ನವದೆಹಲಿ, ಫೆ 10, ಮುಂಬೈನ ನೌಕಾಪಡೆಯ ರೆಸಿಡೆನ್ಸಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್ ಅಮೆರಿಕದ ಅತ್ಯುನ್ನತ ಶಿಖರ ಮೌಂಟ್ ಅಕೋಂಕೋವಾ ಹತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಶಿಖರ ಏರಿದ ಅತಿ ಚಿಕ್ಕ ವಯಸ್ಸಿನ ಬಾಲಕಿ ಎಂಬ ಅಪರೂಪದ, ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ ಎಂದೂ ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ. 6962 ಮೀಟರ್ ಎತ್ತರದ ಮೌಂಟ್ ಅಕೋಂಕೋವಾ ಪರ್ವತ ಏಷ್ಯಾದ ಹೊರಗಿನ ಅತಿ ಎತ್ತರದ ಪರ್ವತವಾಗಿದೆ. ಕಾಮ್ಯಾ ಫೆಬ್ರವರಿ 1ರಂದು ಈ ಪರ್ವತ ಏರಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾಳೆ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ. ಹಲವು ವರ್ಷಗಳ ಮಾನಸಿಕ ಹಾಗೂ ದೈಹಿಕ ಸಿದ್ಧತೆಯಿಂದ, ನಿರಂತರವಾಗಿ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ ಎಂದೂ ಆಕೆಯ, ಸಾಧನೆ, ಸಾಹಸವನ್ನೂ ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.