶಿವು ಆಳ್ಳಿಮಟ್ಟಿ ಸೇರಿದಂತೆ ಅನೇಕ ವ್ಯಾಪಾರಸ್ಥರು ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾದ ಸಂಜಯ ತೆಲಸಂಗ, ಶಿವು ಗೆಜ್ಜೆ, ನಿವೇದಿತಾ ತೆಲಸಂಗ, ಸಂತೋಷ ಸಾವಡಕರ, ಶಿವಯೋಗಿ ಮಂಗಸೂಳಿ, ಶ್ರೀಶೈಲ್ ಮೋಪಗಾರ, ರುದ್ರಯ್ಯ ಹಿರೇಮಠ್, ಸುಷ್ಮಾ ಹಿಟ್ನಾಳಮಠ, ವಿಜಯಮಾಲಾ ತೆಲಸಂಗ, ಮಹೇಶ ಚುನಮುರಿ, ರಾಮ ಗಾಡ್ಡಿವಡ್ಡರ ದುಂಡಪ್ಪ ಬುರುಡ ಇವರನ್ನು ಸತ್ಕರಿಸಿದರು. ಬ್ಯಾಂಕಿನ ಪ್ರಾಧಾನ ವ್ಯವಸ್ಥಾಪಕ ಮತ್ತು ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.