ಧಾರವಾಡ: 1400 ವರ್ಷಗಳ ಹಿಂದೆಯೇ ಶ್ರೀ ಶಂಕರ ಭಗವತ್ಪಾದರು ಜಾತ್ಯಾತೀತತೆ ಭಾವೈಕ್ಯತೆಗೆ ನಾಂದಿ ಹಾಕಿದ್ದರೆಂದು ಬಹುಶೃತ ವಿದ್ವಾಂಸ ಡಾ.ಪಾವಗಡ ಪ್ರಕಾಶರಾವ್ ಇಲ್ಲಿ ಹೇಳಿದರು.
ಅವರು ಇಲ್ಲಿಯ ಮಾಜಿ ಶಾಸಕ ವೈ.ಎಸ್ ಪಾಟೀಲ ಸ್ಮಾರಕ ಪ್ರತಿಷ್ಠಾನ ಏರಿ್ಡಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಶ್ರೀ ಶಂಕರಾಚಾರ್ಯರು ತಮ್ಮ ಚಿಕ್ಕ ವಯದಲ್ಲಿಯೇ ಕಾಶಿಯಲ್ಲಿ ಚಾಂಡಾಲನೊಬ್ಬನೊಂದಿಗೆ ನಡೆದ ಸಂಭಾಷಣೆಯನ್ನು ಎಳೆಎಳೆಯಾಗಿ ವಿಶ್ಲೇಷಿಸಿದ ಅವರು ಈ ಪ್ರಕರಣ ಚಾತ್ಯಾತೀತತೆಗೆ ಮಾದರಿಯಾಗಿದೆ. ಬ್ರಾಹ್ಮಣ ಮತ್ತು ಶೂದ್ರರಲ್ಲಿಯ ಆತ್ಮ ಒಂದೇ ಆಗಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಅವರು ಹೇಳಿದರು.
ಮೋದಿ ಸರ್ಕಾರ ಬಂದ ಮೇಲೆ ಶಂಕರ ಜಯಂತಿಯಂದು ತತ್ವಜ್ಞಾನಿ ದಿನಾಚರಣೆಯಾಗಿ ಆಚರಿಸುವುದು ಸಂತೋಷಕರ ವಿಷಯ. ಈ ಕಾರ್ಯಕ್ರಮ ನಡೆವ ಉತ್ತರಾಖಂಡದ ಕೇದಾರ ಇನ್ನುಮುಂದೆ ಮತ್ತಿಷ್ಟು ಯಾತ್ರಾರ್ಥಿಗಳೊಂದಿಗೆ ಜನಪ್ರಿಯಗೊಳ್ಳಲಿದೆ ಎಂದು ಅವರು ಹೇಳಿದರು.
ಶಂಕರ, ಮಧ್ವ, ರಾಮಾನುಜಾಚಾರ್ಯರು ಬೋಧಿಸಿದ ತತ್ವಗಳಲ್ಲಿ ವೈಚಾರಿಕವಾಗಿ ಹೆಚ್ಚು ಅಂತರವಿಲ್ಲ. ಆದರೆ ಅವುಗಳ ಪಾಲನೆಯಲ್ಲಿ ಈ ಮೂರು ಆಚಾರತ್ರಯರ ಅನುಯಾಯಿಗಳು ಪರಸ್ಪರ ಮತ್ಸರ ಮೇಲು, ಕೀಳು ತೋರಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಡಾ.ಪಾವಗಡ ಪ್ರಕಾಶರಾವ ಹೇಳಿ ವಿಷಾದಿಸಿದರು.
ಇದೇ ಕಾಲಕ್ಕೆ ದಿ.ಕೆ.ಜಿ ನಾಡಗೇರ ಅವರು ಬರೆದಿದ್ದ ಶಂಕರಾಚಾರ್ಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಪ್ರೊ.ದುಶ್ಯಂತ ನಾಡಗೇರ ಅವರು ಪುಸ್ತಕದ ಬಗ್ಗೆ ಮಾತನಾಡಿದರು. ಮಲ್ಲಸಜ್ಜನ ವ್ಯಾಯಾಮ ಸಂಸ್ಥೆಯ ನಿರ್ದೇಶಕ ಆನಂದ ನಾಡಿಗೇರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಡಿ.ಎಸ್ ರಾಜಪುರೋಹಿತ, ಪ್ರತಿಷ್ಠಾನದ ಟ್ರಸ್ಟಿ ಸಂಜಯ ಪಾಟೀಲ, ಅಧ್ಯಕ್ಷ ಚಂದ್ರಶೇಖರ ಅಮೀನಗಡ, ಕಾರ್ಯದರ್ಶಿ ಮನೋಜ ಪಾಟೀಲ, ದೀಪಕ ಆಲೂರ, ಶ್ರೀನಿವಾಸ ವಾಡಪ್ಪಿ ಮತ್ತಿತರರು ಪಾಲ್ಗೊಂಡಿದ್ದರು. ಮಧುಸೂದನ ಶಾಸ್ತ್ರಿ ಹಂಪಿಹೊಳಿ ಅವರು ಡಾ.ಪ್ರಕಾಶರಾವ್ ಅವರನ್ನು ಪರಿಚಯಿಸಿದರು. ದಾಮೋದರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ವೈ.ಎಸ್ ಪಾಟೀಲ ಸ್ಮಾರಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಎಡದಿಂದ ಬಲಕ್ಕೆ ಮನೋಜ ಪಾಟೀಲ, ಸಂಜಯ ಪಾಟೀಲ, ಮಧುಸೂದನ ಶಾಸ್ತ್ರಿ, ಡಾ.ಪಾವಗಡ ಪ್ರಕಾಶರಾವ್, ಡಿ.ಎಸ್ ರಾಜಪುರೋಹಿತ, ಪ್ರೊ. ದುಶ್ಯಂತ ನಾಡಗೌಡ, ದಾಮೋದರ ಹೆಗಡೆ, ಆನಂದ ನಾಡಿಗೇರ, ದೀಪಕ ಆಲೂರ ಇತರರು ಪಾಲ್ಗೊಂಡಿದ್ದರು.