ಶಿವಸೇನೆ ಬಿಗಿಪಟ್ಟು, ಅಧಿಕಾರ ಹಂಚಿಕೆ ಮತ್ತಷ್ಟು ಕಗ್ಗಂಟು

ಮುಂಬೈ ಅ,   26:    ಜನನಾಯಕ ಜನತಾ ಪಕ್ಷದ ಸಹಕಾರದೊಂದಿಗೆ ಹರಿಯಾಣದಲ್ಲಿ ಬಿಜೆಪಿ ಸರ್ಕಾರ  ರಚಿಸಲು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದರೆ, ಇತ್ತ ಮಹಾರಾಷ್ಟ್ರದಲ್ಲಿ ಮಾತ್ರ  ಇದಕ್ಕೆ ತದ್ವಿರುದ್ಧ ಬೆಳವಣಿಗೆ ನಡೆಯುತ್ತಿದೆ. ಬಿಜೆಪಿ ಮತ್ತು ಶಿವಸೇನಾ ನಡುವಿನ ಕಿತ್ತಾಟ, ಅಧಿಕಾರ  ಹಂಚಿಕೆ ಬಿಗಿಪಟ್ಟು ಹೊಸ  ಸರ್ಕಾರದ ರಚನೆ ಮತ್ತು ಪ್ರಮಾಣವಚನ ಕಾರ್ಯಕ್ರಮ ಮತ್ತಷ್ಟು  ವಿಳಂಬಕ್ಕೆ ಕಾರಣವಾಗುವ ಸಾಧ್ಯತೆಯಿದೆ.   ಒಟ್ಟು  288 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ - ಶಿವಸೇನಾ  ಮೈತ್ರಿಕೂಟ 161 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಆದರೆ, ಇವರಿಬ್ಬರ ನಡುವೆ  ಸಚಿವ ಖಾತೆಗಳ ಹಂಚಿಕೆಯಲ್ಲಿ  ಕಿತ್ತಾಟವಾಗಲಿದೆ ಎಂದೂ  ಹೇಳಲಾಗಿದೆ. ಬಿಜೆಪಿ 105  ಸ್ಥಾನವನ್ನು ಗೆದ್ದಿದ್ದರೆ, ಶಿವಸೇನಾ 56 ಸ್ಥಾನಗಳನ್ನು ಗಳಿಸಿದೆ. ಆದರೆ, ಸರ್ಕಾರ  ರಚನೆಯಲ್ಲಿ 50-50 ಸೂತ್ರ ಅನುಸರಿಸಬೇಕು ಎಂದು ಶಿವಸೇನಾ ಬಿಗಿಪಟ್ಟು ಹಾಕಿದೆ. ಹೀಗಾಗಿ ಹೊಸ ಸರ್ಕಾರ ಮತ್ತುಷ್ಟಿ ಕಗ್ಗಂಟಾಗಿದೆ. ಬಿಜೆಪಿ  ಸಂಪೂರ್ಣ ನಮ್ಮ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಚೆನ್ನಾಗಿಯೇ ಅರಿತಿರುವ ಶಿವಸೇನಾ  ತನ್ನ ಹೊಸ ಗೇಮ್ ಪ್ಲ್ಯಾನ್ ಕಾರ್ಯರೂಪಕ್ಕೆ ತರಲು ಮುಂದಾಗಿದೆ. ಹೀಗಾಗಿಯೇ ಚುನಾವಣಾ  ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸುದ್ದಿಗೋಷ್ಠಿ ನಡೆಸಿದ ಶಿವಸೇನಾ ಮುಖ್ಯಸ್ಥ ಉದ್ಧವ್  ಠಾಕ್ರೆ 50-50 ಸೂತ್ರದಂತೆ ಅಧಿಕಾರ ಹಂಚಿಕೆಯಾಗಿಬೇಕು ಎಂಬ ದಾಳ ಉರುಳಿಸಿದ್ದಾರೆ. ಇದರ  ಬಗ್ಗೆ  ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ತಮ್ಮ ನಡುವೆ ಆರಂಭದಲ್ಲೇ ಒಪ್ಪಂದವಾಗಿತ್ತು  ಎಂದು ಹಳೆಯ ಕತೆ, ಖ್ಯಾತೆ ತೆಗೆದಿದ್ದಾರೆ. ಉದ್ಧವ್  ಠಾಕ್ರೆ ಮಗ ಆದಿತ್ಯ ಠಾಕ್ರೆ ವರ್ಲಿ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದಾರೆ.  ವಿಶೇಷವೆಂದರೆ, ಮುಂಬೈನ ಹಲವು ಕಡೆ ಭವಿಷ್ಯದ ಮಹಾರಾಷ್ಟ್ರ ಮುಖ್ಯಮಂತ್ರಿ ಎಂಬ ಪೋಸ್ಟರ್  ರಾರಾಜಿಸುತ್ತಿರುವುದು ಆದಿತ್ಯ ಠಾಕ್ರೆಗೆ ಬಹುದೊಡ್ಡ ಸ್ಥಾನದ  ಬೇಡಿಕೆಗಿಂತಲೂ  ಅಧಿಕಾರ  ಹಂಚಿಕೆಯೇ  ಮತ್ತುಷ್ಟು ಜಟಿಲಗೊಳ್ಳುವ  ಮುನ್ಸೂಚನೆ ನೀಡಿದೆ.