ಉಡುಪಿ: ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶರಾದ ಹಿನ್ನೆಲೆಯಲ್ಲಿ ಇಂದು ಉಡುಪಿಯ ರಥಬೀದಿ ಸ್ತಬ್ಧವಾಗಿದೆ. ನಗರದ ಎಲ್ಲ ಶಾಲಾ- ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದ್ದು, ಶಾಲಾ-ಕಾಲೇಜು ಸೇರಿದಂತೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಶಿರೂರು ಸ್ವಾಮೀಜಿಗಾಗಿ ಶೋಕಾಚರಣೆ ಮಾಡುತ್ತಿದ್ದಾರೆ. ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ಗೌರವಾರ್ಥವಾಗಿ ವ್ಯಾಪಾರ ವಹಿವಾಟು ಬಂದ್ ಮಾಡಿದ್ದಾರೆ. ಈ ಮೂಲಕ ಶಿರೂರು ಸ್ವಾಮೀಜಿಗಳ ಅಸಹಜ ಸಾವಿಗೆ ಉಡುಪಿ ಜನತೆ ಕಂಬನಿ ಮಿಡಿಯುತ್ತಿದ್ದಾರೆ. ಈಗಾಗಲೇ ಮಠದ ಮುಂದೆ ಅಪಾರ ಭಕ್ತರು ನೆರೆದಿದ್ದಾರೆ.
ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ಹತ್ತಿಯ ಬುಟ್ಟಿ ಸಿದ್ಧತೆ ಮಾಡಲಾಗುತ್ತಿದೆ. ಇದಕ್ಕಾಗಿ ಸಾಂಪ್ರದಾಯಿಕ ಬುಟ್ಟಿ ತಂದಿದ್ದು, ಭಕ್ತರು ಹತ್ತಿಯನ್ನು ಬುಟ್ಟಿಯಲ್ಲಿ ಹಾಕುತ್ತಿದ್ದಾರೆ. ಬಳಿಕ ಮಠದ ಭಕ್ತರು ಬುಟ್ಟಿಯಲ್ಲಿ ಮೃತ ಶರೀರ ಹೊರಲಿದ್ದಾರೆ. ಇಂದು ಸಂಜೆ ಸ್ವಾಮೀಜಿಗಳ ಅಂತ್ಯಕ್ರಿಯೆ ನೇರವೇರಲಿದೆ.
ಉಡುಪಿ ಮಠದ ಸಂಪ್ರದಾಯದಂತೆ ಸಂಸ್ಕಾರ ಮಾಡಲಾಗುತ್ತಿದೆ. ಆದ್ದರಿಂದ ಶ್ರೀಗಳ ಶರೀರವನ್ನು ಮೊದಲು ಕೃಷ್ಣಮಠಕ್ಕೆ ಕೊಂಡೊಯ್ಯಲಾಗುತ್ತದೆ. ಬಳಿಕ ಮಠದ ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಿ ಶ್ರೀ ಕೃಷ್ಣ ದೇವರ ದರ್ಶನವನ್ನು ಮಾಡಿಸಲಾಗುತ್ತದೆ.
ನಂತರ ಶಿರೂರು ಸ್ವಾಮೀಜಿಯ ಮೂಲಮಠವಾದ ಕಾಪುವಿನ ಹಿರಿಯಡ್ಕದಕ್ಕೆ ಮೃತದೇವನ್ನು ಕೊಂಡೊಯ್ದು ಮಣ್ಣಿನಡಿ ಹೂಳುವ ಮೂಲಕ ಸಂಸ್ಕಾರ ಮಾಡಲಾಗುತ್ತದೆ. ಅಂತ್ಯ ಸಂಸ್ಕಾರ ಮಾಡುವಾಗ ಪೂಜಾ ಸಾಮಾಗ್ರಿಗಳನ್ನು ಅವರ ಶರೀರದ ಜೊತೆ ಇರಿಸಿ ಬೃಂದಾವನ ನಿರ್ಮಿಸಲಾಗುತ್ತದೆ. ಜೊತೆಗೆ ಉಪ್ಪು, ಹತ್ತಿ, ಕಾಳುಮೆಣಸು ಮತ್ತು ಕರ್ಪೂರಗಳನ್ನು ತುಂಬಿಸಿ ಸಮಾಧಿ ಮಾಡಲಾಗುತ್ತದೆ.