ಲೋಕದರ್ಶನ ವರದಿ
ಶಿಗ್ಗಾವಿ 09: ವರುಣಾ ಕಂಪನಿಯ ಸೋಯಾಬೀನ್ ಬೀಜ ಕಳಪೆ ಗುಣಮಟ್ಟದಿಂದ ಕೂಡಿದ್ದು, ಬಿತ್ತಿದ್ದ ಬೀಜ ಬೆಳೆಯುತ್ತಿಲ್ಲ ಎಂದು ತಾಲೂಕಿನ ಮುಗಳಿ ಹಾಗೂ ಇನ್ನೂ ಹಲವಾರು ಗ್ರಾಮಗಳ ರೈತರು ಆರೋಪಿಸಿದ್ದಾರೆ.
ಮುಗಳಿ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಮುಂಗಾರು ಮಳೆ ಜಮೀನಿಗೆ ಹದ ನೀಡಿದ ಹಿನ್ನೆಲೆಯಲ್ಲಿ ನೂರಾರು ಎಕರೆಯಲ್ಲಿ ವರುಣಾ, ಕಾಂಚನಾ ಕಂಪನಿಯ ಸೋಯಾಬಿನ್ ಬಿತ್ತಿದ್ದಾರೆ. ಇವುಗಳ ಪೈಕಿ ವರುಣಾ ಕಂಪನಿಯ ಬೀಜ ಹುಟ್ಟುತ್ತಿಲ್ಲ. ಇದರಿಂದ ಸಹಜವಾಗಿ ನಮಗೆ ಆತಂಕವಾಗಿದೆ. ಬಿತ್ತನೆ ಮಾಡಿದ ಆಳು, ವರುಣಾ ಸೋಯಾಬೀನ್ ಪಾಕೆಟ್ ಒಂದಕ್ಕೆ 1260 ರೂ.ಗಳಂತೆ ಖರೀದಿ ಮಾಡಿದ್ದೇವೆ. ಒಂದು ಪಾಕೆಟ್ 40 ಕಿಲೋ ಸೋಯಾಬೀನ್ ಬೇಕಾಗುತ್ತದೆ. ವರುಣಾ ಕಂಪನಿಯ ಬೀಜ 30 ಕಿಲೋ ಇರುತ್ತದೆ. ಹೀಗೆ ನೂರಾರು ಎಕರೆಯಲ್ಲಿ ಬಿತ್ತಿದ ಬೀಜ ಕಳಪೆ ಆಗಿದ್ದರಿಂದ ಹೈರಾಣ ಆಗಿದ್ದೇವೆ ಎಂದು ಪ್ರಗತಿಪರ ರೈತ ಮಲ್ಲಪ್ಪ ರಾಮಗೇರಿ ತಿಳಿಸಿದರು.
ಕಳೆದ ವರ್ಷ ನಮ್ಮೂರಿನಲ್ಲಿ ಅತಿವೃಷ್ಟಿ ಆಗಿದ್ದರಿಂದ ಬೆಳೆದು ನಿಂತ ಬೆಳೆ ನೀರು ಪಾಲಾಗಿದ್ದವು. ಆ ಪರಿಸ್ಥಿತಿ ಮೀರಿ ಈ ವರ್ಷವಾದರೂ ಉತ್ತಮ ಫಸಲು ಬೆಳೆಯಬಹುದು ಎಂಬ ನಿರೀಕ್ಷೆಯಲ್ಲಿರುವಾಗಲೇ ವರುಣಾ ಕಂಪನಿಯ ಸೋಯಾಬೀನ್ ರೈತರನ್ನು ಮತ್ತೆ ಸಂಕಷ್ಟಕ್ಕೆ ದೂಡಿದೆ. ರಸಾಯಿನಿಕ ಗೊಬ್ಬರ, ಬೀಜದ ಬೆಲೆ, ಆಳು, ಟ್ರ್ಯಾಕ್ಟರ್ ಉಳುಮೆ ಲೆಕ್ಕ ಹಾಕಿದರೆ ಕೃಷಿ ನಮ್ಮ ಖುಷಿಯನ್ನೇ ಕಸಿದುಕೊಂಡಂತಾಗಿದೆ. ಕಳಪೆ ಬೀಜ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ರೈತರ ನೆರವಿಗೆ ಸಕರ್ಾರ ಮುಂದಾಗಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಸುಮಾರು ಅಗಾವು ಲಾವಣಿ ಹಾಗೂ ಸ್ವಂತ ಜಮೀನಿನಲ್ಲಿ 12 ಎಕರೆ ವರುಣಾ ಸೋಯಾಬಿನ್ ಬಿತ್ತನೆಯನ್ನು ಮಾಡಲಾಗಿದ್ದು ರಸಾಯಿನಿಕ ಗೋಬ್ಬರ ಹಾಗೂ ಟ್ರ್ಯಾಕ್ಟರ್, ಆಳುಗಳು, ಸೇರಿದಂತೆ ಹಲವಾರು ರೀತಿಯಲ್ಲಿ ಖರ್ಚನ್ನು ಖುಸಿಯಿಂದ ಬಿತ್ತನೆಯನ್ನು ಮಾಡಲಾಗಿದೆ ಆದರೆ ಇದೀಗ ಬಿತ್ತಿದ ಸೋಯಾಬಿನ್ ಬೀಜವು ಹುಟ್ಟದಿರುವದು ತೀವ್ರ ಸಂಕಷ್ಟವನ್ನು ತಂದೋಡ್ಡಿದೆ, ಆದರೆ ಕಂಪನಿಯವರು ಬೇರೆ ಬೀಜವನ್ನು ನೀಡಿದರೂ ಕೂಡಾ ಆ ಕೃಷಿ ಚಟುವಟಿಕೆಯ ಹದವನ್ನು ಪಡೆಯಲು ಎಷ್ಟು ಹಣವನ್ನು ನೀಡಿದರೂ ಆಗದು ಆದ್ದರಿಂದ ತಾಲೂಕಿನ ಹಲವಾರು ರೈತರು ಪಡೆದ ಬೀಜವು ಈ ರೀತಿಯಾಗಿದ್ದರಿಂದ ಸಂಕಷ್ಟದಲ್ಲಿ ಕೈತೋಳೆಯುವಂತಾಗಿದೆ ಎಂದು ರೈತ ಶಿವಲಿಂಗಯ್ಯ ಚಂದ್ರಯ್ಯ ಕಳಸಗೇರಿಮಠ ಹೇಳಿದರು