ನವದೆಹಲಿ, ಏಪ್ರಿಲ್ 3, ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಒಗ್ಗಟ್ಟಿನ ಭಾರತದ ಚಿತ್ರಣ ಬಿಂಬಿಸಲು ಮತ್ತು ಅಂಧಕಾರ ಕೊನೆಗೊಳಿಸಲು ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ವಿದ್ಯುತ್ ದೀಪಗಳನ್ನು ಸ್ವಿಚ್ ಆಫ್ ಮಾಡಿ ದೀಪಗಳು, ಮೇಣದ ಬತ್ತಿಗಳನ್ನು ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ.
ಶುಕ್ರವಾರ ವೀಡಿಯೊ ಸಂದೇಶದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, 'ಈ ಭಾನುವಾರ, ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ನಿಮ್ಮ ಬಾಗಿಲು ಅಥವಾ ಬಾಲ್ಕನಿಯಲ್ಲಿ 9 ನಿಮಿಷಗಳ ಕಾಲ ಮೇಣದ ಬತ್ತಿ, ದೀಪ, ಟಾರ್ಚ್ ಅಥವಾ ನಿಮ್ಮ ಫೋನ್‌ನ ಬ್ಯಾಟರಿ ಬೆಳಕನ್ನು ಬೆಳಗಿಸಿ. ಕೊರೊನವೈರಸ್ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಒಬ್ಬಂಟಿಯಾಗಿಲ್ಲ ಎಂಬ ವಿಶ್ವಾಸವನ್ನು ಇದು ನಮ್ಮೆಲ್ಲರಿಗೂ ನೀಡುತ್ತದೆ.’ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಜನರು ತಮ್ಮ ಮನೆಗಳ ಹೊರಗೆ ಜಮಾಯಿಸಬಾರದು ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮಾರ್ಚ್ 22ರಂದು ಕರೆ ನೀಡಲಾಗಿದ್ದ ಜನತಾ ಕರ್ಫ್ಯೂ ವೇಳೆ ಇದೇ ರೀತಿ ಜನರು ಮನೆ ಮುಂದೆ ಬಂದು ಚಪ್ಪಾಳೆ, ಜಾಗಟೆ ಬಾರಿಸಬೇಕೆಂಬ ಪ್ರಧಾನಿಯವರ ಮನವಿಗೆ ಉತ್ತಮ ಸ್ಪಂದನೆ ದೊರೆತಿತ್ತು.