ನ್ಯೂಜಿಲೆಂಡ್ ಪ್ರವಾಸಕ್ಕೆ ಶಿಖರ್ ಧವನ್ ಅನುಮಾನ !

ಬೆಂಗಳೂರು, ಜ 20,ಭುಜದ ಗಾಯಕ್ಕೆ ತುತ್ತಾಗಿರುವ ಭಾರತ ತಂಡದ ಹಿರಿಯ ಆರಂಭಿಕ ಶಿಖರ್ ಧವನ್ ಅವರು ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಅನುಮಾನ ಎಂದು ಹೇಳಲಾಗುತ್ತಿದೆ.ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಭಾನುವಾರ ಮೂರನೇ ಪಂದ್ಯದಲ್ಲಿ ಧವನ್ ಫೀಲ್ಡಿಂಗ್ ವೇಳೆ ಗಾಯಕ್ಕೆ ತುತ್ತಾಗಿದ್ದರು. ತಕ್ಷಣ ಅವರನ್ನು ತಂಡದ ಫಿಜಿಯೊ ಅಂಗಳದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದರು. ನಂತರ ಅವರನ್ನು ಎಕ್ಸ್ ರೆಗೆ ಕರೆದೊಯ್ಯಲಾಗಿತ್ತು.

ಸರಣಿ ನಿರ್ಣಾಯಕ ಪಂದ್ಯದ ಆಸ್ಟ್ರೇಲಿಯಾ ಇನಿಂಗ್ಸ್ ನ ಐದನೇ ಓವರ್ ನಲ್ಲಿ ಆ್ಯರೋನ್ ಫಿಂಚ್ ಹೊಡೆದಿದ್ದ ಚೆಂಡನ್ನು ಬೌಂಡರಿಯಿಂದ ತಡೆಯಲು ಧವನ್ ಬಿದ್ದು ತಮ್ಮ ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ನಂತರ, ಯಜುವೇಂದ್ರ ಚಾಹಲ್ ಧವನ್ ಬದಲು ಫೀಲ್ಡಿಂಗ್ ಮಾಡಿದ್ದರು. ಒಂದು ಕ್ಯಾಚ್ ಕೂಡ ಹಿಡಿದಿದ್ದರು. ಬ್ಯಾಟಿಂಗ್ ನಲ್ಲಿ ರೋಹಿತ್ ಜತೆ ರಾಹುಲ್ ಇನಿಂಗ್ಸ್ ಆರಂಭ ಮಾಡಿದ್ದರು. ಜನವರಿ 24 ರಿಂದ ಭಾರತದ ತಂಡ ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿ ಆಡಲಿದೆ. ಈ ಸರಣಿಗೆ ಶಿಖರ್ ಧವನ್ ಕೂಡ ಆಯ್ಕೆಯಾಗಿದ್ದಾರೆ. ಆದರೆ, ಗಾಯಕ್ಕೆ ತುತ್ತಾಗಿರುವ ಅವರನ್ನು ನ್ಯೂಜಿಲೆಂಡ್ ಪ್ರವಾಸಕ್ಕೆ ಪರಿಗಣಿಸುವ ಬಗ್ಗೆ ಯಾವುದೇ ಸ್ಪಷ್ಟತೆ ಬಿಸಿಸಿಐನಿಂದ ಮೂಡಿಬಂದಿಲ್ಲ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೀಮ್ ಇಂಡಿಯಾ ಇಂದು ನ್ಯೂಜಿಲೆಂಡ್ ಗೆ ಪ್ರವಾಸ ಬೆಳೆಸಲಿದೆ.