ಲೋಕದರ್ಶನ ವರದಿ
ಬೆಟಗೇರಿ 31: ಗ್ರಾಮದಲ್ಲಿ ಲಕ್ಷ್ಮೀದೇವಿಯ ಪೂಜೆ, ಆರಾಧನೆ, ಕುರಿ ಬೆದರಿಸುವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಣೆ ಮಾಡುವುದರ ಮೂಲಕ ಸ್ಥಳೀಯರು ವಿಭಿನ್ನ ವೈಭವ, ಸಡಗರದಿಂದ ದೀಪಾವಳಿ ಹಬ್ಬದ ಪಾಡ್ಯೆ ದಿನವನ್ನು ಮಂಗಳವಾರ ಅ.29 ರಂದು ಆಚರಿಸಿದರು.
ಸಾಯಂಕಾಲ 5.30 ಗಂಟೆಗೆ ಗ್ರಾಮದ ಕೆನರಾ ಬ್ಯಾಂಕ್ದ ಮುಂದಿರುವ ಬೆಟಗೇರಿ-ಕೌಜಲಗಿ ಮುಖ್ಯ ರಸ್ತೆಯ ಮೇಲೆ ಕಬ್ಬು, ಜೋಳದ ದಂಟು, ಅವರೆ ಹೂ ಗಳಿಂದ ಹಂಪ್ ನಿರ್ಮಿಸಿ ಪೂಜೆ, ನೈವೇದ್ಯ ಸಮರ್ಪಿಸಿ, ಊರಿನಲ್ಲಿರುವ ಎಲ್ಲ ಕುರಿಗಳನ್ನು ಒಂದಡೆ ಸೇರಿಸಿ ಕುರಿ ಬೆದರಿಸಿದರು. ಸ್ಥಳೀಯ ಮಕ್ಕಳು, ವೃದ್ಧರು, ಮಹಿಳೆಯರು, ಕುರಿಗಾಹಿಗಳು ಸೇರಿದಂತೆ ಊರಿನ ಹಿರಿಯರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇಲ್ಲಿಯ ಮನೆಗಳಲ್ಲಿ ಸಗಣಿಯಿಂದ ತಟ್ಟಿದ ಪಾಂಡವ(ಪಾಂಡ್ರವ್ವ)ರನ್ನು ಮನೆಯ ಮಾಳಗಿ ಮೇಲೆ ಕೂಡ್ರಿ (ಕಳುಹಿ)ಸಿದರು.
ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆ ತನಕ ಎಲ್ಲರ ಮನೆಗಳಲ್ಲಿ, ಜೀಪ್, ಟ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ದೇವಿಯ ಆರಾಧನೆ, ಪೂಜೆ ವೈಭವದಿಂದ ನಡೆದು, ಸ್ಥಳೀಯ ಎಲ್ಲ ದೇವಾಲಯಗಳಲ್ಲಿ ಪುರಜನರಿಂದ ಪೂಜಾ, ನೈವೇದ್ಯ ಸಮರ್ಪಿಸುವ ಕಾರ್ಯಕ್ರಮ ಜರುಗಿತು.
ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಎಲ್ಲ ದೇವಾಲಯಗಳಲ್ಲಿ ದೀಪೋತ್ಸವ, ಮನೆ ಮುಂದೆ ಬೆಳಕಿನಿಂದ ಬೆಳಗುವ ಹಣತೆಗಳ ಸಾಲು, ಮನೆ ಮೇಲೆ ರಂಗು ರಂಗಿನ ಆಕಾಶಬುಟ್ಟಿಗಳು ನೋಡುಗರ ಕಣ್ಮನ ಸೆಳೆದವು. ಎಲ್ಲರ ಮನೆ-ಮನಗಳಲ್ಲಿ ಸಂತಸ ಮಾನೆ ಮಾಡಿತ್ತು. ಮಕ್ಕಳು, ಹೆಣ್ಣುಮಕ್ಕಳು, ಪುರುಷರು ಸೇರಿದಂತೆ ಮನೆ ಮಂದಿಯಲ್ಲಾ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.