ಕ್ವಾರಂಟೈನ್ ಮುಗಿಸದ ಶಂಕಿತರು ಹೋಟೆಲ್‌ಗಳಿಗೆ ಶಿಫ್ಟ್

ಬೆಂಗಳೂರು, ಮಾ.30, ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ 14 ದಿನಗಳ ಹೋಮ್ ಕ್ವಾರಂಟೈನ್ ಮುಗಿಸದ ಪ್ರಾಥಮಿಕ ಕಾಂಟ್ಯಾಕ್ಟ್ ಶಂಕಿತರನ್ನು ಹೋಟೆಲ್‌ಗಳಿಗೆ ಶಿಫ್ಟ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.60 ವರ್ಷ  ದಾಟಿದ, ಕೊರೊನಾ ಸೋಂಕು ಕಾಣದ, ಸಕ್ಕರೆ ಖಾಯಿಲೆ, ಹೈಪರ್ ಟೆನ್ಷನ್, ಬಿಪಿ, ಅಂಗಾಂಗ  ಕಸಿ ಮಾಡಿಸಿಕೊಳ್ಳದ ಶಂಕಿತರನ್ನು ಹೋಟೆಲ್ ಮತ್ತು ಹಾಸ್ಟೆಲ್‌ಗಳಿಗೆ ಶಿಫ್ಟ್ ಮಾಡಲು  ನಿರ್ಧರಿಸಲಾಗಿದ್ದು, ಇದಕ್ಕಾಗಿ ಬೆಂಗಳೂರಿನ 16 ಹೋಟೆಲ್‌ಗಳನ್ನು ಬಳಕೆ  ಮಾಡಿಕೊಳ್ಳಲಾಗುತ್ತಿದೆ. ಸಿಲಿಕಾನ್  ಸಿಟಿಯ ಗಾಂಧಿನಗರ, ಜಯನಗರ, ಕೋರಮಂಗಲ, ಬಿಟಿಎಂ‌ ಲೇಔಟ್, ಸುಧಾಮನಗರ ಸೇರಿ ನಗರದ  ವಿವಿದೆಡೆಯ ಖಾಸಗಿ ಹೋಟೆಲ್‌ನಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿದೆ.
ಇನ್ನು,  ಈ ಹೋಟೆಲ್‌ಗಳಲ್ಲಿ 6 ಅಡಿ ಅಂತರದಲ್ಲಿ ಬೆಡ್ ವ್ಯವಸ್ಥೆ ಯೊಂದಿಗೆ, 24/7 ವೈದ್ಯ,  ಪ್ಯಾರಾ ಮೆಡಿಕಲ್ ಸ್ಟಾಫ್ , ಪಿಪಿಇ ಕಿಟ್ ಮತ್ತು ಔಷಧಗಳನ್ನೂ ಪೂರೈಕೆ ಮಾಡಲು ವ್ಯವಸ್ಥೆ  ಮಾಡಿಕೊಳ್ಳಲಾಗಿದ್ದು,ಎಲ್ಲಾ ಪ್ರಾಥಮಿಕ ಶಂಕಿತ ರನ್ನು ಕೂಡಲೇ ಹೋಟೆಲ್‌ಗೆ ಶಿಫ್ಟ್ ಮಾಡುವಂತೆ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.  ಇನ್ನು,  ಮುಂಜಾಗ್ರತಾ ಕ್ರಮವಾಗಿ ಹೋಟೆಲ್‌ನಲ್ಲಿ ಎಸಿ ರೂಂಗಳಲ್ಲಿ ಎಸಿ ಬಳಸದಿರಲೂ ಸೂಚನೆ  ನೀಡಲಾಗಿದ್ದು, ಇದರ ಜೊತೆಗೆ ಶಂಕಿತರನ್ನು ಹೋಟೆಲ್‌ಗೆ ಶಿಫ್ಟ್‌ ಮಾಡುವಾಗ  ಯಾವುದೇ  ಕಾರಣಕ್ಕೂ ಕೊರೊನಾ ಪಾಸಿಟಿವ್‌ ರೋಗಿಗಳನ್ನು ಸಾಗಿಸುವ ಅಂಬ್ಯುಲೆನ್ಸ್‌ನಲ್ಲಿ  ಸಾಗಿಸಬಾರದು ಎಂದು ವೈದ್ಯಕೀಯ ಸಿಬ್ಬಂದಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ. ಕರ್ನಾಟಕ  ವಿಪತ್ತು ನಿರ್ವಹಣಾ ಕೇಂದ್ರ ಹೋಟೆಲ್ ಬಾಡಿಗೆ ಸೆಟಲ್‌ಮೆಂಟ್‌ಗೆ ಕ್ರಮ  ಕೈಗೊಳ್ಳಲಿದ್ದು, ಕೆಲ ಕುಟುಂಬಗಳಲ್ಲಿ‌ ಹೋಮ್ ಕ್ವಾರೆಂಟೈನ್ ಕಡ್ಡಾಯವಾಗಿ  ಪಾಲಿಸುತ್ತಿಲ್ಲ. ಅಲ್ಲದೇ, ಸ್ಲಂಗಳಲ್ಲಿ ಹಾಗೂ ಚಿಕ್ಕ ಚಿಕ್ಕ ಮನೆ ಹಾಗೂ ಏರಿಯಾಗಳಲ್ಲಿ  ಹೋಮ್ ಕ್ವಾಂರೆಟೈನ್ ನಿಯಮ‌ ಪಾಲಿಸುತ್ತಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಈ ನಿರ್ಧಾರ  ಕೈಗೊಂಡಿದೆ  ಎಂದು ಆರೋಗ್ಯ ಹಾಗೂ ಕುಂಟುಬ ಕಲ್ಯಾಣ ಇಲಾಖೆ ಸಹ ನಿರ್ದೇಶಕ ಡಾ.‌ಪ್ರಕಾಶ್  ಕುಮಾರ್ ಮಾಹಿತಿ ನೀಡಿದ್ದಾರೆ.