ಅಬುದಾಬಿ, ನ 7: ಸಂಯುಕ್ತ ಅರಬ್ ಒಕ್ಕೂಟ( ಯುಎಇ) ಸಂವಿಧಾನದ ನಿಬಂಧನೆಗಳಂತೆ ಮುಂದಿನ ಐದು ವರ್ಷಗಳ ಅವಧಿಯ ಅಧ್ಯಕ್ಷರನ್ನಾಗಿ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ಅವರನ್ನು ಒಕ್ಕೂಟದ ಪರಮೋಚ್ಛ ಮಂಡಳಿ ಪುನರಾಯ್ಕೆಗೊಳಿಸಿದೆ. ಅಧ್ಯಕ್ಷ ಶೇಖ್ ಖಲೀಫಾ ವಿವೇಕಯುತ ನಾಯಕತ್ವದ ಮೇಲೆ ವಿಶ್ವಾಸ ಇರಿಸಿರುವ, ಒಕ್ಕೂಟದ ಸರ್ವೂಚ್ಛ ಮಂಡಳಿ, ಸಂಯುಕ್ತ ಅರಬ್ ಒಕ್ಕೂಟದ ಜನರ ಆಕಾಂಕ್ಷೆಗಳನ್ನು ಈಡೇರಿಸಲು, ಸಮೃದ್ದಿ ಹಾಗೂ ಅಭಿವೃದ್ದಿಯ ಯಶೋಗಾಥೆ ಮುಂದುವರಿಸುವಂತೆ ಹಾರೈಸಿದೆ ಎಂದು ಗಲ್ಫ್ ನ್ಯೂಸ್ ಗುರುವಾರ ವರದಿ ಮಾಡಿದೆ. ತಂದೆ ಶೇಖ್ ಝೆಯಾದ್ ಬಿನ್ ಸುಲ್ತಾನ್ ಅಲ್ ನಯಾನ್ ಸಾವಿನ ನಂತರ 2004ರ ನವಂಬರ್ 3ರಂದು ಶೇಖ್ ಖಲೀಫಾ ಅವರನ್ನು ಯುಎಇ ಅಧ್ಯಕ್ಷರನ್ನಾಗಿ ಒಕ್ಕೂಟದ ಸರ್ವೂಚ್ಛ ಮಂಡಳಿ ಚುನಾಯಿಸಿತ್ತು. ಅಧ್ಯಕ್ಷ ಖಲೀಫಾ ನವ ಸಂಯುಕ್ತ ಅರಬ್ ಒಕ್ಕೂಟದ ನಿರ್ಮಾಣಕಾರರಾಗಿದ್ದು, 70 ಹಾಗೂ 80ರ ದಶಕದಲ್ಲಿ ತಮ್ಮ ತಂದೆ ಶೇಖ್ ಝೆಯಾದ್ ಅವರೊಂದಿಗೆ ಸಾಕಷ್ಟು ಸುಧಾರಣೆಗೆ ಅಡಿ ಪಾಯಹಾಕಿದ್ದರು. ತಂದೆಯ ಸಾವಿನ ನಂತರ ನಾಯಕತ್ವ ವಹಿಸಿ ಒಕ್ಕೂಟದ ಅಭಿವೃದ್ದಿಯ ನಾಗಾಲೋಟವನ್ನು ಮುಂದುವರಿಸಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದೆ.