ನವದೆಹಲಿ, ಜ 21 : ಭುಜದ ಗಾಯಕ್ಕೆ ತುತ್ತಾಗಿರುವ ಭಾರತ ತಂಡದ ಹಿರಿಯ ಆರಂಭಿಕ ಶಿಖರ್ ಧವನ್ ಅವರು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಆದರೆ, ಇವರ ಸ್ಥಾನಕ್ಕೆ ಇನ್ನೂ ಯಾರನ್ನೂ ಬಿಸಿಸಿಐ ಗುರುತಿಸಿಲ್ಲ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಭಾನುವಾರ ಮೂರನೇ ಪಂದ್ಯದಲ್ಲಿ ಧವನ್ ಫೀಲ್ಡಿಂಗ್ ವೇಳೆ ಗಾಯಕ್ಕೆ ತುತ್ತಾಗಿದ್ದರು. ತಕ್ಷಣ ಅವರನ್ನು ತಂಡದ ಫಿಜಿಯೊ ಅಂಗಳದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದರು. ನಂತರ ಅವರನ್ನು ಎಕ್ಸ್ ರೆಗೆ ಕರೆದೊಯ್ಯಲಾಗಿತ್ತು.
ಸರಣಿ ನಿರ್ಣಾಯಕ ಪಂದ್ಯದ ಆಸ್ಟ್ರೇಲಿಯಾ ಇನಿಂಗ್ಸ್ ನ ಐದನೇ ಓವರ್ ನಲ್ಲಿ ಆ್ಯರೋನ್ ಫಿಂಚ್ ಹೊಡೆದಿದ್ದ ಚೆಂಡನ್ನು ಬೌಂಡರಿಯಿಂದ ತಡೆಯಲು ಧವನ್ ಬಿದ್ದು ತಮ್ಮ ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ನಂತರ, ಯಜುವೇಂದ್ರ ಚಾಹಲ್ ಧವನ್ ಬದಲು ಫೀಲ್ಡಿಂಗ್ ಮಾಡಿದ್ದರು. ಒಂದು ಕ್ಯಾಚ್ ಕೂಡ ಹಿಡಿದಿದ್ದರು. ಬ್ಯಾಟಿಂಗ್ ನಲ್ಲಿ ರೋಹಿತ್ ಜತೆ ರಾಹುಲ್ ಇನಿಂಗ್ಸ್ ಆರಂಭ ಮಾಡಿದ್ದರು.
ಜನವರಿ 24 ರಿಂದ ಭಾರತದ ತಂಡ ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿ ಆಡಲಿದೆ. ಈ ಸರಣಿಗೆ ಶಿಖರ್ ಧವನ್ ಕೂಡ ಆಯ್ಕೆಯಾಗಿದ್ದಾರೆ. ಆದರೆ, ಗಾಯಕ್ಕೆ ತುತ್ತಾಗಿರುವ ಅವರನ್ನು ನ್ಯೂಜಿಲೆಂಡ್ ಪ್ರವಾಸಕ್ಕೆ ಬಿಸಿಸಿಐ ಪರಿಗಣಿಸಿಲ್ಲ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೀಮ್ ಇಂಡಿಯಾ ಸೋಮವಾರ ರಾತ್ರಿ ನ್ಯೂಜಿಲೆಂಡ್ ಗೆ ಪ್ರವಾಸ ಬೆಳೆಸಿತ್ತು.
ಶಿಖರ್ ಧವನ್ ಅನುಪಸ್ಥಿಯಲ್ಲಿ ಭಾರತ ತಂಡದ ಅತ್ಯಂತ ಭರವಸೆಯ ಆಟಗಾರ ಎನಿಸಿರುವ ಕನ್ನಡಿಗ ಕೆ.ಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ.
ಧವನ್ ಬದಲು ಮಯಾಂಕ್ ಗೆ ಅವಕಾಶ ?
ಈಗಾಗಲೇ ಭಾರತ ಎ ತಂಡ ನ್ಯೂಜಿಲೆಂಡ್ ನಲ್ಲಿದ್ದು, ಇದರಲ್ಲಿಯೇ ಒಬ್ಬ ಆಟಗಾರನನ್ನು ಧವನ್ ಬದಲು ಗುರುತಿಸಬಹದು. ಒಂದು ಇದು ಸಕಾರವಾದರೆ, ವಿಶ್ವಕಪ್ ವೇಳೆ ತಂಡದಲ್ಲಿದ್ದ ಮಯಾಂಕ್ ಅಗರ್ವಾಲ್ ಅವರನ್ನೇ ಮತ್ತೊಮ್ಮೆ ಪರಿಗಣಿಸುವ ಸಾಧ್ಯತೆ ಇದೆ. ಜತೆಗೆ, ಮುಂಬೈನ ಪೃಥ್ವಿಶಾ, ಸೂರ್ಯಕಮಾರ್ ಯಾದವ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದನ್ನೂ ತಳ್ಳಿಹಾಕುವಂತಿಲ್ಲ.