ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಮುಂದುವರೆದಿದ್ದು, ಸೋಪೋರ್, ಕುಪ್ವಾರ ದಾಳಿ ಬೆನ್ನಲ್ಲೇ ಮತ್ತೆ ಉಗ್ರರು ಶೋಪಿಯಾನ್ ನಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ 5 ಮಂದಿ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ರಾಜಧಾನಿ ಶ್ರೀನಗರದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಶೋಪಿಯಾನ್ ನಲ್ಲಿ ಉಗ್ರರು ಮತ್ತು ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಸೇನಾಪಡೆಗಳ ದಾಳಿಗೆ ಐದು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ.
ಸೇನಾ ಮೂಲಗಳ ಪ್ರಕಾರ ಶೋಪಿಯಾನ್ ನಲ್ಲಿ ಉಗ್ರರ ಇರುವಿಕೆ ಕುರಿತು ಮಾಹಿತಿ ಪಡೆದ ಸೇನಾಧಿಕಾರಿಗಳ ತಡ ರಾತ್ರಿಯಲ್ಲೇ ಪ್ರದೇಶವನ್ನು ಸುತ್ತುವರೆದಿದ್ದಾರೆ. ಅತ್ತ ಸೇನೆ ಆಗಮಿಸುತ್ತಿದ್ದಂತೆಯೇ ಎಚ್ಚೆತ್ತ ಉಗ್ರರು ಗುಂಡಿನ ಸುರಿಮಳೆ ಆರಂಭಿಸಿದ್ದಾರೆ. ಈ ವೇಳೆ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ ಐದು ಮಂದಿ ಉಗ್ರರು ಸಾವನ್ನಪ್ಪಿದ್ದು, ಈ ಪೈಕಿ ಓರ್ವ ಉಗ್ರನ ಶವವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಮತದೇಹದ ಬಳಿ ಬಿದ್ದಿದ್ದ ಎಕೆ 47 ರೈಫಲ್ ಮತ್ತು ಹಲವು ಮ್ಯಾಗಜಿನ್ ಗಳನ್ನೂ ಕೂಡ ವಶಪಡಿಸಿಕೊಂಡಿದ್ದಾರೆ. ಮೃತ ಉಗ್ರನನ್ನು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರ ಉಮರ್ ಮಲಿಕ್ ಎಂದು ಗುರುತಿಸಲಾಗಿದೆ.