ಚಿಕ್ಕಮಗಳೂರು, ಜೂನ್ 14 : ಸಾವಿರಾರು ಹೂಡಿಕೆದಾರರಿಗೆ ವಂಚನೆ ಎಸಗಿರುವ ಬಹುಕೋಟಿ ಐ ಮಾನಿಟರಿ ಅಡ್ವಸೈರಿ (ಐಎಂಎ) ಹಗರಣವನ್ನು ಮುಚ್ಚಿಹಾಕಲು ರಾಜ್ಯಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ, ಕಂಪನಿಯ ಪ್ರವರ್ತಕ ದೇಶದಿಂದ ಪರಾರಿಯಾಗಿದ್ದಾನೆ. ಬೆವರು ಹರಿಸಿ ದುಡಿದ ಹಣ ಕಳೆದುಕೊಂಡಿರುವ ಬಡ ಮುಗ್ಧ ಜನರಿಗೆ ಸೂಕ್ತ ನ್ಯಾಯ ಒದಗಿಸಲು ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸ ಬೇಕು ಎಂದು ಆಗ್ರಹಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಐಎಂಎ ವಂಚನೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವುದನ್ನು ಬಿಟ್ಟು, ಹಗರಣದ ತಪ್ಪಿತಸ್ಥರನ್ನು ರಕ್ಷಿಸಲು ವಿಶೇಷ ತನಿಖಾ ತಂಡ ರಚಿಸಿದೆ ಎಂದು ದೂರಿದರು. ಬಹುಕೋಟಿ ವಂಚನೆ ಹಗರಣದ ಹಿಂದೆ ಆಡಳಿತಾರೂಢ ಪಕ್ಷದ ನಾಯಕರ ಹೆಸರು ಕೇಳಿಬಂದಿರುವ ಕಾರಣ ವಂಚನೆ ಪ್ರಕರಣ ಮುಚ್ಚಿಹಾಕಲು ರಾಜ್ಯ ಸರ್ಕಾರ ಸಂಚು ರೂಪಿಸಿರುವಂತೆ ಕಾಣುತ್ತಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಕಳೆದ ವಾರ ದಿಢೀರ್ ಕಂಪನಿಯನ್ನು ಬಂದ್ ಮಾಡುವ ಮೂಲಕ ಸಾವಿರಾರು ಹೂಡಿಕೆದಾರರು ಕಂಗೆಡುವಂತೆ ಮಾಡಿರುವ ಐಎಂಎ ಜ್ಯೂವೆಲ್ಸ್ ಕಂಪನಿಯ ವಿರುದ್ಧ ಪೊಲೀಸರು ಈವರೆಗೆ 21 ಸಾವಿರ ದೂರುಗಳನ್ನು ಸ್ವೀಕರಿಸಿದ್ದಾರೆ. ಆದರೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಕಂಪನಿಯ ಪ್ರವರ್ತಕ ಮನ್ಸೂರ್ ಆಲಿ ಖಾನ್ ದೇಶದಿಂದ ಪರಾರಿಯಾಗಲು, ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತೆರಳಲು ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದೆ ಕಂಪನಿಯ 11 ನಿದರ್ೆಶಕರು ಪೊಲೀಸರಿಗೆ ಶರಣಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ವಂಚಕ ಆರೋಪಿ ಮನ್ಸೂರ್ ಅಲಿಖಾನ್ ತನ್ನ ಕುಟುಂಬ ಹಾಗೂ ಮಕ್ಕಳೊಂದಿಗೆ ದುಬೈಗೆ ಪರಾರಿಯಾಗಿರಬಹುದು ಎಂದು ಹೇಳಲಾಗಿದೆ.