ನಿಧಾನಗತಿ ಓವರ್ಗಳಿಗೆ ತೆರಬೇಕು ಭಾರೀ ದಂಡ?



ಲಂಡನ್: ಕ್ರಿಕೆಟ್ ತಂಡಗಳಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ನಿಧಾನಗತಿಯ ಓವರ್ ಗಳ ಮೇಲೆ ಇನ್ನು ಪೆನಾಲ್ಟಿ ರೂಪದಲ್ಲಿ ಎದುರಾಳಿ ತಂಡಕ್ಕೆ ರನ್ ಗಳನ್ನು ನೀಡುವ ಹೊಸ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. 

ಹೌದು, ಕ್ರಿಕೆಟ್ ನಿಯಮಗಳ ರಕ್ಷಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಮೆರಿಲ್ ಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಂದೆ ಪ್ರಸ್ತಾಪವನ್ನು ಮುಂದಿಟ್ಟಿದೆ.  

ಮಾಜಿ ನಾಯಕ ಮೈಕ್ ಗ್ಯಾಟಿಂಗ್ ಮುಖ್ಯಸ್ಥರಾಗಿರುವ ಈ ಸಮಿತಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ರಿಕಿ ಪಾಂಟಿಂಗ್ ಪ್ರಮುಖ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಸಭೆ ಸೇರಿದ ಪ್ರಮುಖರು, ಓವರ್ ಗತಿ ಮೇಲೆ ನಿಗಾ ಇರಿಸಲು ಶಾಟ್ ಕ್ಲಾಕ್ ಬಳಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.  

ಪ್ರತಿ ಓವರ್ ನಡುವಿನ ವಿರಾಮದ ಅವಧಿಯಲ್ಲಿ ಶಾಟ್ ಕ್ಲಾಕ್ ಚಲಿಸುತ್ತಿರುತ್ತದೆ. ಬೌಲರ್ ರನ್ ಅಪ್ ಗೆ ಬಂದಾಗ ಸ್ಥಗಿತಗೊಳ್ಳುತ್ತದೆ. ಇಂತಿಷ್ಟೇ ಸಮಯದಲ್ಲಿ ಪ್ರತಿ ಓವರ್ ಮುಕ್ತಾಯಗೊಳ್ಳಬೇಕು ಎಂದು ಬೌಲರ್ ನನ್ನು ನಿರ್ಬಂಧಿಸಲು ಸಾಧ್ಯವಿಲ್ಲ.  

ಇಲ್ಲಿ ವೇಗದ ಬೌಲರ್ ಗಳಿಗೆ ಹೆಚ್ಚಿನ ಅವಧಿ ಬೇಕಾಗುತ್ತದೆ. ಬೌಂಡರಿ, ಸಿಕ್ಸರ್ ಸಿಡಿಸಿದಾಗ, ಔಟಾದಾಗ ವಿಳಂಬವಾಗುತ್ತದೆ. ಆದರೆ, ಎರಡು ಓವರ್ ಗಳ ಮಧ್ಯೆ ಎಷ್ಟು ಸಮಯ ತೆಗೆದುಕೊಂಡರೆಂಬ ಲೆಕ್ಕ ಇಡಬೇಕಾಗುತ್ತದೆ. ಹೊಸ ಬ್ಯಾಟ್ಸ್ ಮನ್ ಕ್ರೀಸ್ ಗೆ ಬಂದು ಆಟಕ್ಕೆ ಸಿದ್ಧವಾಗಲು ತೆಗೆದುಕೊಳ್ಳುವ ಸಮಯವನ್ನೂ ಲೆಕ್ಕ ಹಾಕಲಾಗುತ್ತದೆ.