ವಿದ್ಯಾರ್ಥಿಗಳಲ್ಲಿ ಕ್ರೀಡಾ ಆಸಕ್ತಿ ಕುಂಠಿತ: ಶಿವಪ್ಪಗೌಡ ಬಿರಾದಾರ ಕಳವಳ

ವಿದ್ಯಾರ್ಥಿಗಳಲ್ಲಿ ಕ್ರೀಡಾ ಆಸಕ್ತಿ ಕುಂಠಿತ: ಶಿವಪ್ಪಗೌಡ ಬಿರಾದಾರ ಕಳವಳ Shivappagouda Biradar concerned over declining interest in sports among students

ಲೋಕದರ್ಶನ ವರದಿ 

ಸಿಂದಗಿ 06: ಇಂದಿನ ವಿದ್ಯಾರ್ಥಿಗಳು ಕ್ರೀಡೆಗಳಿಗಿಂತ ಪಠ್ಯ ಚಟುವಟಿಕೆಗಳು ಮತ್ತು ತಂತ್ರಜ್ಞಾನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರ ಪರಿಣಾಮವಾಗಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುಂಠಿತವಾಗುತ್ತಿದೆ. ಎಂದು ಶಿವಪ್ಪಗೌಡ ಬಿರಾದಾರ ಕಳವಳ ವ್ಯಕ್ತಪಡಿಸಿದರು.   

ಪಟ್ಟಣದ ತಾ.ಶಿ.ಪ್ರ ಮಂಡಳಿಯ ಸಿ.ಎಂ. ಮನಗೂಳಿ ಪದವಿ ಮಹಾವಿದ್ಯಾಲಯ, ಸಿಂದಗಿ ಹಾಗೂ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವಿಜಯಪುರ ದ್ವಿತೀಯ ವಲಯದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ವಿಜಯಪುರ ವಲಯದಲ್ಲಿ 50ಕ್ಕೂ ಹೆಚ್ಚು ಪದವಿ ಕಾಲೇಜುಗಳಿದ್ದರೂ ಕ್ರೀಡಾ ಸ್ಪರ್ಧೆಯಲ್ಲಿ ಕೇವಲ 6 ತಂಡಗಳು ಮಾತ್ರ ಭಾಗವಹಿಸಿರುವುದನ್ನು ನೋಡಿದರೆ ವಿದ್ಯಾರ್ಥಿಗಳಲ್ಲಿ ಕ್ರೀಡಾ ಆಸಕ್ತಿ ಕಡಿಮೆಯಾಗಿದೆ ಹಾಗೆಯೇ ಪೋಷಕರು ಹಾಗೂ ಶಿಕ್ಷಕರು ಕೂಡ ವಿದ್ಯಾರ್ಥಿಗಳನ್ನು ಕ್ರೀಡೆಗಳತ್ತ ಪ್ರೋತ್ಸಾಹಿಸುವ ಜವಾಬ್ದಾರಿ ಕಳೆದುಕೊಂಡಿದ್ದಾರೆ ಕೇವಲ ಅಂಕಗಳಿಗೆ ಮಾತ್ರ ಸಿಮೀತವಾಗದೆ, ಸವಾಂರ್ಗೀಣ ಅಭಿವೃದ್ಧಿಗೆ ಕ್ರೀಡೆಗಳೂ ಮಹತ್ವದ್ದು ಎಂಬ ಅರಿವು ಮೂಡಿಸುವ ಅತ್ಯಗತ್ಯವಿದೆ ಎಂದರು.  

ನಿವೃತ್ತ ಉಪನ್ಯಾಸಕ ಶಾಂತೂ ಹಿರೇಮಠ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿವೆ. ತಂಡಭಾವನೆ, ಶಿಸ್ತಿನ ಬದುಕು, ನಾಯಕತ್ವ ಗುಣಗಳು ಸೇರಿದಂತೆ ಅನೇಕ ಮೌಲ್ಯಗಳನ್ನು ಕ್ರೀಡೆಗಳು ಬೆಳೆಸುತ್ತವೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.  

ಕಾರ್ಯಕ್ರಮದಲ್ಲಿ ಆಲಮೇಲ ಬಿಸಿಸಿ ಅಧ್ಯಕ್ಷ ಸಾದಿಕ ಸುಂಬಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಣಮಂತ ಸುಣಗಾರ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಎಚ್‌.ಎಂ.ಉತ್ನಾಳ ಮಾತನಾಡಿದರು.     

ಕಾಲೇಜಿನ ಪ್ರಾಚಾರ್ಯ ಎಸ್‌.ಎಂ.ಬಿರಾದಾರ, ದೈಹಿಕ ಶಿಕ್ಷಣ ನಿರ್ದೇಶಕರಾದ ರವಿ ಗೋಲಾ, ಎಸ್‌.ಎ.ಜಾಗೀರದಾರ್, ನಿವೃತ್ತ ದೈಹಿಕ ನಿರ್ದೇಶಕ ಕೆ.ಎಚ್‌.ಸೋಮಾಪೂರ ಉಪನ್ಯಾಸಕರಾದ ಬಿ.ಡಿ.ಮಾಸ್ತಿ, ರಮೇಶ ಯಂಕಂಚಿಕರ್, ಎಂ.ಎಂ.ಕೆಂಭಾವಿ, ಹಾಗೂ ವಿಶ್ವವಿದ್ಯಾಲಯದ  ದೈಹಿಕ ಶಿಕ್ಷಣ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇನ್ನಿತರರು ಇದ್ದರು.  

ಕಾರ್ಯಕ್ರಮದ ಕ್ರೀಡಾಕೂಟದ ಸಂಘಟನಾ ಕಾರ್ಯಾದರ್ಶಿ ಡಾ. ಅಂಬರೀಶ ಬಿರಾದಾರ ಸ್ವಾಗತಿಸಿ ಪರಿಚಯಿಸಿದರು. ರಾಹುಲ ಕಾಂಬಳೆ ಕಾರ್ಯಕ್ರಮ ನಿರೂಪಿಸಿದರು. ಸತೀಶ ಬಿರಾದಾರ ವಂದಿಸಿದರು.